
*ಜೈವಿಕ ಗೊಬ್ಬರಗಳು ಹಾಗೂ ಅಣಬೆ ಬೇಸಾಯ*
ಹಾಸನದ ಕಾರೇಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಟೆಕ್ ಜೈವಿಕ ತಂತ್ರಜ್ಞಾನ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24 ರ ಅಂಗವಾಗಿ ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿಯ ಕುಡುಕುಂದಿ ಗ್ರಾಮದಲ್ಲಿ *ಜೈವಿಕ ಗೊಬ್ಬರಗಳು ಹಾಗೂ ಅಣಬೆ ಬೇಸಾಯದ* ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜೈವಿಕ ಗೊಬ್ಬರಗಳು ಸೂಕ್ಷ್ಮಜೀವಿಗಳನ್ನು ಒಳಗೊಂಡಿರುತ್ತದೆ. ಜೈವಿಕ ಗೊಬ್ಬರಗಳಾದ ರೈಜೋಬಿಯಂ, ಅಜೋಟೋಬ್ಯಾಕ್ಟರ್, ರಂಜಕ ಕರಗಿಸುವ ಜೀವಾಣು . ಜೈವಿಕ ಗೊಬ್ಬರಗಳ ಪ್ರಾಮುಖ್ಯತೆಗಳೆಂದರೆ ಮಣ್ಣಿನ ರಚನೆ ಮತ್ತು ಸಸ್ಯಗಳ ಇಳುವರಿಯನ್ನು ಸುಧಾರಿಸುವುದಲ್ಲದೆ,ಪರಿಸರ ಸ್ನೇಹಿ ಮತ್ತು ಕಡಿಮೆ ವೆಚ್ಚದಲ್ಲಿ ದೊರೆಯುತ್ತದೆ.ಸಸ್ಯ ರೋಗಗಳಿಗೆ ಕಾರಣವಾಗುವ ಮಣ್ಣಿನಲ್ಲಿರುವ ಅನೇಕ ಹಾನಿಕಾರಕ ಸೂಕ್ಷ್ಮ ಜೀವಿಗಳನ್ನು ಕೊಲ್ಲುತ್ತವೆ. ಜೈವಿಕ ಗೊಬ್ಬರಗಳು ನೈಸರ್ಗಿಕ ಗೊಬ್ಬರಗಳಾಗಿರುವುದರಿಂದ ಮಾಲಿನ್ಯಕಾರಕಗಳಿಂದ ಪರಿಸರವನ್ನು ರಕ್ಷಿಸುತ್ತದೆ.
ಜೈವಿಕ ಗೊಬ್ಬರಗಳನ್ನು ಬೀಜೋಪಚಾರ, ಸಸಿಗಳ ಬೇರನ್ನು ಅದ್ದುವುದು ಹಾಗೂ ಮಣ್ಣಿನ ಉಪಚಾರಕ್ಕಾಗಿ ಉಪಯೋಗಿಸಬಹುದು. 70g ಬೆಲ್ಲ ಅಥವಾ ಸಕ್ಕರೆ 1/4 ಲೀ ನೀರಿನಲ್ಲಿ ಕರಗಿಸಿ 15-20 ನಿಮಿಷಗಳ ಕಾಲ ಕುದಿಸಿ, ತಣ್ಣಗೆ ಮಾಡಿ ಈ ದ್ರಾವಣಕ್ಕೆ 200g ಜೀವಾಣು ಗೊಬ್ಬರವನ್ನು ಹಾಕಿ ಕಲಸಿ. ಒಂದು ಎಕರೆಗೆ ಬೇಕಾಗುವ ಬಿತ್ತನೆ ಬೀಜದ (ಮದ್ಯಮ ಗಾತ್ರದ ಸುಮಾರು 10ಕೆಜಿ ಬೀಜಕ್ಕೆ) ಮೇಲೆ ಸುರಿದು ಪ್ರತಿ ಬೀಜಕ್ಕು ಸಮನಾಗಿ ಅಂಟುವಂತೆ ಮಾಡಿ ಬಟ್ಟೆ ಅಥವ ಗೋಣಿ ಚೀಲದ ಮೇಲೆ ಹರಡಿ ನೆರಳಿನಲ್ಲಿ ಒಣಗಿಸಿದ ತಕ್ಷಣ ಬಿತ್ತನೆ ಮಾಡಬೇಕು .
ಒಂದು ಕೆಜಿ ಬೀಜಕ್ಕೆ ಸುಮಾರು 30-50ml ಅಂಟು ಬೇಕಾಗುತ್ತದೆ,ಬೀಜದ ಗಾತ್ರ ಹಾಗೂ ಉಪಯೋಗಿಸುವ ಪ್ರಮಾಣವನ್ನು ಆಧರಿಸಿ ಅಗತ್ಯಕ್ಕೆ ಅನುಗುಣವಾಗಿ ಜೈವಿಕ ಗೊಬ್ಬರ ಬಳಸುವುದು. ಸಸಿಗಳ ಬೇರನ್ನು ಒಂದು ಬಕೆಟ್ ನೀರಿನಲ್ಲಿ 2-2.5ಕೆಜಿ ಜೈವಿಕ ಗೊಬ್ಬರವನ್ನು ಹಾಕಿ ಕರಗಿಸುವುದು. ಇದಕ್ಕೆ ಮೊಳಕೆ ಗಿಡಗಳ ಬೇರನ್ನು ಅದ್ದಿ ಹಾಗೂ ಅದ್ದಿದ ತಕ್ಷಣವೇ ಅವುಗಳನ್ನು ಭೂಮಿಗೆ ನಾಟಿ ಮಾಡಬಹುದು.
ಮಣ್ಣಿನ ಉಪಚಾರಕ್ಕೆ ಒಂದು ಎಕರೆಗೆ ಬೇಕಾಗುವಷ್ಟು ಪುಡಿ ರೂಪದ (4ಕೆಜಿ) ಜೈವಿಕ ಗೊಬ್ಬರವನ್ನು (80ಕೆಜಿ) ಕೊಟ್ಟಿಗೆ ಗೊಬ್ಬರದೊಂದಿಗೆ ಮಿಶ್ರಣಮಾಡಿ ಬಿತ್ತನೆ ಸಾಲುಗಳಲ್ಲಿ ಹಾಕಬೇಕು,ಜೈವಿಕ ಗೊಬ್ಬರವನ್ನು ತಂಪು ಮಾಡಿದ ಅಂಟು ದ್ರಾವಣದಲ್ಲಿ ಮಿಶ್ರಣ ಮಾಡಬೇಕು. ಇವುಗಳನ್ನು ನೇರ ಬಿಸಿಲಿನ ಶಾಖಕ್ಕೆ ಮತ್ತು ಅತಿ ತಂಪಾದ ಸ್ಥಳಗಳಲ್ಲಿ ಗೊಬ್ಬರವನ್ನು ಶೇಖರಿಸಿ ಇಡಬಾರದು. ಅವಧಿ ಮುಗಿಯುವ ಮೊದಲೇ ಜೈವಿಕ ಗೊಬ್ಬರವನ್ನು ಬಳಸಬೇಕು.
ಭಾರತದಲ್ಲಿ ಹಲವಾರು ವಿಷಪೂರಿತ ಹಾಗೂ ತಿನ್ನುವ ಅಣಬೆಗಳು ಸ್ವಾಭಾಭಾವಿಕವಾಗಿ ಬೆಳೆಯುತ್ತವೆ. ತಿನ್ನುವ ಅಣಬೆಗಳು ಇತರೆ ತರಕಾರಿಗಳಿಗೆ ಹೋಲಿಸಿದರೆ ಹೆಚ್ಚು ಪೌಷ್ಠಿಕಾಂಶಗಳನ್ನು ಹೊಂದಿರುತ್ತದೆ. ಅಣಬೆಗಳಲ್ಲಿ ಹೇರಳವಾಗಿ ಪ್ರೋಟೀನ್ , ಜೀವಸತ್ವಗಳು, ಹೆಚ್ಚು ಸಾರಜನಕ ಮತ್ತು ಖನಿಜಗಳು ಹಾಗೂ ಸಕ್ಕರೆ ಮತ್ತು ಕಬ್ಬಿಣಾಂಶ ಇರುವುದರಿಂದ ಸಕ್ಕರೆ ಕಾಯಿಲೆ ಮತ್ತು ಹೃದಯ ಸಂಬಂಧಿತ ಕಾಯಿಲೆ ಇರುವವರಿಗೆ ಅಣಬೆ ಒಂದು ಒಳ್ಳೆಯ ಆಹಾರ .
ತಿನ್ನಲು ಯೋಗ್ಯವಾದ ಅಣಬೆಗಳು ಬಿಳಿ ಗುಂಡಿ ಅಣಬೆ(ಬಟನ್ ಮಶ್ರೂಮ್),ಭತ್ತದ ಹುಲ್ಲಿನ ಅಣಬೆ(ಪ್ಯಾಡಿ ಸ್ಟ್ರಾ ಮಶ್ರೂಮ್), ಹಾಲು ಅಣಬೆ(ಮಿಲ್ಕಿ ಮಶ್ರೂಮ್), ಚಿಪ್ಪಣಬೆ (ಆಯಸ್ಟರ್ ಮಶ್ರೂಮ್). ಒಣ ಭತ್ತದ ಹುಲ್ಲನ್ನು 3-5ಸೆಂ.ಮೀ. ಉದ್ದದ ತುಂಡುಗಳಾಗಿ ಕತ್ತರಿಸಿ. ಕತ್ತರಿಸಿದ ಹುಲ್ಲನ್ನು ಶುಚಿಯಾದ ನೀರಿನಲ್ಲಿ ನೆನಸಿ ನೀರನ್ನು ಬಸಿದು ನೆನಸಿದ ಹುಲ್ಲನ್ನು ಕುದಿಯುವ ನೀರಿನಲ್ಲಿ ಅರ್ಧ ಗಂಟೆಗಳ ಕಾಲ ಕುದಿಸಬೇಕು. ನೀರನ್ನು ಬಸಿದು ಬೇಯಿಸಿದ ಹುಲ್ಲನ್ನು ಕೊಠಡಿಯೊಳಗೆ ಶುಚಿಯಾದ ಜಾಗದಲ್ಲಿ ಹರಡಿ ಆರಲು ಬಿಡಬೇಕು. ನಂತರ ಪಾಲಿಥಿನ್ ಚೀಲಗಳನ್ನು ತೆಗೆದುಕೊಂಡು ಹುಲ್ಲನ್ನು ಹರಡಬೇಕು ಆನಂತರ ಒಂದು ಪದರ ಅಣಬೆ ಬೀಜವನ್ನು ಹರಡಬೇಕು ಹೀಗೆ ಪದರ ಪದರವಾಗಿ ಹುಲ್ಲು ಮತ್ತು ಅಣಬೆ ಬೀಜಗಳನ್ನು ಹಾಕಿ ಚೀಲವನ್ನು ತುಂಬಬೇಕು .
ತುಂಬಿದ ಚೀಲದ ಬಾಯಿಯನ್ನು ನೂಲಿನ ದಾರದಿಂದ ಅಥವಾ ರಬ್ಬರ್ ಬ್ಯಾಂಡ್ ನಿಂದ ಕಟ್ಟಬೇಕು ತುಂಬಿದ ಚೀಲದ ಕೆಳಭಾಗದಲ್ಲಿ ಸಣ್ಣ ರಂಧ್ರಗಳನ್ನು ಮಾಡಿ ಹೆಚ್ಚಿನ ನೀರು ಬಸಿದು ಹೋಗವಂತೆ ಮಾಡಿ ಚೀಲದ ಮೇಲ್ಭಾಗದಲ್ಲಿ ರಂಧ್ರಗಳನ್ನು ಮಾಡಿ ಗಾಳಿಯಾಡುವಂತೆ ಮಾಡಬೇಕು. ಹೀಗೆ ಸಿದ್ಧಪಡಿಸಿದ ಅಣಬೆ ಚೀಲವನ್ನು ಅಣಬೆ ಬೆಳೆಸುವ ಕೋಣೆಯಲ್ಲಿ ಕಪಾಟುಗಳ ಮೇಲೆ ಜೋಡಿಸಿ 18 – 20 ದಿನಗಳ ಕಾಲ ಬೆಳೆಯಲು ಬಿಡಬೇಕು.ಈ ಸಮಯದಲ್ಲಿ ಸುಮಾರು 25 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶವನ್ನು ಕಾಪಾಡಬೇಕು.
20 ದಿನಗಳ ನಂತರ ಅಣಬೆಯ ತಂತುಗಳು ಹುಲ್ಲಿನಲ್ಲಿ ಬೆಳೆದು ಗಟ್ಟಿಯಾಗುತ್ತವೆ. ಈ ಸಮಯದಲ್ಲಿ ಪಾಲಿಥಿನ್ ಚೀಲವನ್ನು ಕತ್ತರಿಸಿ ಹುಲ್ಲಿನ ಪಿಂಡಿಗಳನ್ನು ತೆಗೆದು ಕಪಾಟುಗಳ ಮೇಲೆ ಸಾಲಾಗಿ ಜೋಡಿಸಿ ದಿನಕ್ಕೆ 2 -3 ಬಾರಿ ಶುದ್ಧವಾದ ನೀರನ್ನು ಸಿಂಪಡಿಸುತ್ತಿರಬೇಕು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸಹಾಯಕ ಪ್ರಾದ್ಯಾಪಕರಾದ ಡಾ. ಭರತ್ ಪ್ರಸಾದ್ ಸಿ.ಟಿ ಜೈವಿಕ ತಂತ್ರಜ್ಞಾನ ವಿಭಾಗ ಹಾಗೂ ಡಾ. ವಾಘಮಾರೆ ವಿಜಯಕುಮಾರ ವೀರಪ್ಪ ಸಹಾಯಕ ಪ್ರಾಧ್ಯಾಪಕರು, ಕೃಷಿ ಸೂಕ್ಷ್ಮಜೀವಶಾಸ್ತ್ರ ವಿಭಾಗ ಇವರು ಜೈವಿಕ ಗೊಬ್ಬರ ಹಾಗೂ ಅಣಬೆ ಬೇಸಾಯದ ಪ್ರಾಮುಖ್ಯತೆ, ಉಪಯೋಗಗಳ ಬಗ್ಗೆ ತಿಳಿಸಿದರು.ಕಾರ್ಯಕ್ರಮಕ್ಕೆ ಆಗಮಿಸಿದ ರೈತರಾದ ಶಿವಣ್ಣ, ಟಿ ದೇವರಾಜು, ಹರೀಶ್ ಗ್ರಾಮದ ಮುಂತಾದವರು ಪಾಲ್ಗೊಂಡಿದ್ದರು.


