ಸಕಲೇಶಪುರ : ಮೇ 15 – ಜೈ ಕರ್ನಾಟಕ ಸಂಘ ಬೆಳ್ಳೇಕೆರೆ (ರಿ) ಇದರ ವತಿಯಿಂದ ಸಕಲೇಶಪುರ ತಾಲ್ಲೂಕಿನ ರಕ್ಷಿದಿ ಗ್ರಾಮದ ಪೂರ್ಣಚಂದ್ರ ತೇಜಸ್ವಿ ರಂಗಮಂದಿರದಲ್ಲಿ “ಅಭಿನಯ ಪ್ರವೇಶಿಕೆ – ರಂಗ ಕಾರ್ಯಾಗಾರ 2025″ರ ಸಮಾರೋಪ ಸಮಾರಂಭದ ಅಂಗವಾಗಿ “ರಾಜಕುಮಾರ…ತಾಳು” ಎಂಬ ವಿಶಿಷ್ಟ ನಾಟಕದ ಪ್ರದರ್ಶನ ನಡೆಯಿತು.

“ರಾಜಕುಮಾರ…ತಾಳು” ಎಂಬ ಹೆಸರಿನಲ್ಲಿ ಪ್ರಸ್ತುತಗೊಂಡ ಈ ನಾಟಕವು ಭಾರತೀಯ ಜಾನಪದ ಪರಂಪರೆ ಮತ್ತು ಪೌರಾತ್ಯ ಕಥನ ಶೈಲಿಯಲ್ಲಿ ಮೂಡಿ ಬಂತು.ಗುಜರಾತಿ ಮೂಲದ ಜನಪದ ಕತೆ ‘ಸಬರ್’ ಆಧಾರಿತ ಈ ನಾಟಕ, ಶೇಕ್ಸ್‌ಪಿಯರ್ ಅವರ “ಕಿಂಗ್ ಲಿಯರ್” ನ ಕಥಾ ವಿನ್ಯಾಸದಂತೆ ನಾಟಕ ಸಾಗಿತು.ಹೆಸರಾಂತ ವಿಮರ್ಶಕರಾದ ಎ.ಕೆ. ರಾಮಾನುಜನ್ ಸಂಕಲಿಸಿದ ‘ಭಾರತೀಯ ಜನಪದ ಕಥೆಗಳು’ಯಿಂದ ಪ್ರೇರಣೆ ಪಡೆದ ಈ ರಂಗಪ್ರದರ್ಶನ ಪೌರಾತ್ಯ ಜಾನಪದ ಜಾಡಿನಲ್ಲಿ ರೂಪುಗೊಂಡಿದೆ.ನಾಟಕದ ಪಾತ್ರಗಳಿಗೆ ಕಲಾವಿದರು ಸೊಗಸಾಗಿ ಜೀವ ತುಂಬಿದರು.

ರಾಜನ ದುರಂಕಾರದ ವರ್ತನೆ, ರಾಜನ ಮಕ್ಕಳ ಭಿನ್ನ ಚಿಂತನೆ, ರಾಜಕುಮಾರಿಯ ದಿಟ್ಟ ನಿಲುವು, ರಾಜಕುಮಾರನ ಪ್ರವೇಶ, ಪ್ರೀತಿಯ ಕ್ಷಣಗಳು, ವಿರಹ ಮತ್ತು ಕೊನೆಗೆ ಪ್ರೇಮಿಗಳ ಮಿಲನ. ಬೆಳಕು, ಧ್ವನಿ, ಹಿನ್ನಲೆ ಸಂಗೀತ ಹಾಗೂ ಕಥೆಯ ವಿವರಣೆ ಚಂದವಾಗಿ ಮೂಡಿಬಂತು.

ಮಲೆನಾಡಿನ ತಣ್ಣನೆಯ 20 ಡಿಗ್ರಿ ಸೆಲ್ಸಿಯಸ್ ಹವಾಮಾನದಲ್ಲಿ ರಕ್ಷಿದಿ ಗ್ರಾಮದ ಪೂರ್ಣಚಂದ್ರ ತೇಜಸ್ವಿ ರಂಗಮಂದಿರದಲ್ಲಿ ಯುವ ಪ್ರತಿಭೆಗಳ ಮನಮುಟ್ಟಿದ ಪ್ರದರ್ಶನ ನಡೆಯಿತು.

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕೆ.ಎ.ಎಸ್. ಅಧಿಕಾರಿಯಾದ ಗಿರೀಶ್ ನಂದನ್ (ಸಹಾಯಕ ಆಯುಕ್ತರು, ಬಿ.ಬಿ.ಎಮ್.ಪಿ., ಬೆಂಗಳೂರು) ಹಾಜರಿದ್ದರು.

ಅವರ ಹತ್ತನೇ ತರಗತಿಯ ಪುತ್ರಿ ತಿಯಾ ನಂದನ್ ಅವರಿಗೂ ಇದು ಮೊದಲ ನಾಟಕ ಪ್ರದರ್ಶನವಾಗಿದ್ದು, ಪತ್ನಿ ಸಹ ಜೊತೆಯಲ್ಲಿದ್ದರು.ನಾಟಕದ ಸಂಪೂರ್ಣ ನೇತೃತ್ವ ವಹಿಸಿದ್ದ ರಂಗಕರ್ಮಿ ಪ್ರಸಾದ್ ರಕ್ಷಿದಿ, ನಾಟಕದ ಹಿನ್ನೆಲೆ ವಿವರಿಸಿದರು.

ಎಸ್.ಕೆ. ಕರೀಂ ಖಾನ್ ರವರ ರಚನೆಯ ನಾಟಕವೊಂದನ್ನು ಪ್ರದರ್ಶಿಸುವ ಯೋಜನೆ ಇದ್ದರೂ ಕಲಾವಿದರ ಕೊರತೆ ಹಾಗೂ ಸಮಯದ ಅಭಾವದಿಂದ ಅದು ಸಾಧ್ಯವಾಗಲಿಲ್ಲ. ಆದರೂ 15 ದಿನಗಳ ಅವಧಿಯಲ್ಲಿ ಶಿಬಿರಾರ್ಥಿಗಳ ಮೂಲಕ ಈ ನಾಟಕವನ್ನು ತರಬೇತಿ ನೀಡಿ, ಪ್ರದರ್ಶನ ನೀಡಲಾಗಿದೆ ಎಂದು ಅವರು ತಿಳಿಸಿದರು.

ಸ್ಥಳೀಯ ಮುಖಂಡರು ಹಾಗೂ ಕಲಾ ಪ್ರೇಮಿಗಳಾದ ರಂಗನಾಥ್ ಮತ್ತು ರಾಜಕುಮಾರ್ ಅವರು ಸಹ ಉಪಸ್ಥಿತರಿದ್ದರು.ನಾಟಕಕ್ಕೆ ವಿನ್ಯಾಸ ಹಾಗೂ ನಿರ್ದೇಶನ ನವೀನ್ ಸಾಣೇಹಳ್ಳಿ ಅವರದ್ದು. ರಂಗತಂಡದ ಸಹಕಾರದೊಂದಿಗೆ ಸಾಂಸ್ಕೃತಿಕ ಸಂಗೀತ ಸಂಯೋಜನೆಯನ್ನು ರವಿ ಪೆರ್ಲಂಪಾಡಿ ಮಾಡಿದ್ದರು. ಸಹಾಯಕರಾಗಿ ಸ್ವರೂಪ್ ಹಾಗೂ ನಿರ್ವಹಣೆಯಲ್ಲಿ ವಿನಯ್ ಬೆಳ್ಳೇಕೆರೆ ಶ್ರಮಿಸಿದ್ದರು.

ರಂಗಮಂಟಪದಲ್ಲಿ ಅಭಿನಯಿಸಿದ ಕಲಾವಿದರು: ಹನ್ಸಿಕಾ.ವಿ., ಸಚಿನ್, ವಿಹಂಗಮ ಹರೀಶ್, ತಿಯಾ ನಂದನ್, ಧವನ್ ಪ್ರಾಣ್, ಸ್ವರೂಪ್, ರಾಧೆ ರಕ್ಷಿದಿ, ಶೋಭಾ ಉಗ್ಗಪ್ಪ, ರಮಾ ಸತೀಶ್ ಮತ್ತು ಬಿಂದು ರಕ್ಷಿದಿ.ನಾಟಕದ ಮೂಲಕ ಭಾರತೀಯ ಜಾನಪದ ಕಥನಗಳ ಮಹತ್ವ ಮತ್ತು ಅದರ ಆಧುನಿಕ ಅನ್ವಯತೆಯನ್ನು ಪ್ರೇಕ್ಷಕರು ಮೆಚ್ಚಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *