
ಸಕಲೇಶಪುರ: ಬಾಳ್ಳುಪೇಟೆ ರೈಲ್ವೆ ನಿಲ್ದಾಣದ ಹಳಿಯ ಆಚೆಯಲ್ಲಿರುವ ಮೋರಿಯಲ್ಲಿ ಸುಮಾರು 40-45 ವರ್ಷ ವಯಸ್ಸಿನ ಅಪರಿಚಿತ ಗಂಡಸಿನ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೇ 18 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದ್ದು, ಫಿರ್ಯಾದಿದಾರನ ಸ್ನೇಹಿತ ಶಿವಕುಮಾರ್ ಅವರು ಸ್ಥಳೀಯರಿಗೆ ಫೋನ್ ಮೂಲಕ ಮಾಹಿತಿ ನೀಡಿದ್ದಾರಂತೆ. ನಂತರ ಫಿರ್ಯಾದಿದಾರ ಸ್ಥಳಕ್ಕೆ ತೆರಳಿದಾಗ ಮೋರಿಯ ಒಳಗಡೆ ಶವವಿರುವುದು ಕಂಡುಬಂದಿತು.
ಶವದ ಮುಖ ಚಹರೆ ಇಲ್ಲದಂತಹ ಸ್ಥಿತಿಯಲ್ಲಿದ್ದು, ಸುಮಾರು 15 ದಿನಗಳ ಹಿಂದೆಯೇ ಮೃತ ವ್ಯಕ್ತಿ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ. 25/2025, ಬಿಎನ್‌ಎಸ್‌ಎಸ್ 2023ರ ಕಲಂ 194(4)ರಂತೆ ಪ್ರಕರಣ ದಾಖಲಾಗಿದ್ದು, ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ.
ಮೃತ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ಅಥವಾ ಅವರ ಪರಿಚಯವಿದ್ದರೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯನ್ನು ತಕ್ಷಣ ಸಂಪರ್ಕಿಸಲು ಸಾರ್ವಜನಿಕರಿಗೆ ವಿನಂತಿಸಲಾಗಿದೆ.
