
*ಡ್ರೋನ್ ಪದ್ಧತಿ ಪ್ರಾತ್ಯಕ್ಷಿಕೆ ಹಾಗೂ ಕೃಷಿಯಲ್ಲಿ ಜೈವಿಕ ಪೀಡೆನಾಶಕಗಳ ಮಹತ್ವ*
ಹಾಸನದ ಕಾರೇಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್. ಸಿ (ಆನರ್ಸ್)ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24 ರ ಅಂಗವಾಗಿ ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿಯ ಕುಡುಕುಂದಿ ಗ್ರಾಮದಲ್ಲಿ *ಡ್ರೋನ್ ಪದ್ಧತಿ ಪ್ರಾತ್ಯಕ್ಷಿಕೆ ಹಾಗೂ ಕೃಷಿಯಲ್ಲಿ ಜೈವಿಕ ಪೀಡೆನಾಶಕಗಳ ಮಹತ್ವ* ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಕೃಷಿ ಚಟುವಟಿಕೆಗಳು ಆಧುನಿಕರಣಗೊಳ್ಳುತ್ತಿರುವ ಈ ಕಾಲದಲ್ಲಿ ಡ್ರೋನ್ ಮೂಲಕ ರಾಸಾಯನಿಕ ಸಿಂಪಡನೆ ರೈತರಿಗೆ ಪರಿಚಯವಾಗಬೇಕಿದೆ. ಹಾಗಾಗಿ ಕೃಷಿ ವಿಜ್ಞಾನ ಕೇಂದ್ರ ಕಂದಲಿ, ಅವರ ನೇತೃತ್ವದಲ್ಲಿ ಡ್ರೋನ್ ಮೂಲಕ ರಾಸಾಯನಿಕ ಸಿಂಪಡಿಸುವುದನ್ನು ರೈತರಿಗೆ ಪರಿಚಯಿಸಿದರು.
ಈ ಸಂದರ್ಭದಲ್ಲಿ ಡಾ|| ಶ್ರೀನಿವಾಸ ದೇಶಪಾಂಡೆ ಕೃಷಿ ವಿಜ್ಞಾನಿ , ಕೃಷಿ ವಿಜ್ಞಾನ ಕೇಂದ್ರ , ಇವರು ಮಾತನಾಡಿ ರೈತರಿಗೆ ಆಧುನಿಕ ಕೃಷಿ, ಡ್ರೋನ್ ಮೂಲಕ ರಾಸಾಯನಿಕ ಸಿಂಪಡನೆಯ ಉಪಯೋಗಗಳು, ಆರ್ಥಿಕತೆ ಮುಂತಾದ ವಿಷಯಗಳ ಕುರಿತು ಮಾತನಾಡಿದರು.
ಜೈವಿಕ ಪೀಡೆನಾಶಕಗಳು ಸಸ್ಯ ರೋಗಾಣು ನಿಯಂತ್ರಿಸುವ ಸೂಕ್ಷ್ಮಜೀವಿಗಳಾಗಿವೆ.ರಾಸಾಯನಿಕ ಪೀಡೆನಾಶಕಗಳು ಪರಿಸರ ಮತ್ತು ಮಾನವ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ ಹಾಗಾಗಿ ಜೈವಿಕ ಪೀಡೆನಾಶಕಗಳ ಬಳಕೆ ಮುಂದಿನ ದಿನಗಳಲ್ಲಿ ಅವಶ್ಯಕತೆ ಇದೆ.ಪ್ರಮುಖ ಜೈವಿಕ ಪೀಡೆನಾಶಕಗಳಾದ ಟ್ರೈಕೋಡರ್ಮ, ಮೆಟರೈಝಿಯಂ ಅನಿಸೋಪಿಲೇ, ಬಿವೇರಿಯಾ ಬಸ್ಸಿಯಾನ, ಲೆಕಾನಿಸಿಲಿಯಂ ಲೆಕಾನಿ ಮುಂತಾದವುಗಳ ಬಳಕೆ ಹಾಗೂ ಉಪಯೋಗಗಳನ್ನು ತಿಳಿಸಿದರು.
ಜೈವಿಕ ಪೀಡೆ ನಾಶಕಗಳನ್ನು ಬೀಜೋಪಚಾರ, ಫರೋ ಅಪ್ಲಿಕೇಶನ್,ಟ್ಯೂಬರ್/ರೈಜೋಮ್ ಕಟಿಂಗ್ ಚಿಕಿತ್ಸೆಗಳಿಗೆ ಉಪಯೋಗಿಸಬಹುದು.ಜೈವಿಕ ಪೀಡೆನಾಶಕಗಳು ರೋಗದ ತೀವ್ರತೆಯನ್ನು,ರಾಸಾಯನಿಕ ಶಿಲೀಂಧ್ರನಾಶಕಗಳ ಬಳಕೆಯನ್ನು ಹಾಗೂ ರಾಸಾಯನಿಕ ಕೀಟನಾಶಕದಿಂದ ಅನಪೇಕ್ಷಿತ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಸಮಗ್ರ ರೋಗ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿ ಬಳಕೆದಾರರಿಗೆ ಮತ್ತು ರೈತ ಸಮುದಾಯಕ್ಕೆ ಸುರಕ್ಷಿತವಾಗಿದೆ ಅಲ್ಲದೆ ಬೆಳೆಗಳು ಮತ್ತು ಮಣ್ಣಿಗೆ ನೈಸರ್ಗಿಕ ದೀರ್ಘಾವಧಿಯ ಪ್ರತಿರಕ್ಷೆಯನ್ನು ಒದಗಿಸುತ್ತದೆ.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ|| ಸುನೀತಾ ಟಿ. ಆರ್ ರವರು ವಿವಿಧ ಜೈವಿಕ ಪೀಡೆನಾಶಕಗಳು ಹಾಗೂ ಅಸ್ತ್ರಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಮದ ರೈತರಾದ ಹೊನ್ನೇಗೌಡ, ದೇವರಾಜ್ ಗೌಡ, ಮಳಲಿ ಗೌಡ, ಸುರೇಶ ಗೌಡ, ಶಶಿಕಲಾ ಮುಂತಾದವರು ಪಾಲ್ಗೊಂಡಿದ್ದರು.


