
ಹಾಸನ: ವಿವಿಧ ರೀತಿಯ ಮಾದಕ ವಸ್ತು ವ್ಯಸನ ಮತ್ತು ಅಕ್ರಮ ಕಳ್ಳ ಸಾಗಣೆ ಮಾಡಬಾರದು ಈ ಬಗ್ಗೆ ಯುವಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧೀಕಾರ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಾದಕ ವಸ್ತು ವ್ಯಸನ ಮತ್ತು ಅಕ್ರಮ ಕಳ್ಳ ಸಾಗಣೆ ವಿರೋಧಿ ದಿನವನ್ನು ಹಸಿರು ಬಾವುಟ ಪ್ರದರ್ಶಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು,
ಯಾವುದೇ ರೀತಿಯ ಮಾದಕ ವಸ್ತು ವ್ಯಸನ ಮತ್ತು ಅಕ್ರಮ ಕಳ್ಳ ಸಾಗಣೆ ಮಾಡಬಾರದು ಎಂದು ಈ ಬಗ್ಗೆ ಅರಿವು ಮೂಡಿಸಲು ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.
ಟೀನೇಜರ‍್ಸ್ ಗಳೆ ಹೆಚ್ಚು ಡ್ರಗ್ಸ್ ವ್ಯಸನಕ್ಕೆ ಶುರುಮಾಡುವ ಕಾಲ ಬಂದಿರುವುದರಿಂದ ಈ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದರು.
ಮಾದಕ ವಸ್ತು ವ್ಯಸನ ಸಮಸ್ಯೆಯು ವಿಶ್ವಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಸಮಸ್ಯೆಯಾಗಿದೆ. ಈ ವರ್ಷದ ಘೋಷಣೆ ಎಂದರೇ “ಸಾಕ್ಷ್ಯಗಳು ಸ್ಪಷ್ಟವಾಗಿದೆ – ತಡೆಗಟ್ಟವಲ್ಲಿ ಹೂಡಿಕೆ ಮಾಡಿ” ಎಂಬುವುದಾಗಿದೆ ಅಂದರೇ ಮಾದಕ ವಸ್ತಗಳನ್ನು ಬಳಸುವ ಜನರಿಗೆ ಗೌರವ ಮತ್ತು ಸಹಾನುಭೂತಿಯಿಂದ ಚಿಕಿತ್ಸೆ ನೀಡಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ವೆಂಕಟೇಶ್ ನಾಯ್ಡ್ ಮಾತನಾಡಿ, ಕೆಲ ಬೆಳವಣಿಗೆಯಿಂದ ಎಲ್ಲಾ ಕಡೆಯು ಇವತ್ತು ಹಣ ಒಂದು ಇದ್ದರೇ ಎಲ್ಲಾ ಸಿಗುತ್ತದೆ ಎಂದು ಕೊಂಡಿದ್ದೇವೆ. ದುಶ್ಚಟಗಳನ್ನು ತಡೆಗಟ್ಟಲು ಅದಕ್ಕೆ ಪರಿಹಾರವನ್ನು ಕುಟುಂಬದ ಹಂತದಲ್ಲೆ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾದಕ ದ್ರವ್ಯ ಸೇವನೆಯಿಂದ ದೈಹಿಕ ಮಾನಸಿಕ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳಿಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಇಂತಹ ಅಭ್ಯಾಸ ಇರುವವರು ಇದರಿಂದ ದೂರ ಇರುವ ಪ್ರತಿಜ್ಞೆ ಇಂದೇ ಮಾಡಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಕೆ. ದಾಕ್ಷಾಯಿಣಿ ಮಾತನಾಡಿ, ಕಾಲೇಜು ವಿದ್ಯಾರ್ಥಿನಿಯರು ಹೆಚ್ಚಾಗಿ ಮಾದಕ ವಸ್ತುಗಳನ್ನು ಸೇವನೆ ಮಾಡುವಂತದು ಕಂಡು ಬರುತ್ತಿದೆ. ಇದರ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುತ್ತದೆ. ಇಂತಹ ದುಶ್ಚಟಗಳಿ ಯುವಕರು ಬಲಿಯಾಗದೇ ಉತ್ತಮ ಜೀವನವನ್ನು ರೂಪಿಸಿಕೊಳ್ಳುವಲ್ಲಿ ಒಂದು ಸಾರ್ಥಕಥೆಯನ್ನು ತೋರಿಸಬೇಕಾಗಿದೆ ಎಂದರು.
ಯಾರು ಕೂಡ ಇಂತಹ ದುರಭ್ಯಾಸಗಳಿಗೆ ಬಲಿಯಾಗದೇ ಒಳ್ಳೆಯ ಭವಿಷ್ಯವನ್ನು ರೂಢಿಸಿಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಬಿ.ಎನ್. ಶಿವಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಹೆಚ್.ಸಿ. ಲೋಕೇಶ್, ತಾಲೂಕು ಆರೋಗ್ಯಾಧಿಕಾರಿ ವಿಜಯ ಗೊರೂರು, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಪಿ. ನಾಗೇಶ್ ಆರಾಧ್ಯ, ಜಿಲ್ಲಾ ರೋಗ ನಿಯಂತ್ರಣಾಧಿಕಾರಿ ಡಾ. ಜಿ.ಎಸ್. ನಾಗಪ್ಪ ಇತರರು ಉಪಸ್ಥಿತರಿದ್ದರು.


