ಅರೇಹಳ್ಳಿ: ರೋಟರಿ ಸಂಸ್ಥೆಯು ಸಾಮಾಜಿಕ ಕಾರ್ಯಗಳ ಜೊತೆಗೆ ಶಿಕ್ಷಣ ಕೇತ್ರದಲ್ಲೂ ಕ್ರಾಂತಿ ಮಾಡುತ್ತಿದೆ ಎಂದು ಲೇಖಕ ಹಾಗೂ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಧನಂಜಯ ಜೀವಾಳ ಹೇಳಿದರು.

ಬೇಲೂರು ತಾಲೂಕಿನ ಅರೇಹಳ್ಳಿಯ ರಾಮನಗರದಲ್ಲಿರುವ ರೋಟರಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಾಂಸ್ಕೃತಿಕ ವೈಭವ-2024 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,

ನಾವು ಚಿಕ್ಕವರಾಗಿದ್ದ ವೇಳೆ ಕಲಿಕೆಗೆ ಬಳಸುತ್ತಿದ್ದ ವಸ್ತುಗಳನ್ನು ಬಿಸಾಡುತ್ತಿರಲಿಲ್ಲ. ಪರಿಸರಕ್ಕೆ ಹಾನಿಯುಂಟುಮಾಡುವ ಪಾಲಿಕಾರ್ಮೆನ್ ಎಂಬ ವಸ್ತುವನ್ನು ಪೆನ್ನುಗಳ ಉತ್ಪಾದನೆಯಲ್ಲಿ ಬಳಸುತ್ತಾರೆ. ಹಾಗಾಗಿ ಖಾಲಿ ಪೆನ್ನುಗಳನ್ನು ಎಲ್ಲೆಂದರಲ್ಲಿ ಎಸೆಯುವುದರ ಬದಲು ಒಂದು ಕಡೆ ಶೇಖರಿಸಿಡುವುದು ಉತ್ತಮ.

ಶಾಲೆ ಹಾಗೂ ಮನೆಯಲ್ಲಿ ಶಿಕ್ಷೆಯಿಂದ ವಂಚಿತರಾಗುವ ಮಕ್ಕಳು ಸ್ಟೇಷನ್ ಮೆಟ್ಟಿಲು ಹತ್ತುತ್ತಾರೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಶಿಕ್ಷೆ ಮತ್ತು ಶಿಕ್ಷಣದ ಮೂಲಕ ಸಂಸ್ಕಾರ ಕಲಿಸುವಲ್ಲಿ ಪೋಷಕರ ಹಾಗೂ ಶಿಕ್ಷಕರ ಪಾತ್ರ ಹಿರಿದು ಎಂದರು.

ರೋಟರಿ ಶಾಲೆ ಉಪಾಧ್ಯಕ್ಷ ರೋ.ಡಬ್ಲ್ಯೂ.ಆರ್ ಪಿಂಟೋ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳ ಅಂಕಗಳ ಬಗ್ಗೆ ಯೋಚಿಸುತ್ತಾರೆ. ಆದರೆ ವಿದ್ಯಾರ್ಥಿಗಳ ಅಂಕಗಳ ಜೊತೆಗೆ ಸರ್ವತೋಮುಖ ಅಭಿವೃದ್ಧಿಯಲ್ಲಿ ನಮ್ಮ ಶಾಲೆ ಪೂರಕ ಶಿಕ್ಷಣ ನೀಡುತ್ತಿದೆ. ಶಿಕ್ಷಣ ಹಾಗೂ ಸಂಸ್ಕಾರ ಬದುಕಿನ ಮೂಲ ಮಂತ್ರ.

ಶಿಕ್ಷಣ ಎಂದಿಗೂ ಎಡವಲು ಬಿಡುವುದಿಲ್ಲ, ಸಂಸ್ಕಾರ ಕೆಡಲು ಬಿಡುವುದಿಲ್ಲ. ಆಗಿನ ಕಾಲದಲ್ಲಿ ಪೋಷಕರು ಮಕ್ಕಳಿಗೆ ಬೇಕಾದ ಮೌಲ್ಯಗಳನ್ನು ಕಲಿಸುತ್ತಿದ್ದರು. ಆದರೆ ಇಂದಿನ ಆಧುನಿಕ ಸಮಾಜ ಮಕ್ಕಳಲ್ಲಿ ಮೌಲ್ಯಗಳನ್ನು ಕಡಿಮೆ ಮಾಡುತ್ತಿರುವುದರಿಂದ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳ ಮೂಲಕ ಮೌಲ್ಯ ಶಿಕ್ಷಣವನ್ನು ಕಲಿಸಲಾಗುತ್ತಿದೆ ಎಂದರು.

ಈ ವೇಳೆ ಗ್ರಾ.ಪಂ ಅಧ್ಯಕ್ಷ ಸಂಕಪ್ಪ, ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಮಮತ.ಜಿ, ಇಸಿಒ ಶಿವಪ್ಪ, ಗ್ರಾ.ಪಂ. ಸದಸ್ಯ ವೀರೇಶ್, ರೋಟರಿ ಟ್ರಸ್ಟ್ ಅಧ್ಯಕ್ಷ ರೋ. ಹರೀಶ್ ಬಿ.ಪಿ, ರೋಟರಿ ಕ್ಲಬ್ ಅಧ್ಯಕ್ಷ ರೋ.ಪೃಥ್ವಿ ಬಿ.ಯು, ವಿದ್ಯಾರ್ಥಿ ಸಮಿತಿ ಅಧ್ಯಕ್ಷೆ ಕು.ಆಶಿತ ಡಿಸೋಜ, ವಿದ್ಯಾರ್ಥಿ ಸಮಿತಿ ಕಾರ್ಯದರ್ಶಿ ಮಾ.ಪ್ರಜ್ವಲ್,ಶಾಲಾ ಶಿಕ್ಷಕರು,ಸಿಬ್ಬಂದಿಗಳು ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *