ಹಾಸನ: ನಗರ ಬಸ್ ನಿಲ್ದಾಣದ ಪಕ್ಕ ಕಾನೂನು ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಆ ಸ್ಥಳದಲ್ಲಿ ಸುಗಮ ಸಂಚಾರಕ್ಕೆ ಮೀಸಲಿಡುವಂತೆ ಆಗ್ರಹಿಸಿ ಬಿಜೆಪಿ ಪಕ್ಷದಿಂದ ಡಿಸಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು.

ನಗರದ ಹೃದಯ ಭಾಗದಲ್ಲಿರುವ ಸಿಟಿ ಬಸ್ ನಿಲ್ದಾಣದ ಪಕ್ಕ ಈ ಹಿಂದೆ ಟಾಂಗ ನಿಲ್ದಾಣವಾಗಿ ಅದರಲ್ಲಿ ೫-೬ ಕುದುರೆ ಗಾಡಿಗಳನ್ನು ಕಟ್ಟಲಾಗುತ್ತಿತ್ತು. ನಗರ ಬೆಳದಂತೆ ವಾಹನ ದಟ್ಟಣೆ ಹೆಚ್ಚಾಗಿದ್ದು, ಸಿಟಿ ಬಸ್ ನಿಲ್ದಾಣದ ಪಕ್ಕ ವಾಹನ ದಟ್ಟಣೆ ತುಂಬಾ ಹೆಚ್ಚಾಗಿದೆ. ಟಾಂಗಾ ನಿಲ್ದಾಣದಲ್ಲಿ ಸುಮಾರು ಹತ್ತರಿಂದ ಹನ್ನೆರಡು ಕುದುರೆ ಗಾಡಿಗಳಿದ್ದು, ಅದರ ಉಪಯೋಗ ಈಗ ಯಾರು ಮಾಡುತ್ತಿಲ್ಲ. ಕೇವಲ ಕುದುರೆಗಳನ್ನ ಟಾಂಗಾ ನಿಲ್ದಾಣದಲ್ಲಿ ನಿಲ್ಲಿಸಿ, ಆ ಸ್ಥಳವನ್ನು ಜೂಜು ಮಟ್ಕಾ ಮತ್ತು ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ ಎಂದು ದೂರಿದರು.

ಮೈಸೂರಿನಲ್ಲಿರುವ ಕುದುರೆ ಗಾಡಿಗಳು ತುಂಬಾ ಚೆನ್ನಾಗಿದ್ದು, ನಗರದ ಸುತ್ತ ಓಡಾಡಲು ಕುದುರೆ ಗಾಡಿಗಳನ್ನು ಬಳಸುವುದು ಉಂಟು. ಆದರೆ ಹಾಸನದಲ್ಲಿ ಆ ಕುದುರೆ ಗಾಡಿಗಳನ್ನು ಕೇವಲ ಸರಕು ಸಾಮಗ್ರಿಗಳನ್ನು ಹೋರಲು ಬಳಸಲಾಗುತ್ತಿದೆ. ಆದ್ದರಿಂದ ಕುದುರೆ ಗಾಡಿಗಳ ಅವಶ್ಯಕತೆ ಇವತ್ತಿನ ದಿನದಲ್ಲಿ ಇರುವುದಿಲ್ಲ ಮತ್ತು ಸಿಟಿ ಬಸ್ ನಿಲ್ದಾಣದ ಪಕ್ಕ ವಾಹನದಟ್ಟಣೆ ಜಾಸ್ತಿ ಇರುವುದರಿಂದ ಆ ಸ್ಥಳದಲ್ಲಿ ರಸ್ತೆಯನ್ನು ಅಗಲ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಇಲ್ಲವೇ ಪಾರ್ಕಿಂಗ್ ವ್ಯವಸ್ಥೆಗೆ ಬಳಸಿಕೊಳ್ಳುವುದು ಸೂಕ್ತ ಎಂದು ನಾಗರೀಕರ ಅಭಿಪ್ರಾಯ ಎಂದರು.

ಈಗ ಟಾಂಗ ನಿಲ್ದಾಣದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಕಟ್ಟಡ ಮೂಲ ನಕ್ಷೆಯ ಪ್ರಕಾರ ಇರುವುದಿಲ್ಲ. ಕುದುರೆ ನಿಲ್ಲಿಸುವ ಜಾಗದಲ್ಲಿ ಕಿಟಕಿಗಳಿರಬೇಕು. ಕಿಟಕಿಗಳ ವ್ಯವಸ್ಥೆಯು ಕೂಡ ಮಾಡಿಲ್ಲ ಮತ್ತು ಟಾಂಗಾ ನಿಲ್ದಾಣದ ಮೇಲೆ ಮತ್ತೊಂದು ಮಹಡಿಯನ್ನು ಮಾಡಿ ಅಲ್ಲಿ ಕಮರ್ಷಿಯಲ್ ಮಳಿಗೆಗಳನ್ನು ಮಾಡುವುದು ಮತ್ತು ಕಟ್ಟಡದ ವಿನ್ಯಾಸ ಗುಂಬಜ್ ರೀತಿಯಲ್ಲಿ ಮಾಡಿ ಅದಕ್ಕೆ ಟಿಪ್ಪು ಸುಲ್ತಾನ್ ಟಾಂಗ ನಿಲ್ದಾಣ ಎಂದು ಹೆಸರಿಡಲಾಗುವುದು ಎಂಬುದನ್ನು ಸ್ಥಳೀಯ ರಸ್ತೆ ಬದಿ ವ್ಯಾಪಾರಸ್ಥರು, ಸಾರ್ವಜನಿಕರು ತಿಳಿಸಿದ್ದಾರೆ ಎಂದು ಆರೋಪಿಸಿದರು.

ಮೂಲ ನಕ್ಷೆಯ ಪ್ರಕಾರ ಟಾಂಗಾ ನಿಲ್ದಾಣಕ್ಕೆ ನೀಡಿರುವ ಸ್ಥಳಕ್ಕಿಂತ ಹೆಚ್ಚು ಸ್ಥಳವನ್ನು ಬಳಸಲಾಗುತ್ತಿದೆ. ಕಾನೂನು ಉಲ್ಲಂಘನೆ ಮಾಡಿ, ನಗರಸಭೆಯ ಹೆಚ್ಚುವರಿ ಜಾಗವನ್ನು ಬಳಸಲು ಅವರಿಗೆ ಯಾರು ಅನುಮತಿ ನೀಡಿರುವುದು ಎಂಬುದಕ್ಕೆ ಜಿಲ್ಲಾಡಳಿತ ಉತ್ತರ ಕೊಡಬೇಕಾಗಿದೆ. ಟಾಂಗ ನಿಲ್ದಾಣವನ್ನು ಬೇರೆ ಕಡೆಗೆ ಸ್ಥಳಾಂತರಿಸಿ, ಆ ಸ್ಥಳದಲ್ಲಿ ಸುಗಮ ಸಂಚಾರಕ್ಕೆ ರಸ್ತೆ ಅಗಲೀಕರಣ ಮಾಡಬಹುದು ಇಲ್ಲವೇ ಪಾರ್ಕಿಂಗ್ ಗೆ ಆ ಜಾಗವನ್ನು ಮೀಸಲಿಡಬೇಕಾಗಿ ಹಾಸನ ನಗರ ಬಿಜೆಪಿ ಆಗ್ರಹಿಸುತ್ತದೆ. ತಾವುಗಳು ಮೇಲೆ ಹೇಳಿರುವ ಅಂಶಗಳನ್ನು ಗಮನಿಸಿ ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನು ಈ ಕೂಡಲೇ ನಿಲ್ಲಿಸಲು ತಾವು ಆದೇಶಿಸಬೇಕಾಗಿ ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯ ಸೂಕ್ತ ಕ್ರಮವನ್ನು ಕೈಗೊಳ್ಳಬೇಕಾಗಿ ಆಗ್ರಹಿಸಿ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಆರ್. ಮೋಹನ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ನಗರಸಭೆ ಸದಸ್ಯ ರಕ್ಷಿತ್, ದಯಾನಂದ್, ನಾಗೇಶ್, ನಾರಾಯಣ್, ಚನ್ನಕೇಶವ, ವಕ್ತಾರರಾದ ದೇವರಾಜೇಗೌಡ, ಪ್ರೀತಿ ವರ್ಧನ್, ಮಹಿಳಾ ಮೋರ್ಚಾ ಅಧ್ಯಕ್ಷೆ ರತ್ನಪ್ರಕಾಶ್, ವೇಧವತಿ, ಲಾವಣ್ಯ, ವಿಜಯಲಕ್ಷ್ಮಿ ಅಂಜನಪ್ಪ, ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *