
ಚಗಚಗೆರೆ : ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಎಂಬ ಮಾತನ್ನೇ ಆದರ್ಶವಾಗಿ ತೆಗೆದುಕೊಂಡ ಅರಸೀಕೆರೆ ತಾಲೂಕಿನ,ಗಂಡಸಿ ಹೋಬಳಿಯ, ಚಗಚಗೆರೆ ಗ್ರಾಮ ಪಂಚಾಯಿತಿಯ, ಚಿಕ್ಕಯರಗನಾಳು ಗ್ರಾಮದ ನಿವಾಸಿಯಾದ ಚಂದ್ರಣ್ಣ ಕೃಷಿಯಲ್ಲಿ ಯಶಸ್ಸನ್ನು ಕಂಡು ಗ್ರಾಮಸ್ಥರಿಗೆ ಮಾದರಿಯಾಗಿದ್ದಾರೆ.
ತಮ್ಮ ಒಟ್ಟಾರೆ 8 ಎಕರೆ ಜಮೀನಿನಲ್ಲಿ ವ್ಯವಸಾಯ, ಮೀನುಗಾರಿಕೆ,ಜೇನು ಸಾಕಾಣಿಕೆ ಹೈನುಗಾರಿಕೆ, ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ಬಿ.ಎ.ಪದವೀಧರರಾದ ಇವರು ಪದವಿ ಪೂರ್ಣಗೊಂಡ ನಂತರ ಕಂಪ್ಯೂಟರ್ ಮೆಕ್ಯಾನಿಸ್ಟ್ ಎಂಬ 6 ತಿಂಗಳ ಕೋರ್ಸ್ ಅನ್ನು ಮಾಡಿ ಸುಮಾರು 2000 ನೇ ಇಸವಿಯಲ್ಲಿ ಮುಂಬೈಗೆ ಹೋಗಿ ಅಲ್ಲಿ ಕೆಲಸಕ್ಕೆ ಸೇರುತ್ತಾರೆ. ಆದರೆ ಮನೆಯಲ್ಲಿ ಎದುರಾದ ಕೌಟುಂಬಿಕ ಸಮಸ್ಯೆಗಳ ಕಾರಣ ಮರಳಿ ತಮ್ಮ ಗ್ರಾಮಕ್ಕೆ 2010ರ ಇಸವಿಯಲ್ಲಿ ಬರುತ್ತಾರೆ.
ನಂತರ ಗಂಡಸಿ ಹ್ಯಾಂಡ್ ಪೋಸ್ಟ್ ನಲ್ಲಿ ಎಸ್ .ಕೆ. ಕಂಪ್ಯೂಟರ್ಸ್ ಎಂದು ತಮ್ಮದೇ ಆದ ಅಂಗಡಿಯನ್ನು ತೆರೆಯುತ್ತಾರೆ. ಸುಮಾರು 8 ವರ್ಷಗಳ ಕಾಲ ಈ ಒಂದು ವೃತ್ತಿಯನ್ನು ಮಾಡುತ್ತ ಜೀವನ ಸಾಗಿಸುತ್ತಿದ್ದರು. ನಂತರ ಕೊರೊನಾ ಮಹಾಮಾರಿಯಿಂದ ತಮ್ಮ ಅಂಗಡಿಯನ್ನು ಮುಚ್ಚಬೇಕಾಗಿ ಬಂದ ಕಾರಣ ಆ ಒಂದು ಸಂದರ್ಭದಲ್ಲಿ ಅವರು ಕೃಷಿಯನ್ನು ಶುರು ಮಾಡುತ್ತಾರೆ.
ಕೃಷಿ ಶುರು ಮಾಡಿದ ಪ್ರಾರಂಭದ ದಿನಗಳಲ್ಲಿ ಹೊಸದಾಗಿ ಏನಾದರೂ ಮಾಡಬೇಕು ಎಂದು ನಿರ್ಧರಿಸಿದ ಇವರು ವ್ಯವಸಾಯದ ಜೊತೆಗೆ ಮೀನುಗಾರಿಕೆ ಮತ್ತು ಜೇನು ಸಾಕಾಣಿಕೆಯನ್ನು ಶುರು ಮಾಡುತ್ತಾರೆ. ಸುಮಾರು 70 ಅಡಿ× 70ಅಡಿ ಗುಂಡಿಯಲ್ಲಿ ಮೀನಿನ ತಳಿಗಳಾದ ರಾಹು, ಕಾಟ್ಲಾ, ಮ್ರಿಗಾಲ್, ಕಾಮನ್ ಕಾರ್ಪ್ ಬೇಡಿಕೆಯಲ್ಲಿರುವ ಕಾರಣ ಇವುಗಳನ್ನು ಸಾಕುತ್ತಾ ಬಂದಿದ್ದಾರೆ.
ಸುಮಾರು 3000ಮೀನಿನ ಮರಿಗಳನ್ನು ತಂದು ಸಾಕಿರುವ ಇವರು ಇದರಿಂದ ಪ್ರತಿ ವರ್ಷಕ್ಕೆ ಒಂದರಿಂದ ಒಂದೂವರೆ ಲಕ್ಷದವರೆಗೂ ಆದಾಯವನ್ನು ಕಾಣುತ್ತಿದ್ದಾರೆ. ಜೈನುಕೃಷಿಯಲ್ಲೂ ಕೂಡ ಆಸಕ್ತಿಯನ್ನು ಹೊಂದಿದ್ದ ಇವರು ಪ್ರಾರಂಭದ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜೇನು ಸಾಕಾಣಿಕೆಯ ಬಗ್ಗೆ ಮಾಹಿತಿಯನ್ನು ಪಡೆದು ಜೇನು ಪೆಟ್ಟಿಗೆಗಳನ್ನು ಸುತ್ತಮುತ್ತಲಿನ ರೈತರಿಂದ ಹುಡುಕಿ ತಂದು ಜೇನು ಸಾಕಾಣಿಕೆಯನ್ನು ಪ್ರಾರಂಭಿಸುತ್ತಾರೆ.
ಜೇನು ಸಾಕಾಣಿಕೆಯಲ್ಲಿ ಇವರು ಅನೇಕ ಸಮಸ್ಯೆಗಳನ್ನು ಎದುರಿಸಿ ಪ್ರಸ್ತುತ ಆ ಎಲ್ಲಾ ಸಮಸ್ಯೆಗಳಿಗೆ ಪರಿಹಾರಗಳನ್ನು ಪಡೆದುಕೊಂಡು ಯಶಸ್ವಿಯಾಗಿದ್ದಾರೆ. ಪ್ರಸ್ತುತ 12 ಜೇನುಪೆಟ್ಟಿಗೆ ಗಳಲ್ಲಿ ಜೇನುಗಳನ್ನು ಸಾಕುತ್ತಿದ್ದು ಇದರ ಸಂಖ್ಯೆಯನ್ನು ನೂರಕ್ಕೆ ಏರಿಸುವುದು ಇವರ ಗುರಿಯಾಗಿದೆ. ಪ್ರತಿ ವರ್ಷ ಒಂದು ಪೆಟ್ಟಿಗೆಯಿಂದ ಸುಮಾರು 5 ಕೆಜಿ ಜೇನುತುಪ್ಪವನ್ನು ತೆಗೆಯುತ್ತಿದ್ದಾರೆ ಮತ್ತು ಮಾರಾಟಕ್ಕಾಗಿ ಅಕ್ಷಯಕಲ್ಪ ಕಂಪನಿಯನ್ನು ಆಶ್ರಯಿಸಿದ್ದಾರೆ.
ಹೈನುಗಾರಿಕೆಯನ್ನು ಕೂಡ ಮಾಡುತ್ತಿರುವ ಇವರು ಪ್ರಸ್ತುತ 5 ಹಸುಗಳನ್ನು ಹೊಂದಿದ್ದು ದಿನಕ್ಕೆ 40 ಲೀಟರ್ ಹಾಲನ್ನು ಉತ್ಪಾದಿಸುತ್ತಿದ್ದಾರೆ.ಇದರ ಜೊತೆಗೆ ಕೋಳಿ ಸಾಕಾಣಿಕೆಯನ್ನು ಮಾಡುತ್ತಿದ್ದು ಸುಮಾರು 40 ಕಡಕ್ ನಾಥ್ ಕೋಳಿಗಳನ್ನು ಸಾಕಿದ್ದಾರೆ. ತಮ್ಮ 4 ಎಕರೆ ತೋಟದಲ್ಲಿ ತೆಂಗು, ಅಡಿಕೆ, ಬಾಳೆ ಗಿಡಗಳನ್ನು ಬೆಳೆಯುತ್ತಿದ್ದು ಉಳಿದ 4 ಎಕರೆ ತೋಟದಲ್ಲಿ ಜೋಳ,ರಾಗಿ, ಆಲೂಗೆಡ್ಡೆ, ಶುಂಠಿ ಯನ್ನು ಬೆಳೆಯುತ್ತಾ ಬಂದಿದ್ದಾರೆ.
ಸಾವಯವ ಕೃಷಿಯಲ್ಲಿ ಆಸಕ್ತಿಯನ್ನು ಹೊಂದಿರುವ ಇವರು ಜೀವಾಮೃತ, ಬೀಜಾಮೃತ, ಪಂಚಗವ್ಯಗಳಂತಹ ದ್ರವರೂಪದ ಸಾವಯವ ಗೊಬ್ಬರಗಳನ್ನು ತಯಾರಿಸಿ ತಮ್ಮ ಬೆಳೆಗಳಿಗೆ ಉಪಯೋಗಿಸುತ್ತಾರೆ. ರೈತ ಸಂಪರ್ಕ ಕೇಂದ್ರ ಗಂಡಸಿ ಸಿಬ್ಬಂದಿಗಳ ಜೊತೆ ತಮಗೆ ಕೃಷಿಯಲ್ಲಿ ಕಂಡು ಬರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುತ್ತಾ ಬಂದಿದ್ದಾರೆ.
ಒಟ್ಟಾರೆಯಾಗಿ ಬಿ.ಎ.ಪದವಿ ಮುಗಿಸಿ ಕೃಷಿಯಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಾ ವರ್ಷಕ್ಕೆ ಸುಮಾರು ₹5 ಲಕ್ಷ ಪ್ರಸ್ತುತ ಕೃಷಿಯಿಂದ ದುಡಿಯುತ್ತಿದ್ದು, ಇವರಿಗೆ ಕೃಷಿಯಲ್ಲಿರುವ ಶ್ರದ್ಧೆ ಸುತ್ತಮುತ್ತಲಿನ ರೈತರಿಗೆ ಆದರ್ಶವಾಗಿದೆ.
ಕೃಷಿಯಲ್ಲಿ ಇನ್ನೂ ಹೆಚ್ಚಿನ ಪ್ರಗತಿಯನ್ನು ಕಾಣಬೇಕೆಂಬ ಇವರು ಚಿಕ್ಕಯರಗನಾಳು ಗ್ರಾಮದ ಪ್ರಗತಿಪರ ರೈತರಾಗಿ ಹೊರಹೊಮ್ಮಿದ್ದಾರೆ.





