
ಬೇಲೂರು : ಬಡವರ ಪ್ರಾಣದ ಜೊತೆ ಚೆಲ್ಲಾಟವಾಡುವುದು ಸರ್ಕಾರಕ್ಕೆ ಶೋಭೆ ತರುವ ವಿಚಾರವಲ್ಲಾ, ಬಡಕಾರ್ಮಿಕರ ಜೀವಕ್ಕೆ ಬೆಲೆಕಟ್ಟುವುದೇ ಪರಿಹಾರವಲ್ಲಾ, ಈ ಕೂಡಲೇ ಕಾಡಾನೆ- ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಉಸ್ತುವಾರಿ ಗಂಗಾಧರ್ ಬಹುಜನ್ ಆಗ್ರಹಿಸಿದರು.
ಕಳೆದ ಬುಧವಾರದಂದು ಕಾಡಾನೆಯೊಂದು ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಬೇಲೂರು ತಾಲೂಕು ಬಿಕ್ಕೋಡು ಹೋಬಳಿಯ ಅಂಕೀಹಳ್ಳಿ ಗಜೇಂದ್ರಪುರ ಗ್ರಾಮದ ಬಡಕೂಲಿ ಕಾರ್ಮಿಕರಾದ ಚಂದ್ರಕಲಾ ರವರನ್ನು ಬಲಿಪಡೆದಿತ್ತು,ಇಂದು ಅವರ ಮನೆಗೆ ಬೇಟಿ ನೀಡಿ ಮೃತರ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು, ಕಳೆದೆರಡು ವರ್ಷಗಳಿಂದ ಹಾಸನ ಜಿಲ್ಲೆಯ ಬೇಲೂರು, ಸಕಲೇಶಪುರ ಮತ್ತು ಆಲೂರು ತಾಲೂಕುಗಳಲ್ಲಿ ನೂರಕ್ಕೂ ಹೆಚ್ಚು ಜನ ರೈತರು ಕಾರ್ಮಿಕರು ಕಾಡಾನೆಗಳ ದಾಳಿಗೆ ತುತ್ತಾಗಿ ಸಾವಿಗೀಡಾಗಿದ್ದಾರೆ.
ಆದರೆ ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನೆಡೆಸಿ ಶಾಶ್ವತ ಪರಿಹಾರ ಕಂಡುಹಿಡಿಯುವ ಗೋಜಿಗೆ ಹೋಗದೇ ಕೇವಲ ಆನೆ ದಾಳಿಗೆ ಮೃತಪಟ್ಟಾಗ ಮಾತ್ರ ಮೃತರ ಮನೆಗೆ ಹೋಗಿ ಸಾಂತ್ವನ ಹೇಳಿ ಪರಿಹಾರದ ಚೆಕ್ ವಿತರಿಸಿ ಬಂದರೆ ನಮ್ಮ ಕೆಲಸ ಮುಗಿಯಿತು ಎಂದು ತಿಳಿದಂತಿದೆ.
ಈ ಬಗ್ಗೆ ಹೆಚ್ಚು ಒತ್ತಡ ಬಂದಾಗ ಅರಣ್ಯ ಇಲಾಖೆಯವರು ಕ್ಯಾಂಪ್ ಹಾಕಿ ಯಾವುದೋ ಒಂದು ಆನೆ ಹಿಡಿದು ಕೈ ತೊಳೆದುಕೊಳ್ಳುತ್ತಾರೆ. ರೇಡಿಯೋ ಕಾಲರ್ ಅಳವಡಿಸುವುದು, ಎಚ್ಚರಿಕೆ ಪಲಕ ಹಾಕುವುದು, ದಾಳಿಯಿಂದ ಮೃತಪಟ್ಟಾಗ ಪರಿಹಾರ ನೀಡುವುದು ಪರಿಹಾರವಲ್ಲಾ, ಬದಲಾಗಿ ಸರ್ಕಾರ ಈ ಬಗ್ಗೆ ಗಂಬೀರ ಚಿಂತನೆ ನೆಡೆಸಿ ಆನೆಗಳು ಕಾಡು ತೊರೆದು ನಾಡಿಗೆ ಬರಲು ಕಾರಣಗಳ ಬಗ್ಗೆ ಸಂಶೋಧನೆ ನೆಡೆಯಬೇಕಿದೆ.
ಆ ಮೂಲಕ ಕಾಡು ತೊರೆದು ಹಿಡುವಳಿ ಜಮೀನಿಗೆ ಬಂದು ಬೆಳೆಯನ್ನು ನಾಶಪಡಿಸಿ, ಮನುಷ್ಯರ ಪ್ರಾಣವನ್ನು ತೆಗೆಯುತ್ತಿರುವ ಎಲ್ಲಾ ಕಾಡಾನೆಗಳನ್ನು ಇಲ್ಲಿಂದ ಸ್ಥಳಾಂತರಗೊಳಿಸಬೇಕು ಮತ್ತೆ ಆನೆಗಳು ನಾಡಿಗೆ ಪ್ರವೇಶಿಸದಂತೆ ಕ್ರಮವಹಿಸಿ ಈ ನಿಟ್ಟಿನಲ್ಲಿ ಶಾಶ್ವತ ಪರಿಹಾರ ಕಲ್ಪಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಕರೆ ಕೊಡಬೇಕಾಗುತ್ತದೆ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ್ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹಾಜರಿದ್ದರು.
