ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಷರತ್ತುಬದ್ಧ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆ ಆಗಿರುವ ನಟ ದರ್ಶನ್ ಅವರಿಗೆ ವಿದೇಶಕ್ಕೆ ತೆರಳಲು ನ್ಯಾಯಾಲಯ ಅನುಮತಿ ನೀಡಿದೆ.

ಡೆವಿಲ್’ ಚಿತ್ರದ ಚಿತ್ರೀಕರಣಕ್ಕಾಗಿ ಜೂನ್ 1ರಿಂದ 25ರವರೆಗೆ ದುಬೈ ಹಾಗೂ ಯುರೋಪ್ ದೇಶಗಳಿಗೆ ತೆರಳಲು ಅನುಮತಿ ನೀಡುವಂತೆ ಕೋರಿ ದರ್ಶನ್ ಅವರು 57ನೇ ಸಿಸಿಎಚ್ ನ್ಯಾಯಾಲಯಕ್ಕೆ ಇತ್ತೀಚೆಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು.

ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟ‌ರ್ ಅವರು ಆಕ್ಷೇಪ ವ್ಯಕ್ತಪಡಿಸಿ, ಕೊಲೆ ಪ್ರಕರಣದಲ್ಲಿ ದರ್ಶನ್ ಅವರು ಎರಡನೇ ಆರೋಪಿ. ದರ್ಶನ್ ಅವರಿಗೆ ವಿದೇಶಕ್ಕೆ ತೆರಳಲು ಅನುಮತಿ ನೀಡಿದರೆ ವಾಪಸ್‌ ಬರುವ ಬಗ್ಗೆ ಸಂಶಯವಿದೆ ಎಂದು ವಾದಿಸಿದ್ದರು.

ವಾದ- ಪ್ರತಿವಾದ ಆಲಿಸಿದ ನ್ಯಾಯಾಲಯವು ಆದೇಶ ಕಾಯ್ದಿರಿಸಿ, ಮೇ 30ರಂದು ಪ್ರಕಟಿಸುವುದಾಗಿ ಆದೇಶಿಸಿತ್ತು.

ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ಕೆಲವು ಷರತ್ತು ವಿಧಿಸಿತ್ತು. ಬೆಂಗಳೂರು ಬಿಟ್ಟು ಬಿಟ್ಟು ತೆರಳುವಂತಿಲ್ಲ ಎಂದು ನ್ಯಾಯಾಲಯವು ಹೇಳಿತ್ತು. ಅದಾದ ಮೇಲೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ಸಿನಿಮಾ ಚಿತ್ರೀಕರಣಕ್ಕೆ ತೆರಳಲು ಅವಕಾಶ ನೀಡಿ ಷರತ್ತು ಸಡಿಲಿಸಿತ್ತು.

ಇದೀಗ ವಿದೇಶಕ್ಕೆ ತೆರಳಲು ಷರತ್ತು ವಿಧಿಸಿ ಅವಕಾಶ ನೀಡಿದೆ ಎಂದು ದರ್ಶನ್ ಪರ ವಕೀಲರು ತಿಳಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *