
ಸಕಲೇಶಪುರ : ಕಳೆದ ಒಂದು ವಾರದಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದ ಕೌಡಹಳ್ಳಿಗೆ ಹೋಗುವ ರಸ್ತೆ ಸಂಪೂರ್ಣವಾಗಿ ಗುಂಡಿ ಬಿದ್ದಿದ್ದು ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿ ಮಾಡದಿದ್ದರೆ ಪ್ರತಿಭಟನೆ ನಡೆಸಲಾಗುವುದೆಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಸಕಲೇಶಪುರ ಪಟ್ಟಣದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಪ್ರೇಮನಗರ ಬಡಾವಣೆ ಮೂಲಕವಾಗಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕೌಡಹಳ್ಳಿಯ ಈ ರಸ್ತೆಯ ಮೂಲಕ ದಿನನಿತ್ಯ ಗ್ರಾಮಸ್ಥರು, ಮತ್ತು ಜೆಎಸ್ಎಸ್ ಬಿಎಡ್ ಕಾಲೇಜು, ಎನ್. ಕೆ. ಗಣಪಯ್ಯ ಶ್ರವಣ ದೋಷವುಳ್ಳ ಮಕ್ಕಳ ಶಾಲೆಗೆ ಹೋಗುವ ನೂರಾರು ವಿದ್ಯಾರ್ಥಿಗಳು ಬೃಹತ್ ಗಾತ್ರದಲ್ಲಿ ಗುಂಡಿ ಬಿದ್ದು ನೀರು ತುಂಬಿರುವ ಈ ರಸ್ತೆಯಲ್ಲಿಯೇ ಓಡಾಡುವ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ರಸ್ತೆಯು ಜಿಲ್ಲಾ ಪಂಚಾಯಿತಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದ್ದು ಅನೇಕ ಬಾರಿ ಸ್ಥಳೀಯ ಶಾಸಕರಾದ ಸಿಮೆಂಟ್ ಮಂಜುನಾಥ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ರಸ್ತೆ ದುರಸ್ತಿ ಪಡಿಸಿಕೊಡುವಂತೆ ಮನವಿ ಮಾಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಕೂಡಲೇ ರಸ್ತೆ ಸರಿಪಡಿಸದಿದ್ದರೆ ಇಲಾಖೆಯ ಮುಂದೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಆನೆ ಮಹಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ತಿಮ್ಮಯ್ಯ ಎಚ್ಚರಿಸಿದ್ದಾರೆ.
ಹೇಳಿಕೆ:-ಕಳೆದ ಹಲವಾರು ವರ್ಷಗಳಿಂದ ನಮ್ಮ ಕೌಡಹಳ್ಳಿಗೆ ಹೋಗುವ ರಸ್ತೆ ದೊಡ್ಡ ಗಾತ್ರದಲ್ಲಿ ಗುಂಡಿ ಬಿದ್ದಿದೆ ಡಾಂಬರ್ ಹಾಕಿಸಿಕೊಂಡುವಂತೆ ಶಾಸಕರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಹೋರಾಟವೊಂದೆ ನಮಗಿರುವ ಮಾರ್ಗ. ತಿಮ್ಮಯ್ಯ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನೆಮಹಲ್ ಗ್ರಾಮ ಪಂಚಾಯಿತಿ.




