ಸಕಲೇಶಪುರ : ಸುಭಾಷ್ ಮೈದಾನವನ್ನು ಅನ್ಯ ಉದ್ದೇಶಗಳಿಗೆ ಕೊಡಬಾರದು ಎಂದು ಆಗ್ರಹಿಸಿ ಸುಭಾಷ್ ಮೈದಾನ ಹಿತರಕ್ಷಣಾ ವೇದಿಕೆ ವತಿಯಿಂದ ಸಕಲೇಶಪುರದಲ್ಲಿ ಉಪವಿಭಾಗಾಧಿಕಾರಿ ಕಛೇರಿಗೆ ಮನವಿ ಸಲ್ಲಿಸಲಾಯಿತು.

ಪಟ್ಟಣದ ಹೃದಯ ಭಾಗದಲ್ಲಿ ಕ್ರೀಡಾಪಟುಗಳಿಗಾಗಿ ಇರುವ ಏಕೈಕ ಮೈದಾನವಾದ ಸುಭಾಷ್ ಮೈದಾನವನ್ನು ಮುಂಬರುವ ಜನವರಿ 6 ರಂದು ಬೆಳೆಗಾರರ ಸಂಘದಿಂದ ನಡೆಯಲಿರುವ ಕೃಷಿ ಮೇಳ ಕಾರ್ಯಕ್ರಮಕ್ಕೆ ನೀಡುತ್ತಿರುವುದು ಸರಿಯಲ್ಲ, ಈಗಾಗಲೆ ಕಳೆದ ನವೆಂಬರ್ ತಿಂಗಳಲ್ಲಿ ಇದೇ ಮೈದಾನದಲ್ಲಿ ಪಟಾಕಿ ಅಂಗಡಿಗಳ ವ್ಯಾಪಾರಕ್ಕೆ ಅವಕಾಶ ನೀಡಿದ ಸಂರ್ಧಭದಲ್ಲಿ ಮೈದಾನದ ರನ್ನಿಂಗ್ ಟ್ರ್ಯಾಕ್ ಹದಗೆಟ್ಟಿ ಹೋಗಿದೆ.

ಇದೀಗ ಕೃಷಿ ಮೇಳದ ಹೆಸರಿನಲ್ಲಿ ನೂರಾರು ಶೆಡ್‌ಗಳು ಹಾಗೂ ಶಾಮಿಯಾನವನ್ನು ಹಾಕುವುದರಿಂದ ಮೈದಾನ ಸಂಪೂರ್ಣವಾಗಿ ಹದಗೆಡುತ್ತದೆ ಅಲ್ಲದೆ 5 ಸಾವಿರಕ್ಕೂ ಹೆಚ್ಚು ಜನ ಇಲ್ಲಿ ಸೇರುವ ಸಾಧ್ಯತೆಯಿರುವುದರಿಂದ ಮೈದಾನದಲ್ಲಿ ಮೈದಾನ ಸಂಪೂರ್ಣವಾಗಿ ಸಾವಿರಾರು ವಾಹನಗಳು ಬಂದು ಗುಂಡಿಮಯವಾಗುವುದರಲ್ಲಿ ಅನುಮಾನವಿಲ್ಲ.

ಕೃಷಿ ಮೇಳದಂತಹ ಕಾರ್ಯಕ್ರಮಕ್ಕೆ ನಾವು ವಿರೋಧ ಮಾಡುತ್ತಿಲ್ಲ, ಇಲ್ಲಿ ದಿನನಿತ್ಯ ಕ್ರಿಕೆಟ್, ಪುಟ್ಬಾಲ್, ಬಾಡ್ಮಿಂಟನ್, ರನ್ನಿಂಗ್ ಅಭ್ಯಾಸ ಮಾಡಲು ನೂರಾರು ಕ್ರೀಡಾಪಟುಗಳು ಬರುತ್ತಾರೆ.

ಅಲ್ಲದೆ ಹಲವಾರು ಮಂದಿ ವಾಯುವಿಹಾರಕ್ಕೆ ಸಹ ಬರುತ್ತಾರೆ. ಕ್ರೀಡಾಪಟುಗಳಿಗಾಗಿ ಇರುವ ಈ ಮೈದಾನವನ್ನು ಕ್ರೀಡೆಗಾಗಿಯೆ ಮೀಸಲಿಡಬೇಕು. ಒಂದು ಬಾರಿ ಅನ್ಯ ಉದ್ದೇಶಗಳಿಗೆ ಈ ಮೈದಾನವನ್ನು ನೀಡಿದರೆ ಇದೇ ರೀತಿ ಇತರರಿಗೂ ಮೈದಾನವನ್ನು ನೀಡಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಮಾನ್ಯ ಶಾಸಕರು, ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್ ಇತ್ತ ಗಮನವರಿಸಿ ಯಾವುದೆ ಕಾರಣಕ್ಕೂ ಕೃಷಿ ಮೇಳಕ್ಕೆ ಈ ಮೈದಾನದಲ್ಲಿ ಮಾಡಲು ಅವಕಾಶ ಕೊಡಬಾರದು.

ಒಂದು ವೇಳೆ ಮನವಿಗೆ ಮೀರಿ ಮೈದಾನದಲ್ಲಿ ಕೃಷಿ ಮೇಳಕ್ಕೆ ಅವಕಾಶ ಕೊಟ್ಟಲ್ಲಿ ಉಪವಿಭಾಗಾಧಿಕಾರಿ ಆವರಣದಲ್ಲಿ ಉಪವಾಸ ಸತ್ಯಾಗ್ರಹ ಮಾಡಲಾಗುತ್ತದೆ ಎಂದು ಈ ಮೂಲಕ ಕ್ರೀಡಾಪಟುಗಳು ಎಚ್ಚರಿಸಿ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *