
ಹಾಸನ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕಬ್ಬಡಿ ಪಂದ್ಯಾವಳಿಯಲ್ಲಿ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ್ದ ೨೨ ತಂಡಗಳು ಉತ್ತಮ ಪ್ರದರ್ಶನ ನೀಡಿ ಕ್ರೀಡಾಭಿಮಾನಿಗಳ ಗಮನಸೆಳೆದರು.
ಅಮೆಚೂರು ಬಾಡಿ ಬಿಲ್ಡರ‍್ಸ್ ಸಂಸ್ಥೆಯ ನಿರಂಜನ್ ರಾಜ್ ಮಾಧ್ಯಮದೊಂದಿಗೆ ಮಾತನಾಡಿ, ಜಿಲ್ಲಾ ಕ್ರೀಡಾ ಪರಿಷತ್ತುವತಿಯಿಂದ ೫೦ನೇ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕರಾದ ಆರ್.ಪಿ. ವೆಂಕಟೇಶ್ ಮೂರ್ತಿ ನೆರವೇರಿಸಿದ್ದು, ಜಿಲ್ಲಾ ಪಂಜ ಕುಸ್ತಿ ಸಂಸ್ಥೆ ಅಧ್ಯಕ್ಷರಾದ ಗಿರಿಗೌಡ, ಸಾಮಾಜಿಕ ಕಾರ್ಯಕರ್ತರಾದ ಗುರುಪ್ರಸಾದ್ ಕಾಮತ್ ಪಾಲ್ಗೊಂಡಿದ್ದರು.
ಈ ಕಬ್ಬಡಿ ಪಂದ್ಯಾವಳಿಯಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ೧೪ ಬಾಲಕರ ತಂಡಗಳು ಭಾಗವಹಿಸಿದ್ದು, ೮ ಬಾಲಕಿಯರ ತಂಡಗಳು ಸೇರಿ ಒಟ್ಟು ೨೨ ತಂಡಗಳು ಪಾಲ್ಗೊಂಡು ಉತ್ತಮ ಪ್ರದರ್ಶನವನ್ನು ನೀಡಿದೆ ಎಂದು ಹೇಳಿದರು.





