
ಹಾಸನ: ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ನಗರ ಸಾರಿಗೆ ಸೌಲಭ್ಯವನ್ನು ದೊರಕಿಸಿಕೊಡಬೇಕೆಂದು. ಹಾಗೂ ಹಾಸನ ವಿಶ್ವವಿದ್ಯಾಲಯದ ಮಾರ್ಗದಲ್ಲಿ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ಬಸ್‌ಗಳಿಗೂ ನಿಲುಗಡೆ ಕೋರಿ ಮತ್ತು ಬಸ್ ತಂಗುದಾಣದ ವ್ಯವಸ್ಥೆ ಒದಗಿಸಿಕೊಡಬೇಕೆಂದು ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಅಖಿಲ ಭಾರತ ಯೂತ್ ಫೆಡರೇಷನ್ ರಾಜ್ಯ ಕಾರ್ಯದರ್ಶಿ ಸಂತೋಷ್ ಮತ್ತು ಜಿಲ್ಲಾ ಕಾರ್ಯದರ್ಶಿ ಗಿರೀಶ್ ಮಾತನಾಡಿ, ಹಾಸನದ ಹೇಮಗಂಗೋತ್ರಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಹೇಮಗಂಗೋತ್ರಿ ಅಸ್ಥಿತ್ವದಲ್ಲಿದ್ದು ೬೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದು, ಜಿಲ್ಲೆಯ ಆನೇಕ ಗ್ರಾಮಗಳಿಂದ ಸಂಚರಿಸಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಆದರೆ ಈ ವಿದ್ಯಾರ್ಥಿಗಳಿಗೆ ಅನುಕೂಲವಾದ ಬಸ್ ಸಂಚಾರದ ವ್ಯವಸ್ಥೆ ಇಲ್ಲದೆ ಪ್ರತಿನಿತ್ಯ ಪರದಾಡುವಂತೆ ಆಗಿದೆ. ಅದರಲ್ಲೂ ಬೆಳಗಿನ ೯ ರಿಂದ ೧೧ ಗಂಟೆಯವರೆಗೆ ಹಾಗೂ ಮಧ್ಯಾಹ್ನ ೧ ರಿಂದ ೫ ಗಂಟೆಯವರೆಗೆ ಬಸ್‌ಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳು ಬಹಳ ಕಷ್ಟು ಪಡುತ್ತಿದ್ದಾರೆ ಎಂದು ದೂರಿದರು.
ಈ ಹಿನ್ನಲೆಯಲ್ಲಿ ಹಾಸನದ ಸಿಟಿ ಬಸ್ ನಿಲ್ದಾಣದಿಂದ ವಿಶ್ವವಿದ್ಯಾನಿಲಯಕ್ಕೆ ಬೆಳಿಗ್ಗೆ ೯ ರಿಂದ ೫ ಗಂಟೆಯವರೆಗೆ ನಗರ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ವಿನಂತಿಸುತ್ತೇವೆ. ಅಲ್ಲದೇ ವಿಶ್ವವಿದ್ಯಾಲಯದ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ಬಸ್‌ಗಳನ್ನು ನಿಲುಗಡೆ ಕೊಡುವಂತೆ ವ್ಯವಸ್ಥೆ ಮಾಡಿಕೊಡಬೇಕೆಂದು ಕೋರುತ್ತೇವೆ ಎಂದರು.
ಈಗಾಗಲೇ ದೇವೇಗೌಡ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಳಿಗಾಗಿಯೇ ಪ್ರತ್ಯೇಕವಾಗಿ ನಗರ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿರುವಂತೆ ಅದೇ ಮಾದರಿಯಲ್ಲಿ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ನಾಮಫಲಕದ ನಗರ ಸಾರಿಗೆ ಬಸ್‌ಗಳನ್ನು ವ್ಯವಸ್ಥೆ ಮಾಡಿಕೊಡಬೇಕೆಂದು ತಮ್ಮಲ್ಲಿ ಮನವಿ ಮಾಡಿದರು.
ನಮ್ಮ ನ್ಯಾಯಯುತ ವಿಚಾರಗಳನ್ನೊಳಗೊಂಡ ಮನವಿಯನ್ನು ಕೆ.ಎಸ್.ಆರ್.ಟಿ.ಸಿ. ಹಾಸನ ವಿಭಾಗೀಯ ವ್ಯವಸ್ಥಾಪಕರಿಗೆ ಕಳೆದ ತಿಂಗಳು ಮನವಿ ಸಲ್ಲಿಸಿದ್ದು ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ. ಕೂಡಲೇ ವಿದ್ಯಾರ್ಥೀಗಳಿಗೆ ಅನುಕೂವಾಗುವಂತೆ ತಂಗುದಾಣ ನಿರ್ಮಾಣ ಹಾಗೂ ಸಾರಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ಕಾರ್ಯದರ್ಶಿ ಭಾಸ್ಕರ್, ಸಹಕಾರ್ಯದರ್ಶಿ ವೀರೇಶ್, ಜಿಲ್ಲಾ ಸಂಚಾಳಕರಾದ ಹೆಚ್.ಎಸ್. ಪುಷ್ಪಲತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
