
ಸಕಲೇಶಪುರ : ಬಾಗೆ ಗ್ರಾ.ಪಂ ವ್ಯಾಪ್ತಿಯಲ್ಲಿ ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆಸಕಲೇಶಪುರ: ಶಾಸಕನಾಗಿ ಅಧಿಕಾರ ಚಲಾಯಿಸುವುದಕ್ಕಿಂತ ಸಾರ್ವಜನಿಕರ ಸೇವಕನಾಗಿ ಕೆಲಸ ಮಾಡುವುದೇ ನನ್ನ ಜೀವನದ ತತ್ವ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ತಾಲ್ಲೂಕಿನ ಬೆಳಗೋಡು ಹೋಬಳಿಯ ಬಾಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಜೀವಿನಿ ಶೆಡ್, ಹೈಟೆಕ್ ಶೌಚಾಲಯ ಹಾಗೂ ಬಾಗೆ ಪೆಟ್ರೋಲ್ ಬಂಕ್ನಿಂದ ಹಳೆ ಬಾಗೆವರೆಗೂ ಅಳವಡಿಸಲಾದ ಬೀದಿ ದೀಪಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೂರ್ಣಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಸೇವೆಯೇ ನನ್ನ ಮುಖ್ಯ ಗುರಿಯಾಗಿದ್ದು, ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳನ್ನು ಅರಿತು ಅವರ ನೋವಿಗೆ ಸ್ಪಂದಿಸುವುದೇ ನನ್ನ ಮೊದಲ ಆದ್ಯತೆಯಾಗಿದೆ ಎಂದರು.
ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂಬುದು ರಾಜಕೀಯ ಹಾಗೂ ಜೀವನದ ಮೂಲಭೂತ ಸತ್ಯ. ಸಿಕ್ಕಿರುವ ಅಧಿಕಾರವನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದೇ ಮುಖ್ಯ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಇಚ್ಛಾಶಕ್ತಿಯಿಂದ ಕಾರ್ಯನಿರ್ವಹಿಸಬೇಕು. ಕೆಲ ಅಧಿಕಾರಿಗಳ ನಿರ್ಲಕ್ಷ್ಯದ ಧೋರಣೆಯಿಂದ ಗ್ರಾಮೀಣ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕೆಲಸದಲ್ಲಿ ನಿರ್ಲಕ್ಷ ತೋರುವ ಅಧಿಕಾರಿಗಳ ವಿರುದ್ಧ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಗ್ರಾಮೀಣ ಅಭಿವೃದ್ಧಿಯಲ್ಲಿ ಪಿಡಿಒಗಳ ಪಾತ್ರ ಅತ್ಯಂತ ಮಹತ್ತರವಾಗಿದೆ. ಅವರು ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸುವ ಮೂಲಕ ಸರ್ಕಾರದ ಸವಲತ್ತುಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಮಾಡಬೇಕು. ಇದರಿಂದ ತಮ್ಮ ಸೇವೆಯಲ್ಲಿ ಆತ್ಮತೃಪ್ತಿ ದೊರೆಯಲಿದೆ ಎಂದು ಹೇಳಿದರು.ಕಾಡಾನೆ ಬಾಧಿತ ಪ್ರದೇಶಗಳ ಸಾರ್ವಜನಿಕರ ಹಿತದೃಷ್ಟಿಯಿಂದ ನಿರಂತರ ವಿದ್ಯುತ್ ಸಂಪರ್ಕ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಅದರಂತೆ ರಾಷ್ಟ್ರೀಯ ಹೆದ್ದಾರಿಯಿಂದ ಬಾಗೆ ಗ್ರಾಮದಿಂದ ಹಳೆ ಬಾಗೆ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ನೂತನ ವಿದ್ಯುತ್ ಕಂಬಗಳು ಹಾಗೂ ದೀಪಗಳನ್ನು ಅಳವಡಿಸಿ ನಿರಂತರ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸಂಜೀವಿನಿ ಶೆಡ್ಗಳು ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ, ವೃತ್ತಿ ತರಬೇತಿ ಹಾಗೂ ಸ್ವಸಹಾಯ ಗುಂಪುಗಳ ಉತ್ಪನ್ನಗಳ ಮಾರಾಟಕ್ಕೆ ವೇದಿಕೆಯನ್ನು ಕಲ್ಪಿಸುವುದರ ಜೊತೆಗೆ, ವಿವಿಧ ಯೋಜನೆಗಳ ಮೂಲಕ ಸ್ವಾವಲಂಬನೆಗೆ ಸಹಕಾರಿಯಾಗುತ್ತವೆ ಎಂದು ಹೇಳಿದರು. ಅಲ್ಲದೆ, ಶಾಲಾ ಮಕ್ಕಳ ಆರೋಗ್ಯದ ದೃಷ್ಟಿಯಿಂದ ತಾಲ್ಲೂಕಿನ ಹಲವು ಶಾಲೆಗಳಲ್ಲಿ ಹೈಟೆಕ್ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದರು.ನಾನು ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ. ಕ್ಷೇತ್ರವನ್ನು ಪ್ರಗತಿಯ ಪಥದಲ್ಲಿ ಕೊಂಡೊಯ್ಯಲು ಪಕ್ಷಾತೀತವಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಶಾಸಕ ಸಿಮೆಂಟ್ ಮಂಜು ಮನವಿ ಮಾಡಿದರು.
ಬಾಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಗೋಪಿನಾಥ್ ಮಾತನಾಡಿ, ತಮ್ಮ ಎರಡುವರೆ ವರ್ಷದ ಅಧ್ಯಕ್ಷ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಗ್ರಾಮ ಪಂಚಾಯಿತಿ ಸದಸ್ಯರ ಸಹಕಾರವೇ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು, ಬಿಜೆಪಿ ಮುಖಂಡ ಗೋಪಿನಾಥ್, ಶಕ್ತಿ ಕೇಂದ್ರದ ಅಧ್ಯಕ್ಷ ರಾಕೇಶ್, ವನಜಾಕ್ಷಿ, ಶಿವಕುಮಾರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
