ಸಕಲೇಶಪುರ: ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಗ್ರಾಮ ದೇವತೆ ಸಕಲೇಶ್ವರ ಸ್ವಾಮಿ ಪುಷ್ಪಾಲಂಕೃತ ದಿವ್ಯ ರಥೋತ್ಸವ ಭಾನುವಾರ ಜರುಗಿತು.
ಶನಿವಾರ ಸಾಂಕೇತಿಕ ರಥಯಾತ್ರೆಯಲ್ಲಿ ತೇರು ನಿಲ್ಲಿಸಿದ ಸ್ಥಳದಿಂದ ಭಾನುವಾರ ಬೆಳಗ್ಗೆ 11 ಗಂಟೆಗೆ ಆರಂಭವಾದ ರಥೋತ್ಸವ ಸಕಲೇಶಪುರದ ಪ್ರಮುಖ ಬೀದಿಯಲ್ಲಿ ಸಂಚರಿಸಿತು.
ವಿವಿಧ ಮಂಗಳ ವಾದ್ಯಗಳು, ಬ್ಯಾಂಡ್‌ಸೆಟ್, ಕರಡಿ ಕುಣಿತ, ಕರಪಾಲಮೇಳ, ನಂದಿಧ್ವಜ, ಹಾಸ್ಯಗೊಂಬೆ ಕಲಾತಂಡಗಳು ರಥೋತ್ಸವಕ್ಕೆ ಕಳೆ ತಂದವು. ದೇವಸ್ಥಾನದಲ್ಲಿ ವಿಶೆಷ ಪೂಜೆ, ಹೋಮ ನಡೆದವು.
ಒಂದು ಗಂಟೆ ಸುಮಾರಿಗೆ ರಾಜಬೀದಿ ಪ್ರವೇಶಿಸಿದ ರಥಕ್ಕೆ ಸ್ಥಳೀಯರು ಈಡುಗಾಯಿ ಒಡೆದರು. ಭಕ್ತರು ರಥದ ಕಳಸಕ್ಕೆ ತಮ್ಮ ಇಷ್ಟಾರ್ಥ ಈಡೇರಲಿ ಎಂದು ಬಾಳೆಹಣ್ಣು ಎಸೆಯುವ ಯತ್ನ ಮಾಡುತ್ತಿದ್ದರು. ಒಂದು ಬದಿಯಿಂದ ಎಸೆದ ಬಾಳೆಹಣ್ಣು ಮತ್ತೊಂದು ಬದಿಯ ಭಕ್ತರ ಮೇಲೆ ಬೀಳುತ್ತಿದ್ದವು.
ರಾಜಬೀದಿಯನ್ನು ತಳಿರು ತೋರಣ, ರಂಗೋಲಿಯಿಂದ ಸಿಂಗರಿಸಲಾಗಿತ್ತು. ಮನೆ, ಅಂಗಡಿಗಳ ಮುಂದೆ ರಥ ಬರುತ್ತಿದ್ದಂತೆ ಆರತಿ ಎತ್ತಿ ಈಡುಗಾಯಿ ಒಡೆಯುತ್ತಿದ್ದದ್ದು ಸಾಮಾನ್ಯವಾಗಿತ್ತು.
ಸೇವೆ: ಪಟ್ಟಣದ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ರಥ ಸಾಗುವ ಮಾರ್ಗದ ಎರಡೂ ಬದಿಯಲ್ಲಿ ಭಕ್ತರಿಗೆ ತಂಪು ಪಾನೀಯ, ಲಘು ಉಪಾಹಾರ ವಿತರಿಸಿದರು.
ಬೆಳಗ್ಗೆಯಿಂದ ಸಂಜೆವರೆಗೆ ರಥೋತ್ಸವ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದ್ದರಿಂದ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಪಟ್ಟಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಸಂಜೆವರೆಗೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿತ್ತು.
ಸಂಜೆ ರಥ ದೇವಸ್ಥಾನ ಆವರಣ ತಲುಪುತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಲಕ್ಷಾಂತರ ಭಕ್ತರು ಸಕಲೇಶ್ವರ ಸ್ವಾಮಿ ರಥೋತ್ಸವಕ ಕಣ್ಣುಂಬಿಕೊಂಡರು. ದಿವ್ಯ ರಥಕ್ಕೆ ಐವತ್ತು ವರ್ಷ :
ರಥ ನಿರ್ಮಾಣವಾಗಿ 50 ವರ್ಷಗಳು ತುಂಬಿದ ಸುವರ್ಣ ಮಹೋತ್ಸವದ ಸಂದರ್ಭವಾದ ಪ್ರಯುಕ್ತ ದಿವ್ಯ ರಥೋತ್ಸವ ಅದ್ದೂರಿಯಾದ ರಥೋತ್ಸವವಾಗಿದ್ದು,ದೇವಸ್ಥಾನದ ಪದಾಧಿಕಾರಿಗಳು ರಥ ನಿರ್ಮಾಣಕ್ಕೆ ಸಹಕಾರ ನೀಡಿದ 50 ವರ್ಷ ತುಂಬಿದ ಸುವರ್ಣ ಮಹೋತ್ಸವ ಅಂಗವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಉತ್ಸವ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಇತರರು ಹಾಜರಿದ್ದರು.ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಹೆಚ್ಚುವರಿ ಪೊಲೀಸರನ್ನು ನೇಮಕ ಮಾಡಿ ಬಿಗಿ ಬಂದೋಬಸ್ತ್ ವ್ಯವಸ್ಥೆಮಾಡಲಾಗಿತ್ತು.