
ಹಾಸನ : ಸಂಸಾರದಲ್ಲಿ ಗದ್ದಲ ಉಂಟಾಗಿ ಎಸ್ಪಿ ಅವರಿಗೆ ದೂರು ನೀಡಲು ಬಂದ ಪತ್ನಿ ಅವರನ್ನು ಪೊಲೀಸ್ ಮುಖ್ಯ ಪೇದೆ ಜಿಲ್ಲಾ ಪೊಲೀಸ್ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಸೋಮವಾರ ಬೆಳಿಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಆವರಣದಲ್ಲೆ ನಡೆದಿದೆ.
ಅಂತರ್ ಜಾತಿ ವಿವಾಹವಾಗಿರುವ ನಗರದ ಹೊರ ವಲಯದ ಚನ್ನಪಟ್ಟಣ ಬಡಾವಣೆಯ ಮಮತ ಮತ್ತು ಹಾಗು ಕೆ.ಆರ್ ಪುರಂ ನ ಲೋಕನಾಥ್ ಕಳೆದ ೧೭ ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು.
ಆಗಾಗ್ಗೆ ಕುಟುಂಬ ಕಲಾಹಗಳು ನಡೆಯುತ್ತಿತ್ತು. ಈ ಹಿನ್ನಲೆಯಲ್ಲಿ ಸೋಮವಾರದಂದು ಸುಮಾರು ಬೆಳಿಗ್ಗೆ ೧೧ ಗಂಟೆಯ ಸಮಯದಲ್ಲಿ ಎಸ್ಪಿ ಕಚೇರಿಗೆ ದೂರು ಕೊಡಲೆಂದು ಕಛೇರಿಗೆ ಬಂದಾಗ ತಾಲೂಕಿನ ಶಾಂತಿಗ್ರಾಮ ವೃತ್ತ ಕಛೇರಿಯಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಮುಖ್ಯ ಪೇದೆ ಲೋಕನಾಥ್ ಹಿಂದಿನಿಂದ ಬಂದು ತನ್ನ ಪತ್ನಿಗೆ ಚಾಕು ಹಾಕಿದ್ದಾನೆ.
ತಕ್ಷಣ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.
ಈ ವೇಳೆ ಆಕೆಯ ರಕ್ತ ಎಸ್ಪಿ ಕಛೇರಿ ಆವರಣದಲ್ಲಿ ನೆಲದ ಮೇಲೆ ಹರಿದಾಡಿದೆ. ಶವಗಾರದ ಬಳಿ ಆಕೆಯ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿತ್ತು.
ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕೊಲೆಯಾದ ಮಮತಾ ಅವರ ತಂದೆ ಶಾಮಣ್ಣ ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ನಗರದ ಹೊರ ವಲಯದ ಚನ್ನಪಟ್ಟಣ ಬಡಾವಣೆಯ ಮಮತ ಹಾಗು ಕೆ.ಆರ್ ಪುರಂ ನ ಲೋಕನಾಥ್ ಎಂಬುವರು ೧೭ ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಶಾಮಣ್ಣನ ಮಗಳು ಮಮತಾ ಹಾಗು ಲೋಕನಾಥ್ ದಂಪತಿಗಳು. ಆರಂಭದ ದಿನದಿಂದಲೂ ಹೆಂಡತಿಗೆ ಕಿರುಕುಳ ಕೊಡಲಾಗುತಿತ್ತು ಎನ್ನಲಾಗಿದ್ದು, ಆಸ್ತಿ, ಸೈಟ್ ಹಾಗು ಹಣಕ್ಕಾಗಿ ಪೀಡಿಸುತ್ತಿದ್ದ ಎಂದು ಅಳಿಯ ಲೋಕನಾಥ್ ಬಗ್ಗೆ ಮಮತಾ ತಂದೆ ಶಾಮಣ್ಣ ಗಂಭೀರವಾಗಿ ಆರೋಪಿಸಿದ್ದಾರೆ.
ಈ ಹಿಂದೆ ಕೂಡ ನನ್ನ ಮಗಳಿಗೆ ಲೋಕನಾಥ್ ದೈಹಿಕವಾಗಿ ಹಲ್ಲೆ ಮಾಡಿದ್ದು, ಸಾಕಷ್ಟು ಕಿರುಕುಳ ಕೊಟ್ಟರೂ ಮಗಳು ಎಲ್ಲವನ್ನು ಸಹಿಸಿಕೊಂಡು ಸುಮ್ಮನಿದ್ದಳು. ಪೊಲೀಸರಿಗೆ ದೂರು ಕೊಡು ಎಂದರೆ ಮರ್ಯಾದೆಗಂಜಿ ಸುಮ್ಮನಾಗಿದ್ದಳು.
ಈಗ ಮೂರು ದಿನಗಳಿಂದ ಏನಾಯ್ತೊ ಗೊತ್ತಿಲ್ಲ. ಮಗಳನ್ನ ಬರ್ಬರವಾಗಿ ಕೊಂದಿದ್ದಾನೆ. ಅವನಿಗೆ ಕಠಿಣ ಶಿಕ್ಷೆ ಆಗಬೇಕು.ಅವರ ಪೋಷಕರಿಂದಲೂ ಮಗಳಿಗೆ ಕಿರುಕುಳ ಆಗಿದೆ. ಎಲ್ಲರ ವಿರುದ್ದ ಕಠಿಣ ಕ್ರಮ ಆಗಬೇಕು ಎಂದು ಹಾಸನದ ವೈದ್ಯಕೀಯ ಆಸ್ಪತ್ರೆಯ ಶವಾಗಾರದ ಬಳಿ ತಂದೆ ಶಾಮಣ್ಣ ಹೇಳಿಕೆ ನೀಡಿ ಆಗ್ರಹಿಸಿದ್ದಾರೆ.
ಎಸ್ಪಿ ಮೊಹಮ್ಮದ್ ಸುಜೀತಾ ಮಾಧ್ಯಮದೊಂದಿಗೆ ಮಾತನಾಡಿ, ನಗರದಲ್ಲಿ ಎಸ್ಪಿ ಕಛೇರಿ ಆವರಣದಲ್ಲಿ ಪತಿಯಿಂದ ಪತ್ನಿಗೆ ಚಾಕುವಿನಿಂದ ಇರಿತ ಪ್ರಕರಣದ ವಿಚಾರವಾಗಿ ಶವಾಗಾರಕ್ಕೆ ಬೇಟಿ ನೀಡಿ ಕುಟುಂಬ ಸದಸ್ಯರಿಂದ ಮಾಹಿತಿ ಪಡೆಯಲಾಗಿದೆ.
ಕೌಟುಂಬಿಕ ಸಮಸ್ಯೆಯಿಂದ ಹತ್ಯೆಯಾಗಿದೆ ಎಂದು ಸಂಬಂದಿಕರು ಮಾಹಿತಿ ನೀಡಿದ್ದಾರೆ.
ಬೆಳಿಗ್ಗೆ ಇಬ್ಬರ ನಡುವೆ ಗಲಾಟೆ ಆಗಿ ಪೊಲೀಸರಿಗೆ ದೂರು ಕೊಡೊದಾಗಿ ಹೇಳಿ ಪತ್ನಿ ಬಂದಿದಾರೆ.
ಈ ವೇಳೆ ಪತಿ ಬಂದು ಚಾಕುವಿನಿಂದ ದಾಳಿ ಆಗಿರೊ ಬಗ್ಗೆ ಮಾಹಿತಿ ಇದೆ. ಪೊಲೀಸರಿಗೆ ದೂರು ನೀಡಲು ಬಂದ ವೇಳೆ ಕಛೇರಿ ಹೊರಗೆ ನಿಂತು ಇಬ್ಬರು ಮಾತನಾಡಿದ್ದಾರೆ.
ಈ ವೇಳೆ ಪತಿ ದಾಳಿ ಮಾಡಿದಾಗ ಆಕೆ ರಕ್ಷಣೆಗಾಗಿ ಎಸ್ಪಿ ಕಚೇರಿಯತ್ತ ಓಡಿ ಬಂದಿದ್ದಾರೆ. ತಮ್ಮ ಕಛೇರಿ ಆವರಣದ ಒಳಗೆ ಓಡಿ ಬಂದ ವೇಳೆ ಸ್ಥಳದಲ್ಲಿ ಇದ್ದ ನಮ್ಮ ಪೊಲೀಸರು ಆಕೆಯನ್ನ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಎಸ್ಪಿ ಕಛೇರಿಯ ಹೊರಗೆ ಚಾಕುವಿನಿಂದ ಇರಿಯಲಾಗಿದೆ. ತನ್ನ ಮೇಲೆ ದಾಳಿ ಆದ ಬಳಿಕ ಆಕೆ ರಕ್ಷಣೆಗಾಗಿ ಕಛೇರಿಯತ್ತ ಬಂದಿದ್ದಾರೆ.
ಆರೋಪಿ ಲೋಕನಾಥ್ ಸಿಪಿಐ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದು, ಘಟನೆ ಬಳಿಕ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಸಂಬಂದಿಕರು ದೂರು ನೀಡಿದ ಬಳಿಕ ಘಟನೆಗೆ ಕಾರಣ ಏನು ಎನ್ನೋದು ತಿಳಿಯಲಿದೆ ಎಂದರು.
