ಸಕಲೇಶಪುರ : ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಶಾಲೆಗಳಲ್ಲಿ ಶೌಚಾಲಯಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಶಿಕ್ಷಕರ ಪ್ರಮುಖ ಹೊಣೆಗಾರಿಕೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಸೋಮವಾರ ತಾಲ್ಲೂಕಿನ ಹಾನಬಾಳು ಹೋಬಳಿ ಕೇಂದ್ರದಲ್ಲಿರುವ ಪದವಿ ಪೂರ್ವ ಕಾಲೇಜು ಹಾಗೂ ಪ್ರಾಥಮಿಕ ಶಾಲೆ (ಕೆಪಿಎಸ್) ಆವರಣದಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಾಗೂ ಗ್ರಾಮ ಪಂಚಾಯತಿ ಅನುದಾನದಲ್ಲಿ ನಿರ್ಮಿಸಲಾದ ನೂತನ ಶೌಚಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಶಾಲೆಗಳಲ್ಲಿ ಮೂಲಸೌಕರ್ಯಗಳು ಅತ್ಯಂತ ಅವಶ್ಯಕ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿರುವ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಲಾಗಿದೆ ಎಂದು ಅವರು ಹೇಳಿದರು.ನಾಗರಿಕ ಸಮಾಜದಲ್ಲಿ ಗಂಡು–ಹೆಣ್ಣು ಎಂಬ ಲಿಂಗ ತಾರತಮ್ಯ ಇರಬಾರದು. ಪುರುಷ ಪ್ರಧಾನ ಸಮಾಜದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ದೇಶದ ಅಭಿವೃದ್ಧಿಯಲ್ಲಿ ಹೆಣ್ಣು ಮಕ್ಕಳ ಪಾತ್ರವೂ ಬಹುಮುಖ್ಯವಾಗಿದೆ ಎಂದು ಅವರು ತಿಳಿಸಿದರು.

ಹಿಂದೆ ಮನೆಯ ಜೀವನಕ್ಕೆ ಸೀಮಿತವಾಗಿದ್ದ ಹೆಣ್ಣು ಮಕ್ಕಳು ಇಂದು ಚಂದ್ರಯಾನ ಯೋಜನೆಯಂತಹ ಮಹತ್ವದ ವಿಜ್ಞಾನ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಆದ್ದರಿಂದ ಹೆಣ್ಣು ಮಕ್ಕಳು ತಮ್ಮಲ್ಲಿರುವ ಕೀಳರಿಮೆಯನ್ನು ತೊರೆದು, ತಾವು ಯಾವುದೇ ಕೆಲಸ ಮಾಡಬಲ್ಲೆವು ಎಂಬ ದೃಢ ನಿಶ್ಚಯ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿಯಿಂದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಶಾಲೆಗಳ ಸುತ್ತುಗೋಡೆ, ಆಟದ ಮೈದಾನ, ಶೌಚಾಲಯ ಸೇರಿದಂತೆ ವಿವಿಧ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳಬಹುದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಹಾನಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕೆ.ಆರ್., ಉಪಾಧ್ಯಕ್ಷೆ ಶೈಲಾ ರುದ್ರೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಮೋಹನ್ ಕುಮಾರ್ ಅಚ್ಚರಡಿ, ಯೋಗರಾಜು, ಸುರೇಶ್, ಎಸ್.ಡಿ.ಎಂ.ಸಿ ಅಧ್ಯಕ್ಷ ಅಣ್ಣು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಶೇಖರ್, ಗೌರವಾಧ್ಯಕ್ಷ ಭಾಸ್ಕರ್ ಹಾನಬಾಳು, ಮುಖಂಡರಾದ ಕ್ಯಾಮನಹಳ್ಳಿ ರಾಜಕುಮಾರ್, ಅಗ್ನಿ ಸೋಮಶೇಖರ್, ಅವರೆಕಾಡು ಪೃಥ್ವಿ, ಸುಬ್ಬಣ್ಣ ಸೇರಿದಂತೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *