
ನದಿಗಳ ಮಾಲಿನ್ಯ ಮನುಷ್ಯರ ಅಧೋಗತಿ ತೋರಿಸುತ್ತಿದೆ ಮಾಲಿನ್ಯದ ವಿರುದ್ದ ಹೊರಾಡುವುದು ಅನಿವಾರ್ಯ: ನಿರ್ಮಲಾ ಗೌಡ
ಹಾಸನ: ನದಿಗಳ ಮಾಲಿನ್ಯ ಕೇವಲ ನೀರಿನ ಕಲುಶತೆಯನ್ನುತೋರಿಸುತ್ತಿಲ್ಲ ಬದಲಾಗಿ ಮನುಷ್ಯರ ಅಧೋಗತಿಯನ್ನು ಹಾಗು ಮನುಷ್ಯರ ಮನಸ್ಸಿನ ಕಲ್ಮಶವನ್ನು ತೋರಿಸುತ್ತಿದೆ ಎಂದು ಪರಿಸರ ತಜ್ಞೆ ಹಾಗೂ ನದಿ ನೀರಿನ ಉಳಿವಿಗಾಗಿ ಹೋರಾಟ ನಡೆಸುತ್ತಿರುವ ನಿರ್ಮಲಾ ಗೌಡ ತಿಳಿಸಿದ್ದಾರೆ.
ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಹಸಿರು ಭೂಮಿ ಪ್ರತಿಷ್ಠಾನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಭಾರತ ಜ್ಞಾನ ವಿಜ್ಞಾನ ಸಮಿತಿ, ಪರಿಸರಕ್ಕಾಗಿ ನಾವು ಬಳಗ, ಕರ್ನಾಟಕ ಪ್ರಾಂತ ರೈತ ಸಂಘ, ಭಾರತೀಯ ರೆಡ್ ಕ್ರಾಸ್, ಭೂಸಿರಿ ವೇದಿಕೆ ಹಾಗೂ ಹಾಸನ ಜಿಲ್ಲಾ ಹಿರಿಯ ನಾಗರಿಕ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ನಡೆದ “ನದಿಗಳನ್ನು ಕೊಲ್ಲಬೇಕೆ?” ಎಂಬ ಸಂವಾದ ಕಾರ್ಯಕ್ರಮದಲ್ಲಿ ಪ್ರಜೆಕ್ಟರ್ ಮೂಲಕ ಮಾಲಿನ್ಯದ ಬಗ್ಗೆ ಪ್ರದರ್ಶಿಸಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ರಾಜ್ಯದಲ್ಲಿರುವ ಎಲ್ಲಾ ನದಿಗಳು ಮಾಲಿನ್ಯವಾಗುತ್ತಿದೆ ಎಂಬ ಗಂಭೀರ ಅಂಶವನ್ನು ಸಭೆಯಲ್ಲಿ ನೆರೆದಿದ್ದವರಿಗೆ ಮನದಟ್ಟಾಗುವಂತೆ ಮಾಡಲು ಯಶಸ್ವಿಯಾದರು.
ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ನದಿಗಳ ಮಾಲಿನ್ಯತೆಯ ಚಿತ್ರಗಳನ್ನು ತೋರಿಸುತ್ತಾ ಅದಕ್ಕೆ ಕಾರಣಗಳನ್ನು ವಿವರಿಸಿತ್ತ ಹೋದ ನಿರ್ಮಲ ಗೌಡ, ಪ್ರಥಮವಾಗಿ ಹಾಸನ ಸಮೀಪದ ಹಾಲವಾಗಿಲಿನಲ್ಲಿ ಯಗಚಿ ನದಿಗೆ ಹಾಸನದ ಕೊಳೆಚೆ ನೀರು ಸೇರ್ಪಡೆಗೊಳ್ಳುತ್ತಿರುವುದನ್ನೇ ಉದಾಹರಣೆಯಾಗಿ ತೆಗೆದುಕೊಂಡು, ಹೇಗೆ ನದಿಗಳು ಮಲಿನವಾಗುತ್ತಿದೆ ಎನ್ನುವುದನ್ನು ವಿವರಿಸಿದರು.
ಇದೇ ರೀತಿ ಯಗಚಿ ನದಿಗೆ ಹಾಸನದ ತ್ಯಾಜ್ಯನೀರು ಹಾಗೂ ಕೈಗಾರಿಕಾ ತ್ಯಾಜ್ಯದ ನೀರನ್ನು ಹರಿಸುವುದನ್ನು ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಯಗಚಿ ನದಿಯು ಬೆಂಗಳೂರಿನ ಕೆಂಗೇರಿ ಮೋರಿಯಂತಾಗುತ್ತದೆ ಎಂದು ಎಚ್ಚರಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅನೇಕ ಶಾಲಾ ಕಾಲೇಜು ಮಕ್ಕಳಿಗೆ “ನಿಜವಾಗಿಯೂ ನಿಮಗೆ ಏನು ಇಷ್ಟವಾಗುತ್ತಿದೆ” ಎಂದು ಪ್ರಶ್ನೆಯನ್ನು ಕೇಳಿ, ನಂತರ ಸುಂದರ ಪರಿಸರದ ಚಿತ್ರಣವನ್ನು ತೋರಿಸಿ ಎಲ್ಲಾ ಮಕ್ಕಳು ಪರಿಸರ ಎಂದರೆ ಇಷ್ಟ ಎಂದಾಗ, “ಪರಿಸರವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆಯಲ್ಲವೇ?” ಎನ್ನುತ್ತಾ, ನಮಗೆ ಇಷ್ಟವಾಗುವುದನ್ನು ನಾವೇ ಕಾಪಾಡಿಕೊಳ್ಳಬೇಕು ಎಂಬ ಸಂದೇಶವನ್ನು ಸೂಚ್ಯವಾಗಿ ನೀಡಿದರು.
ಎತ್ತಿನಹೊಳೆ ಯೋಜನೆಯಿಂದಾಗಿಯೂ ನದಿಗಳ ಹಾಗೂ ಪರಿಸರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎನ್ನುತ್ತಾ, “ಎದ್ದು ನಿಂತು ಮಾತನಾಡಿದಾಗ ಮಾತ್ರ ಸಮಸ್ಯೆಗೆ ಪರಿಹಾರದ ದಾರಿಯನ್ನು ಕಂಡುಕೊಳ್ಳಲು ಸಾಧ್ಯ” ಎಂದು ತಿಳಿಸಿದರು.
ನದಿ ತ್ಯಾಜ್ಯ ತಡೆಗಟ್ಟಲು ನಿರ್ಮಲ ಗೌಡ ಅವರ ಸಲಹೆಗಳು, ನದಿ ನೀರು ಕಲುಷಿತ ಗೊಳ್ಳುತ್ತಿರುವುದಕ್ಕೆ ಮೂಲ ಕಾರಣಗಳನ್ನು ಹುಡುಕುವುದು, ಈ ಮಾಲಿನ್ಯವನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತಿಸುವುದು, ಸಮಸ್ಯೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಉಂಟು ಮಾಡುವಂತೆ ಮಾಡುವುದು, ಮಾಲಿನ್ಯದ ಕುರಿತುಸರ್ಕಾರದ ಗಮನ ಸೆಳೆಯುವುದು ಹಾಗೂ ಒತ್ತಡ ಹೇರುವುದು, ನ್ಯಾಯಾಂಗದ ಮೊರೆ ಹೋಗುವುದು ಮತ್ತು ಮಾಲಿನ್ಯದ ವಿರುದ್ದ ಹೊರಾಡುವುದು ಎಂದು ಸಲಹೆ ಕೊಟ್ಟರು.
ಪ್ರಸ್ತಾವಿಕವಾಗಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎಲ್. ಮಲ್ಲೇಶಗೌಡ ಮಾತನಾಡಿ, ಹಿಂದೆ ಮಣ್ಣು ಶುದ್ಧವಾಗಿತ್ತು. ಕಳೆದ ಐದು ದಶಕಗಳಲ್ಲಿ ಮಣ್ಣು ಸಂಪೂರ್ಣವಾಗಿ ಮಲಿನಗೊಂಡಿದೆ ಅದ್ದರಿಂದಾಗಿ ನೀರು ಗಾಳಿ ಎಲ್ಲದರ ಮೇಲು ಪರಿಣಾಮ ಬೀರಿದೆ. ಸದ್ಯ ದೊಡ್ಡ ಪ್ರಮಾಣದ ಪರಿಸರ ಹತ್ಯೆ ಹಾಗೂ ಸಣ್ಣ ಪ್ರಮಾಣದ ಅರಿವು ಮೂಡುತ್ತಿದ್ದು, ಅಸಹಜತೆಯ ಆಕಾಶಕ್ಕೆ ಹಾರುತ್ತ ಸಹಜತೆ ಕಳೆದುಕೊಂಡಿದ್ದು ಮಕ್ಕಳಿಗೆ ಅದರ ಅರಿವು ಮೂಡಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷರಾದ ಆರ್.ಪಿ. ವೆಂಕಟೇಶಮೂರ್ತಿ ಮಾತನಾಡಿ, ಪ್ರಸ್ತೂತ ಪರಿಸ್ಥಿತಿ ತೀರಾ ತೀರಾ ಗಂಭೀರವಾಗುತ್ತಿದೆ. ಹವಾಮಾನ ತುರ್ತು ಪರಿಸ್ಥಿತಿ ಬಂದಿದೆ ಎಂದು ವಿಜ್ಞಾನಿಗಳು ನೀಡುತ್ತಿದ್ದ ಎಚ್ಚರಿಕೆ ನಿಜವಾಗುತ್ತಿದೆ. ವಿಶ್ವದ ಹಲವೆಡೆ ತಾಪಮಾನ ೫೦ ಡಿಗ್ರಿ ಸೆಲ್ಸಿಯಸ್ ದಾಟಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ೨೦೫೦ರ ಹೊತ್ತಿಗೆ ಜಾಗತಿಕ ತಾಪಮಾನ ಸರಾಸರಿ ಮೂರು ಡಿಗ್ರಿ ಸೆಲ್ಸಿಯಸ್ ಮತ್ತು ೨೧೦೦ರ ಇಸವಿ ವೇಳೆಗೆ ೮ ಡಿಗ್ರಿ ಸೆಲ್ಸಿಯಸ್ ನಷ್ಟು ಏರಿಕೆ ಆಗಲಿದೆ ಎಂದು ತಜ್ಞರು ಅಂದಾಜು ಮಾಡುತ್ತಿದ್ದಾರೆ. ಅಂತಹ ತಾಪಮಾನದಲ್ಲಿ ಈ ಭೂಮಿಯ ಮೇಲೆ ಯಾವ ಜೀವಸಂಕುಲಗಳು ಉಳಿದಿರಲಾರವು. ಪರಿಸ್ಥಿತಿ ಇಷ್ಟೊಂದು ಹದಗೆಡಲು ಪರಿಸರದ ಮೇಲೆ ನಡೆದಿರುವ ಅವ್ಯಾಹತ ದೌರ್ಜನ್ಯವೇ ಕಾರಣ ಎಂಬುದು ಎಲ್ಲರಿಗೂ ಗೊತ್ತಿದೆ. ನಾಗರಿಕತೆ ಮತ್ತು ಅಭಿವೃದ್ಧಿ ಹೆಸರಿನಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಬರೆದು ಮಾಡುತ್ತಿದ್ದೇವೆ. ಹಲವು ಬಗೆಯ ಹಸಿರು ಮನೆ ಅನಿಲಗಳನ್ನು ಹೊರ ಬಿಟ್ಟು ಭೂಮಿಯ ತಾಪಮಾನ ಹೆಚ್ಚಿಸಿದ್ದೇವೆ. ವಾಯುಮಾಲಿನ್ಯ ಹೆಚ್ಚುತ್ತಿದೆ ಮಣ್ಣು ಮತ್ತು ನೀರಿಗೆ ನಾನಾ ಬಗೆಯ ವಿಷ ಹಾಕಿ ಜಲಮೂಲಗಳನ್ನೆಲ್ಲ ಕೊಲ್ಲುತ್ತಿದ್ದೇವೆ. ಮಾಡು ಇಲ್ಲವೇ ಮಡಿ ಎಂಬ ಸ್ಥಿತಿ ಬಂದಿರುವ ಈ ಹೊತ್ತಿನಲ್ಲಿ ಜಗತ್ತಿನಾದ್ಯಂತ ಸಾವಿರಾರು ಚಿಂತಕರು, ಹೋರಾಟಗಾರರು, ನಿಜವಾದ ಪರಿಸರ ಕಾಳಜಿ ಉಳ್ಳವರು ಪರಿಸರ ಸಂರಕ್ಷಣೆಗಾಗಿ ಧ್ವನಿ ಎತ್ತುತ್ತಿದ್ದಾರೆ ಎಂದರು.
ಇದೆ ವೇಳೆ ಚಿಕ್ಕಬಳ್ಳಾಪುರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ, ಭಾರತೀಯ ರೆಡ್ ಕ್ರಾಸ್ ಸಭಾಪತಿ ಹೆಚ್.ಪಿ. ಮೋಹನ್, ಅನಂತಕುಮಾರ್, ನಿವೃತ್ತ ತಹಸೀಲ್ದಾರ್ ರುದ್ರಾಪ್ಪಾಜಿ, ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಸೇರಿದಂತೆ ವಿವಿಧ ಪರಿಸರ ಹೋರಾಟಗಾರರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಮತ್ತು ಶಾಲಾ ಕಾಲೇಜು ಮಕ್ಕಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಹಸಿರು ಭೂಮಿ ಪ್ರತಿಷ್ಠಾನದ ಅಪ್ಪಾಜಿಗೌಡ ಕಾರ್ಯಕ್ರಮ ನಿರೂಪಿಸಿದರು. ಎಂ.ಜಿ. ಪೃಥ್ವಿ ಸ್ವಾಗತಿಸಿದರು.




