
ಹಾಸನ: ನಗರದ ಡೈರಿ ವೃತ್ತದಲ್ಲಿರುವ ಬಾಲಕಿಯರ ಬಿಸಿಎಂ ಇಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿನಿಲಯಕ್ಕೆ ಸೂಕ್ತ ಭದ್ರತೆಯನ್ನು ಒದಗಿಸಲು ಹಾಗೂ ಅಗತ್ಯಕ್ಕೆ ತಕ್ಕಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಎ.ಐ.ಡಿ.ಎಸ್.ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ಡಿಸಿ ಕಚೇರಿ ಮುಂದೆ ಪ್ರತಿಭಟನ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಹಾಸನ ಜಿಲ್ಲಾ ಸಂಚಾಲಕಿ ಚೈತ್ರ ಮಾಧ್ಯಮದೊಂದಿಗೆ ಮಾತನಾಡಿ, ಹಾಸನದ ಡೈರಿ ಸರ್ಕಲ್ ನಲ್ಲಿರುವ ಬಿಸಿಎಂ ಬಾಲಕಿಯರ ಇಂಜಿನಿಯರಿಂಗ್/ ಮೆಡಿಕಲ್ ವೃತ್ತಿಪರ ಹಾಸ್ಟೆಲ್ ನಲ್ಲಿ ಇತ್ತೀಚಿಗೆ ನಡೆದಿರುವ ಘಟನೆಗಳು ವಿದ್ಯಾರ್ಥಿಗಳನ್ನು ಬೆಚ್ಚಿ ಬೀಳಿಸಿದೆ.
ಒಂದು ತಿಂಗಳ ನಡುವೆ ಎರಡು ಬಾರಿ ಅಪರಿಚಿತ ವ್ಯಕ್ತಿಗಳು ನಿಲಯದ ಒಳಗಡೆ ನುಗ್ಗಿದ್ದರು ಎಂದು ಕೆಲವು ವಿದ್ಯಾರ್ಥಿನಿಯರಿಂದ ತಿಳಿದು ಬಂದಿತ್ತು. ಆನಂತರ ಗಾಬರಿಗೊಂಡ ವಿದ್ಯಾರ್ಥಿಗಳು ನಿಲಯದ ಪಾಲಕರಿಗೆ ಹಾಗೂ ಇಲಾಖೆಯ ತಾಲೂಕು ಅಧಿಕಾರಿಗಳಿಗೂ ಈ ಘಟನೆಯನ್ನು ತಿಳಿಸಿದ್ದರೂ ಅವರಿಂದ ಯಾವುದೇ ಸೂಕ್ತ ಪ್ರತಿಕ್ರಿಯೆ ಹಾಗೂ ಭದ್ರತೆ ದೊರೆತಿಲ್ಲ ಎಂದು ದೂರಿದರು.
ಅಪರಿಚಿತ ವ್ಯಕ್ತಿ ಹಾಸ್ಟೆಲ್ ಒಳಗೆ ನುಗ್ಗಿರುವುದು ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಈ ಘಟನೆಗಳು ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿನಿಯರ ಮನಸ್ಸಿನಲ್ಲಿ ಆತಂಕ ಹುಟ್ಟಿಸಿದೆ. ರಾತ್ರಿ ವೇಳೆಯಲ್ಲಿ ಹಾಸ್ಟೆಲ್ ನಲ್ಲಿ ಇರಲು ಭಯ ಹುಟ್ಟಿಸುತ್ತಿದೆ.
ಇಷ್ಟೆಲ್ಲಾ ಆದರೂ ಸಹ ನಿಲಯ ಪಾಲಕರು ಮಹಡಿಯ ಒಂದು ಭಾಗದಲ್ಲಿ ಕಂಬಿಗಳಿರುವ ಗೇಟ್ ಹಾಕಿಸಿರುವುದನ್ನು ಹೊರತುಪಡಿಸಿ ಇನ್ಯಾವುದೇ ಬಿಗಿ ಭದ್ರತಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ಬಿಸಿಎಂ ಇಲಾಖೆಯ ತಾಲೂಕು ಅಧಿಕಾರಿಗಳು ಒಮ್ಮೆಯೂ ಬಂದು ವಿದ್ಯಾರ್ಥಿಗಳಿಗೆ ಧೈರ್ಯವನ್ನು ತುಂಬುವ ಕೆಲಸವನ್ನು ಮಾಡದೆ ಕೇವಲ ನಿಲಯ ಪಾಲಕರೊಂದಿಗೆ ಮಾತನಾಡಿಕೊಂಡು ಹೋಗಿದ್ದಾರೆ ಎಂದರು.
ಇಷ್ಟೇ ಅಲ್ಲದೆ ನಿಲಯ ಪಾಲಕರಿಗೆ ವಿದ್ಯಾರ್ಥಿಗಳು ಬಂದು ತಮ್ಮ ಭಯವನ್ನು ಹೇಳಿಕೊಂಡಾಗ ಭಯ ಪಡುವ ಹಾಸ್ಟೆಲ್ ವಿದ್ಯಾರ್ಥಿನಿಯರು ಹಾಸ್ಟೆಲ್ ಬಿಟ್ಟು ಹೋಗಬಹುದು ಎಂದು ಬೇಜವಾಬ್ದಾರಿ ಉತ್ತರವನ್ನು ಕೊಟ್ಟಿದ್ದಾರೆ.
ಇದೆಲ್ಲವೂ ಕೂಡ ವಿದ್ಯಾರ್ಥಿನಿಯರ ಮನಸ್ಸಿನಲ್ಲಿ ಬಹಳ ಬೇಸರ ಉಂಟು ಮಾಡಿದೆ. ಹೀಗಾಗಿ ಇಂಜಿನಿಯರಿಂಗ್ / ಮೆಡಿಕಲ್ ವಿದ್ಯಾರ್ಥಿನಿಲಯವನ್ನು ಸರಿಯಾದ ಸೂಕ್ತ ಭದ್ರತೆ ಇರುವ ನಿಲಯಕ್ಕೆ ವರ್ಗಾಯಿಸಬೇಕು ಇಲ್ಲವೇ ನಿಲಯಕ್ಕೆ ಕಟ್ಟು ನಿಟ್ಟಿನ ಸೂಕ್ತ ಭದ್ರತೆಯನ್ನು ಒದಗಿಸಬೇಕು ಜೊತೆಗೆ ಅಗತ್ಯಕ್ಕೆ ತಕ್ಕಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ನಿಲಯದ ವಿದ್ಯಾರ್ಥಿಗಳು ಹಾಗೂ ಎ.ಐ.ಡಿ.ಎಸ್.ಒ ಆಗ್ರಹಿಸುತ್ತದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಎ.ಐ.ಡಿ.ಎಸ್.ಒ ಸಂಘಟನೆಯ ಕಾರ್ಯಕರ್ತರಾದ ಸುಷ್ಮಾ, ಸೌಮ್ಯ ಹಾಗೂ ವಿವಿಧ ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
