
ಅರಸೀಕೆರೆ : ತೆಂಗು ಅರಸೀಕೆರೆ ತಾಲೂಕಿನ ಪ್ರಮುಖ ಬೆಳೆ. ಬಹುತೇಕ ರೈತರ ಆದಾಯದ ಮೂಲವಾಗಿದೆ ಈ ಕಲ್ಪವೃಕ್ಷ. ಈ ತೆಂಗು ಬೆಳೆಗೆ ಬಿಳಿನೊಣದಿಂದ ಹರಡುವ ಕರಿಮಸಿರೋಗವು ಬೆಳೆಗಾರರನ್ನು ಚಿಂತಾಜನಕವಾಗಿಸಿದೆ.
ಈ ರೋಗಕ್ಕೆ ಪರಿಹಾರರ್ಥವಾಗಿ ಭಾಧೀತ ತೆಂಗಿನ ಮರಗಳಿಗೆ ಬೇವಿನ ಎಣ್ಣೆ ಸಿಂಪಡನೆ ಮಾಡಿ ನಿರಾಳರಾಗಿದ್ದಾರೆ ಪ್ರದೀಪ್.
ಹೌದು…….. ಪ್ರದೀಪ್ ರವರು ಅರಸೀಕೆರೆ ತಾಲೂಕು ಗಂಡಸಿ ಹೋಬಳಿ ಕುಡುಕುಂದಿ ಗ್ರಾಮದ ಉತ್ಸಾಹಿ ರೈತ. ಆಳಾಗಿ ದುಡಿ ಅರಸನಾಗಿ ಉಣ್ಣು ಎಂಬುವವರು ಕೃಷಿಯನ್ನೇ ಪ್ರಮುಖ ಆದಾಯದ ಮೂಲವಾಗಿಸಿಕೊಂಡಿರುವ ಪ್ರದೀಪ ರವರು
ಎಕರೆ ಜಮೀನನ್ನು ಹೊಂದಿದ್ದು, ತೆಂಗು ಇವರ ಪ್ರಮುಖ ಬೆಳೆ. ತಮ್ಮ ಒಟ್ಟಾರೆ 12 ಎಕರೆ ಜಮೀನಿನ ಜಾಗದಲ್ಲಿ 10ಎಕರೆ ತೆಂಗನ್ನೇ ಬೆಳೆದು ಆದಾಯ ತರುತ್ತಾರೆ. ಆದರೆ ಈ ತೆಂಗಿನ ಬೆಳೆಗೆ ಬಿಳಿನೋಣದ ಭಾದೆಯಿಂದ ಕರಿಮಸಿ ರೋಗ ಬಂದಾಗ ಪ್ರದೀಪ್ ರವರು ಕಂಗಲಾದರು.
ಬಿಳಿನೊಣದಿಂದ ಹೊರಬರುವ ಅಂಟುದ್ರವದಿಂದ ಕ್ಯಾಪ್ನೋಡಿಯಂ ಎಂಬ ಶಿಲಿಂಧ್ರವು ಬೆಳವಣಿಗೆಗೊಂಡು ಗರಿಗಳ ಮೇಲ್ಮ್ಲೈ ಕರಿಮಸಿಯಂತಹ ರಚನೆಯಿಂದ ಆವ್ರುತವಾಗುತ್ತದೆ. ಇದರಿಂದ ದ್ಯುತಿಸಂಶ್ಲೇಷಣೆ ಕ್ರಿಯೆ ಕುಂಠಿತಗೊಂಡು ಇಳುವರಿ ಕಡಿಮೆಯಾಗುತ್ತದೆ.
ತಮ್ಮ ಬೆಳೆಗೆ ತಗಲಿರುವ ಈ ಸಮಸ್ಯೆಯಿಂದ ಚಿಂತಾಜನಕರಾದ ಪ್ರದೀಪ್ ರವರಿಗೆ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರಕ್ಕೆ ಬಂದ ಕೃಷಿ ಮಹಾವಿದ್ಯಾಲಯ ಕಾರೇಕೆರೆ ಹಾಸನದ ವಿದ್ಯಾರ್ಥಿಗಳ ಗಮನಕ್ಕೆ ತಂದರು. ವಿದ್ಯಾರ್ಥಿಗಳು ತಮ್ಮ ಕೃಷಿ ಕೀಟಶಾಸ್ತ್ರ ವಿಭಾಗದ ಪ್ರಾಧ್ಯಪಕರಾದ ಡಾ|| ಬಿ. ಎಸ್ ಬಸವರಾಜು ರವರ ಸಲಹೆಯ ಮೇರೆಗೆ ಬೇವಿನ ಎಣ್ಣೆ ಸಿಂಪಡಿಸಲು ಹೇಳಿದರು.
ಬೇವಿನ ಎಣ್ಣೆಯೂ ಒಂದು ಜೈವಿಕ ಪೀಡನಾಶಕವಾಗಿದ್ದು, ಕೀಟಗಳಿಂದ ಬರುವ ರೋಗಭಾದೆ ನಿರ್ವಹಣೆಗೆ ಸಹಾಯಕವಾಗಿದೆ. ಮೊದಲು ಒಂದು ಮರಕ್ಕೆ ಬೇವಿನ ಎಣ್ಣೆಯನ್ನು ಸಿಂಪಡನೆ ಮಾಡಿದ ಪ್ರದೀಪ್ ರವರು ಐದು ದಿನದ ನಂತರ ಸಿಂಪಡನೆಗೆ ಮಾಡಿದ ಮರದಲ್ಲಿ ಕೀಟಭಾದೆಯು ಗಮನೀಯವಾಗಿ ಕಡಿಮೆಯಾಗಿರುವುದನ್ನು ಕಂಡರು.
ನಂತರ ಉತ್ತಮ ಫಲಿತಾಂಶವನ್ನು ಪ್ರತ್ಯಕ್ಷವಾಗಿ ಕಂಡ ಪ್ರದೀಪ್ ರವರು ತಮ್ಮ ತೋಟದ ಎಲ್ಲ ತೆಂಗಿನ ಮರಗಳಿಗೆ ಸಿಂಪಡನೆ ಮಾಡುವಲ್ಲಿ ಯಶಸ್ವಿಯಾದರು.
ತಮ್ಮ ನೆರೆಹೋರೆಯ ತೆಂಗು ಬೆಳೆಗಾರರಿಗೂ ಇದನ್ನು ಸೂಚಿಸಿ ಕೃಷಿ ವಿದ್ಯಾರ್ಥಿಗಳಿಗೆ ಧನ್ಯವಾದ ತಿಳಿಸಿದರು.


