ಆಲೂರು :ಪಟ್ಟಣಗಳು ಬೆಳೆದಂತೆಲ್ಲಾ ಮೂಲಸೌಕರ್ಯ ಒದಗಿಸಲು ಸ್ಥಳೀಯ ಆಡಳಿತಗಳು ಕ್ರಮಕೈಗೊಳ್ಳಬೇಕಿದೆ. ಆದರೆ, ಪಟ್ಟಣದಲ್ಲಿ ದ್ವಿಚಕ್ರವಾಹನ ಹಾಗೂ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಸಮಸ್ಯೆಯಾಗಿದ್ದು, ಸ್ಥಳೀಯ ಆಡಳಿತದ ನಿರ್ಲಕ್ಷ್ಯಕ್ಕೆ ಕೈ ಕನ್ನಡಿ ಹಿಡಿದಿದೆ.ಹಲವಾರು ವರ್ಷಗಳಿಂದಲೂ ಪಾರ್ಕಿಂಗ್ ಸಮಸ್ಯೆ ಬಗೆಹರಿದಿಲ್ಲ.

ವಾಹನ ನಿಲುಗಡೆಗೆ ಪಟ್ಟಣ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕ್ರಮಕೈಗೊಳ್ಳುವ ಅಗತ್ಯವಿದೆ. ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಅವುಗಳಿಗೆ ಅಗತ್ಯವಿರುವ ನಿಲುಗಡೆ ಪ್ರದೇಶ ಗುರುತಿಸುವಲ್ಲಿ ಸ್ಥಳೀಯ ಪಟ್ಟಣ ಪಂಚಾಯಿತಿ ವಿಫಲವಾಗಿರುವುದು ಎದ್ದು ಕಾಣುತ್ತದೆ.

ಪಟ್ಟಣದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 75 ಹಾದುಹೋಗಿದೆ.ಹಾಸನದಿಂದ ಆಲೂರು ಮಾರ್ಗವಾಗಿ ಸಕಲೇಶಪುರ ಮಂಗಳೂರಿಗೆ ಪ್ರತಿದಿನವೂ ಸಾವಿರಾರು ಕೆ ಎಸ್ ಆರ್ ಟಿ ಸಿ ವಾಹನಗಳು ಸೇರಿದಂತೆ ಇತರೆ ವಾಹನಗಳು ತೆರಳುತ್ತವೆ. ಆಲೂರು ಪಟ್ಟಣಕ್ಕೆ ಪ್ರವೇಶಿಸುತ್ತಿದ್ದಂತೆ ಆಲೂರು ಹಳೆ ಕೋರ್ಟ್ ಸರ್ಕಲ್ ) ವೃತ್ತದ ಬಳಿಯಿಂದ ಕೊನೆಪೇಟೆ ಸರ್ಕಲ್ ವೃತ್ತದವರೆಗೆ ಎಲ್ಲಿಯೂ ವಾಹನ ನಿಲುಗಡೆಗೆ ಸುವ್ಯವಸ್ಥಿತವಾದ ಜಾಗ ಗುರುತಿಸಿಲ್ಲ.

ವಾಹನ ಸವಾರರು ತಮಗಿಷ್ಟ ಬಂದಂತಹ ರಸ್ತೆ ಪಕ್ಕದಲ್ಲಿಯೇ ವಾಹನಗಳನ್ನು ನಿಲುಗಡೆಮಾಡುತ್ತಿದ್ದಾರೆ,ಬಹುಪಾಲು ವಾಣಿಜ್ಯ ಕಟ್ಟಡಗಳ ಮಾಲೀಕರು ವಾಹನ ನಿಲುಗಡೆಗೆ ಜಾಗ ನೀಡದೇ ಇರುವುದು ದುರಂತ. ಹಿಂದೆ ಪರವಾನಗಿ ನೀಡುವ ಸಂದರ್ಭದಲ್ಲಿ ವಾಣಿಜ್ಯ ಕಟ್ಟಡಗಳ ನೀಲನಕ್ಷೆ ನೋಡಿಯೇ ಮಂಜೂರಾತಿ ನೀಡಲಾಗುತ್ತಿತ್ತು. ಆಗ ವಾಹನ ನಿಲುಗಡೆ(ಪಾರ್ಕಿಂಗ್) ವ್ಯವಸ್ಥೆ ಗಮನಿಸುತ್ತಿದ್ದರು.

ಸ್ಥಳಾವಕಾಶ ಇದ್ದರೆ ಮಾತ್ರವೇ ಪರವಾನಗಿ ನೀಡುತ್ತಿದ್ದರು. ಆದರೆ, ಅಂತಹ ಸ್ಥಳಗಳನ್ನು ಸದ್ಯ ಒತ್ತುವರಿ ಮಾಡಿಕೊಂಡಿದ್ದು ನಿಲುಗಡೆಗೆ ಪರಿತಪಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾರ್ಯಾಚರಣೆ ಮಾಡಬೇಕಿದೆ ಎಂಬುದು ಸವಾರರ ಆಗ್ರಹ.

ಅತಿಹೆಚ್ಚು ಜನಸಾಂದ್ರತೆ ಇರುವ ಪ್ರದೇಶಗಳಾದ ಆಸ್ಪತ್ರೆ ತಾಲ್ಲೂಕು ಕಚೇರಿ ಹಾಗೂ ಬಸ್ ನಿಲ್ದಾಣದಲ್ಲಿಯೇ ಅತಿಹೆಚ್ಚು ವಾಹನಗಳನ್ನು ನಿಲುಗಡೆ ಮಾಡಲಾಗುತ್ತದೆ. ಆದರೆ, ಈ ಸ್ಥಳಗಳಲ್ಲಿ ವ್ಯವಸ್ಥಿತವಾಗಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸದಿರುವುದು ನೋವಿನ ಸಂಗತಿ, ಎಲ್ಲೆಂದರಲ್ಲಿ ವಾಹನಗಳನ್ನು ಬೇಕಾಬಿಟ್ಟಿ ನಿಲ್ಲಿಸಿ ಹೋಗುವ ಕಾರಣದಿಂದ ಬೃಹತ್ ಲಾರಿ ಹಾಗೂ ಬಸ್ ಗಳು ಸಂಚಾರಿಸಬೇಕಾದರೆ ಹರ ಸಾಹಸವೇ ಪಡಬೇಕು,ನಿಗದಿತ ನಿಲುಗಡೆ ವಿಫಲಪಟ್ಟಣಗಳಲ್ಲಿ ಕಳೆದ ಹಲವು ವರ್ಷಗಳ ಹಿಂದೆ ವಾಹನ ನಿಲುಗಡೆಗೆ ಸ್ಥಳಗಳನ್ನು ನಿಗದಿ ಮಾಡಲು ಪೊಲೀಸ್ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಪ್ರಯತ್ನಿಸಿತ್ತು. ಅದು ಕೆಲ ದಿನಗಳಿಗೆ ಮಾತ್ರವೇ ಸೀಮಿತವಾಯಿತು.

ವಾಹನ ನಿಲುಗಡೆ ನಿಷೇಧಿಸಿದೆ ಎಂದು ಅಳವಡಿಸಿರುವ ಫಲಕದ ಬಳಿಯೇ ವಾಹನಗಳನ್ನು ನಿಲುಗಡೆ ಮಾಡಿ ನಿಯಮಗಳನ್ನು ಮುರಿಯುವುದೇ ಫ್ಯಾಷನ್ ಆಗಿದೆ. ಪಟ್ಟಣದ ಸೌಂದರೀಕರಣದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾದರೂ ವಾಹನ ನಿಲುಗಡೆಗೆ ಸಮರ್ಪಕ ಯೋಜನೆ ರೂಪಿಸಲು ಸಾಧ್ಯವಾಗದೇ ಪಟ್ಟಣ ಪಂಚಾಯಿತಿ ಹಾಗೂ ಪೊಲೀಸರು ಹೆಣಗಾಡುತ್ತಿದ್ದಾರೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಕರ್ತವ್ಯ. ಟ್ರಾಫಿಕ್, ವಾಹನ ನಿಲುಗಡೆಯಂತಹ ಕಾರ್ಯಕ್ಕೆ ಅಗತ್ಯವಾಗಿರುವ ಪೊಲೀಸರನ್ನು ನಿಯೋಜನೆ ಮಾಡಲು ಸಿಬ್ಬಂದಿ ಕೊರತೆಯನ್ನು ಪೊಲೀಸ್‌ ಇಲಾಖೆ ಎದುರಿಸುತ್ತಿದೆ.

ಅಲ್ಲದೇ ಕಾರ್ಯಯೋಜನೆ ರೂಪಿಸಿ ಪಾಲಿಸುವಲ್ಲಿಯೂ ವಿಫಲವಾಗಿದೆ ಎಂಬುದು ನಾಗರಿಕರ ದೂರು.ವಾಹನಗಳ ಸಂಖ್ಯೆ ಹೆಚ್ಚಾದಂತೆಲ್ಲಾ ನಿಲುಗಡೆಯೂ ವ್ಯವಸ್ಥಿತವಾಗಿ ಇಲ್ಲದಿರುವ ಕಾರಣ ಸವಾರರು ಕಿರಿದಾದ ರಸ್ತೆಗಳಲ್ಲಿ ಸಂಚರಿಸುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ವೇಗವಾಗಿ ಬರುವಂತಹ ವಾಹನ ಸವಾರರು ಇತರೇ ವಾಹನಗಳನ್ನು ಹಿಂದಿಕ್ಕುವ ಭರದಲ್ಲಿ ಅಪಘಾತವಾಗುತ್ತಿವೆ. ತಪ್ಪೇ ಮಾಡದ ಸವಾರರು ಸಹ ತೊಂದರೆ ಅನುಭವಿಸು ವಂತಾಗಿದೆ.

ಫುಟ್‍ಪಾತ್ ಮೇಲೂ ನಿಲುಗಡೆ : ದಿನನಿತ್ಯವೂ ಪಟ್ಟಣಕ್ಕೆ ಗ್ರಾಮೀಣ ಭಾಗದಿಂದ ಸಾವಿರಾರು ಜನರು ತಮ್ಮ ಕೆಲಸ ನಿಮಿತ್ತ ಆಗಮಿಸುತ್ತಾರೆ. ಬರುವಂತಹ ಸಾರ್ವಜನಿಕರು ಓಡಾಡುವ ಸಲುವಾಗಿ ಫುಟ್‍ಪಾತ್‌ ನಿರ್ಮಾಣ ಮಾಡಲಾಗಿದೆ. ಅಲ್ಲಿಯೂ ವಾಹನ ನಿಲುಗಡೆ ಮಾಡುತ್ತಿದ್ದಾರೆ.

ಪಾದಚಾರಿ ಮಾರ್ಗದಲ್ಲಿಯೇ ತಳ್ಳುಗಾಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದಾಗಿ ಪಾದಚಾರಿಗಳು ರಸ್ತೆ ಮೇಲೆ ನಡೆದು ಹೋಗುತ್ತಿದ್ದಾರೆ. ಇದರಿಂದಾಗಿ ವಾಹನ ಸವಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಗಣಪತಿ ವಾಣಿಜ್ಯ ಸಂಕಿರ್ಣ,ಹಾಗೂ ಪಟ್ಟಣ ಪಂಚಾಯಿತಿ ವಾಣಿಜ್ಯ ಸಂಕಿರ್ಣ ದಲ್ಲಿ ಬಾಡಿಗೆ ಪಡೆದಿರುವ ಬಾಡಿಗೆ ದಾರರು ತಮಗೆ ನೀಡಿರುವ ವಾಣಿಜ್ಯ ಮಳಿಗೆ ಅಳತೆಗಿಂತ ಮುಂದಕ್ಕೆ ತಮ್ಮ ಅಂಗಡಿಗಳನ್ನು ಪಾದಚಾರಿ ರಸ್ತೆಯವರೆಗೂ ಅಕ್ರಮಿಸಿಕೊಂಡಿದ್ದು ಇದರಿಂದಾಗಿ ಚರಂಡಿ ಮೇಲೆ ಹಾಕಿರುವ ಸ್ಲಾಯಬ್ ಮೇಲೆ ಪಾದಚಾರಿಗಳು ಓಡಾಡುತ್ತಿದ್ದಾರೆ ಕೆಲವು ತಿಂಗಳ ಹಿಂದೆಯಷ್ಟೆ ಪಟ್ಟಣ ಪಂಚಾಯಿತಿ ನೇತೃತ್ವದಲ್ಲಿ ಫುಟ್‍ಪಾತ್ ತೆರವು ಕಾರ್ಯಾಚರಣೆ ಪ್ರಬಲರ ವಿರೋಧದ ನಡುವೆಯೂ ನಡೆದಿತ್ತಾದರೂ ಪುನಃ ಅಂಗಡಿ ಹೆಚ್ಚಾಗಿರುವುದು ಪಾದಚಾರಿಗಳಿಗೆ ಕಿರಿಕಿರಿಯಾಗುತ್ತಿದೆ.

ಹಲವಾರು ವರ್ಷಗಳಿಂದಲೂ ತಾಲ್ಲೂಕು ಕೇಂದ್ರದಿಂದ ಹೊರಪ್ರದೇಶಗಳಿಗೆ ದಿನವೂ ಪ್ರಯಾಣಿಸುವ ಕೆಲವರು ತಮ್ಮ ದ್ವಿಚಕ್ರವಾಹನ ಹಾಗೂ ಕಾರು‌ಗಳನ್ನು ರಸ್ತೆ ಪಕ್ಕದಲ್ಲಿ ಬೆಳಿಗ್ಗೆ ನಿಲುಗಡೆ ಮಾಡಿ ಸಂಜೆ ತೆಗೆದುಕೊಂಡು ಹೋಗುತ್ತಾರೆ. ಇದರಿಂದಾಗಿ ಇತರರಿಗೂ ಪಾರ್ಕಿಂಗ್ ಸಮಸ್ಯೆ ಎದುರಾಗುತ್ತದೆ.

ತಾಲ್ಲೂಕು ಕೇಂದ್ರವಾಗಿ ದಾಪುಗಾಲು ಇಟ್ಟಿದ್ದರು ಅಗತ್ಯ ಮೂಲಸೌಕರ್ಯದ ಅಗತ್ಯತೆಯೂ ಹೆಚ್ಚಾಗಿದೆ. ಇದನ್ನು ಮನದಲ್ಲಿಟ್ಟುಕೊಂಡು ವಾಹನ ನಿಲುಗಡೆಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಅವಕಾಶ ಕಲ್ಪಿಸಬೇಕಿದೆ. ಅಲ್ಲದೇ ವಾಣಿಜ್ಯ ಕಟ್ಟಡಗಳ ಮಾಲೀಕರು ತೆರಿಗೆ ಸಂದಾಯ ಮಾಡುವ ಸಂದರ್ಭದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಿಕೊಡಬೇಕಿದ್ದು, ಕಟ್ಟಡದ ಬಳಿಯಲ್ಲಿ ವ್ಯವಸ್ಥೆ ಇದೆಯಾ ಎಂಬುದನ್ನು ಪರೀಕ್ಷಿಸಬೇಕಿದೆ. ಆಗ ಮಾತ್ರವೇ ಸಮಸ್ಯೆ ಪರಿಹರಿಸಲು ಸಾಧ್ಯ.

ಸ್ಥಳ ನಿಗದಿಗೆ ಕ್ರಮಪಟ್ಟಣ ವ್ಯಾಪ್ತಿಯಲ್ಲಿ ವಾಹನ ನಿಲುಗಡೆಗೆ ಜಾಗ ಗುರುತಿಸಲು ಪಟ್ಟಣ ಪಂಚಾಯಿತಿಯವರು ಕ್ರಮವಹಿಸಬೇಕು . ಈ ಬಗ್ಗೆ ಪೊಲೀಸರೊಂದಿಗೆ ಸೇರಿ ಜಂಟಿ ಸಮೀಕ್ಷೆ ನಡೆಸಿ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ವಾಹನಗಳ ನಿಲುಗಡೆಗೆ ಸೂಕ್ತ ಜಾಗ ನಿಗದಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರ ಮಾತಾಗಿದೆಕೊಡಲೇ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹೆಚ್ಚೆತ್ತುಕೊಂಡು ಈ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *