
ಹಾಸನ: ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಸಂಬಂಧ ಮತ್ತು ಭ್ರಷ್ಟಾಚಾರಕ್ಕೆ ಕಾರಣಕರ್ತರಾದ ಮುಖ್ಯಮಂತ್ರಿಗಳು, ಭಾಗಿಯಾಗಿರುವ ಆರೋಪ ಹೊತ್ತ ಸಚಿವ ಶರಣಪ್ರಕಾಶ್ ಪಾಟೀಲ್ ಮತ್ತು ನಿಗಮದ ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸುವ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲ ಅವರಿಗೆ ಮನವಿ ಸಲ್ಲಿಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ. ವೃತ್ತದಲ್ಲಿ ಕೆಲ ಸಮಯ ಮಾನವ ಸರಪಳಿ ನಿರ್ಮಿಸಿ ನಂತರ ಬಿ.ಎಂ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಬಂದರು.
ಇದೆ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾಧ್ಯಮದೊಂದಿಗೆ ಮಾತನಾಡಿ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸುಮಾರು ೧೮೭ ಕೋಟಿ ರೂ.ಗಳ ಭಾರಿ ಮೊತ್ತದ ಭ್ರಷ್ಟಾಚಾರ ನಡೆದಿದೆ.
ಈ ಸಂಬಂಧ ಮುಖ್ಯಮಂತ್ರಿಗಳು, ಭಾಗಿಯಾಗಿರುವ ಆರೋಪ ಹೊತ್ತ ಸಚಿವ ಶರಣಪ್ರಕಾಶ್ ಪಾಟೀಲ್ ಮತ್ತು ನಿಗಮದ ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.
ಪರಿಶಿಷ್ಟ ಪಂಗಡಗಳ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ೧೮೭ ಕೋಟಿ ಮೊತ್ತದ ಬೃಹತ್ ಹಗರಣದಲ್ಲಿ ಭಾಗಿಯಾದ ಕಾಂಗ್ರೆಸ್ ಸರಕಾರ ಮತ್ತು ಹಣಕಾಸು ಇಲಾಖೆಯ ಜವಾಬ್ದಾರಿ ನಿರ್ವಹಿಸುತ್ತಿರುವ ಮುಖ್ಯಮಂತ್ರಿಗಳ ವಿರುದ್ಧ ಈಗಾಗಲೇ ಎಸ್‌ಟಿ ಮೋರ್ಚಾ ರಾಜ್ಯಾದ್ಯಂತ ಹೋರಾಟ ಮಾಡುತ್ತಿದೆ. ೧೮೭ ಕೋಟಿ ಹಣದಲ್ಲಿ ಬಹಳಷ್ಟು ಮೊತ್ತ ದುರ್ಬಳಕೆ ಆಗಿದೆ. ೮೯ ಕೋಟಿ ಹಣವನ್ನು ಲೀಲಾಜಾಲವಾಗಿ ಬಳಸಿಕೊಂಡಿದ್ದಾರೆ.
೭೦೦ಕ್ಕೂ ಅಧಿಕ ನಕಲಿ ಖಾತೆಗಳಿಗೆ ಹಣ ವರ್ಗಾವಣೆ ಮಾಡುವ ಮೂಲಕ ಹಣ ದುರ್ಬಳಕೆ ಆಗಿದೆ. ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ದಾವಣಗೆರೆ, ತೆಲಂಗಾಣದ ಹೈದರಾಬಾದ್ ಗಳಲ್ಲಿ ಖಾತೆ ತೆರೆಯಲಾಗಿತ್ತು ಎಂಬುದು ಇಲ್ಲಿ ಗಮನಾರ್ಹ ಅಂಶವಾಗಿದೆ ಎಂದು ದೂರಿದರು.
ಕೂಲಿ ಕಾರ್ಮಿಕರು, ದನ, ಎಮ್ಮೆ ಕಾಯುವ ಅಮಾಯಕ ವ್ಯಕ್ತಿಗಳಿಗೆ ೨ ಲಕ್ಷದಿಂದ ೫ ಲಕ್ಷದವರೆಗೆ ಹಣ ಹಾಕಿ ವಿತ್ ಡ್ರಾ ಮಾಡಿ ಲೋಕಸಭಾ ಚುನಾವಣೆಗೆ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಿಗೆ ಬಳಸಿಕೊಂಡ ಮಾಹಿತಿ ಇದೆ. ಎಂಡಿ ಪದ್ಮನಾಭ ತಮ್ಮ ಸಹಿ ಅಲ್ಲ ಎಂದು ಹೇಳಿದರೆ, ಅದು ಅವರದೇ ಸಹಿ ಎಂದು ಬ್ಯಾಂಕಿನವರು ಹೇಳಿದ್ದಾರೆ. ಇದರಲ್ಲಿ ಯಾವುದು ಸತ್ಯ ಎಂಬುದು ಪತ್ತೆ ಆಗಬೇಕಿದೆ. ಬೇರೊಂದು ಬ್ಯಾಂಕಿನಲ್ಲಿ ಖಾತೆ ತೆರೆದಾಗ ಆರ್ಥಿಕ ಇಲಾಖೆ ಗಮನಕ್ಕೆ ಯಾಕೆ ಬರಲಿಲ್ಲ? ಸ್ವತಃ ಹಣಕಾಸು ಇಲಾಖೆ ಜವಾಬ್ದಾರಿ ನಿರ್ವಹಿಸುವ ಸಿದ್ದರಾಮಯ್ಯನವರು ಇದಕ್ಕೆ ಹೊಣೆಗಾರರಲ್ಲವೇ? ಆ ಹಣವನ್ನು ಮರುವರ್ಗಾವಣೆ ಮಾಡಿಸಿದ ವ್ಯಕ್ತಿಗಳು ಯಾರಾರು? ಯಾಕೆ ಅವರನ್ನು ಬಂಧಿಸಿಲ್ಲ? ಅವರನ್ನು ಯಾಕೆ ತನಿಖೆಗೆ ಒಳಪಡಿಸಿಲ್ಲ ಎಂಬ ಪ್ರಶ್ನೆಗಳಿಗೂ ಉತ್ತರ ಸಿಗಬೇಕಿದೆ.
ಇದು ಬಹುರಾಜ್ಯಗಳ ಹಗರಣವಾಗಿರುವ ಕಾರಣ ಸಮಗ್ರ ತನಿಖೆಯನ್ನು ಸಿಬಿಐ ನಡೆಸಬೇಕು ಎಂಬ ಹಕ್ಕೊತ್ತಾಯ ನಮ್ಮದು. ಈ ವಿಷಯಗಳನ್ನು ತಮ್ಮ ಅವಗಾಹನೆಗೆ ತರುತ್ತಿದ್ದು, ಹಗರಣದಲ್ಲಿ ಸಂಬಂಧಿತರ ರಾಜೀನಾಮೆಗೆ ಮತ್ತು ಸಿಬಿಐ ತನಿಖೆಗೆ ಆಗ್ರಹಿಸುತ್ತಿದ್ದೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಮೀತ್ ಶೆಟ್ಟಿ, ಯುವ ಮೋರ್ಚಾದ ಬಿ.ಹೆಚ್. ನಾರಾಯಣಗೌಡ, ವಾಲ್ಮೀಕಿ ಸಂಘದ ಜಿಲ್ಲಾಧ್ಯಕ್ಷ ರವಿಕುಮಾರ್, ಪಕ್ಷದ ಮುಖಂಡರಾದ ಶೋಭನ್ ಬಾಬು, ಚನ್ನಕೇಶವ, ಪ್ರೀತಿವರ್ಧನ್, ವೇಧವತಿ, ವಿಜಯಲಕ್ಷ್ಮಿ, ರತ್ನಪ್ರಕಾಶ್, ವಕೀಲರು ಶ್ರೀಕಾಂತ್, ಹರ್ಷಿತ್, ಮೋಹನ್ ಇತರರು ಉಪಸ್ಥಿತರಿದ್ದರು.

