ಸಕಲೇಶಪುರ : ಸಿದ್ದಗಂಗಾ ಮಠದ ಕಿರಿಯ ಶ್ರೀಗಳು ಶಿವಕುಮಾರ ಸ್ವಾಮೀಜಿಗಳ 7ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ನಿಜವಾದ ಧರ್ಮವೆಂದರೆ ಪರಸೇವೆ ಮಾಡುವುದು ಎಂದು ಅವರು ಹೇಳಿದರು.

ಯಾವುದೇ ಪದವಿ ಅಥವಾ ಹುದ್ದೆ ಇಲ್ಲದೆ ಸೇವಾಭಾವದಿಂದ ಸಮಾಜಕ್ಕಾಗಿ ಕೆಲಸ ಮಾಡುತ್ತಿರುವ ಸ್ನೇಹ ಬಳಗ ಹಾಗೂ ಸೇವಾ ಬಳಗದಂತಹ ಯುವಕರನ್ನು ನೋಡಿದಾಗ ಸಂತೋಷವಾಗುತ್ತದೆ. ಸಮಾಜಕ್ಕಾಗಿ ಸೇವೆ ಮಾಡುವ ಮನೋಭಾವವೇ ನಿಜವಾದ ಧರ್ಮದ ಲಕ್ಷಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಜೀವ ರಕ್ಷ ರಕ್ತ ನಿಧಿ, ಹಾಸನ ಇವರ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ಬಳಿಕ ಗ್ರಾಮ ದೇವತೆ ದೇವಿರಮ್ಮ ದೇವಸ್ಥಾನದಿಂದ ಬಾಳ್ಳುಪೇಟೆ ರಾಜಭೀದಿವರೆಗೆ ಶ್ರೀಗಳ ಪುಷ್ಪಾಲಂಕೃತ ಭಾವಚಿತ್ರವನ್ನು ವಾಹನದಲ್ಲಿ ಇರಿಸಿ ಭವ್ಯ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕು ಲಿಂಗದಹಳ್ಳಿ ಗ್ರಾಮದ ಶ್ರೀ ಗುರು ವೀರ ಮಹಿಳಾ ವೀರಗಾಸೆ ಕಲಾ ತಂಡ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.

ಈ ಸಂದರ್ಭದಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ ಅವರು, ಸನ್ಯಾಸತ್ವವೆಂದರೆ ಪರಿಪೂರ್ಣ ತ್ಯಾಗದ ಮಾರ್ಗವಾಗಿದೆ. ಎಲ್ಲವನ್ನೂ ತ್ಯಜಿಸಿ ಭಗವಂತನನ್ನು ಮಾತ್ರ ಆಶ್ರಯಿಸುವುದು ತ್ಯಾಗಮಾರ್ಗದ ಮಹತ್ವ ಎಂದು ಹೇಳಿದರು.

ನೆಲದ ಮೇಲೆ ಕುಳಿತುಕೊಂಡೇ ಎತ್ತರಕ್ಕೆ ಬೆಳೆಯಬಹುದು ಎಂಬುದನ್ನು ಶಿವಕುಮಾರ ಸ್ವಾಮೀಜಿಗಳು ತಮ್ಮ ಜೀವನದ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದರು.

ದ್ವೇಷವನ್ನು ಹಂಚುವುದು ಸುಲಭವಾದರೆ, ಪ್ರೀತಿಯನ್ನು ಹಂಚುವುದು ಕಷ್ಟ. ಆದರೆ ಶಿವಕುಮಾರ ಸ್ವಾಮೀಜಿಗಳು ತಮ್ಮ ಜೀವನಪೂರ್ತಿ ಪ್ರೀತಿ ಹಂಚಿದ ಮಹಾನ್ ವ್ಯಕ್ತಿ. ಸಿದ್ದಗಂಗಾ ಸ್ವಾಮೀಜಿಗಳ ಹೆಸರು ಕರ್ನಾಟಕದಲ್ಲಿ ಎಲ್ಲರಿಗೂ ಪರಿಚಿತವಾಗಿದೆ. ಅವರು ತಮ್ಮ ಜೀವನದಲ್ಲಿ ಒಂದೇ ಕ್ಷಣವೂ ಸ್ವಂತಕ್ಕಾಗಿ ಬದುಕದೆ, ಸಂಪೂರ್ಣವಾಗಿ ಸಮಾಜ ಸೇವೆಗೆ ತೊಡಗಿಕೊಂಡಿದ್ದರು ಎಂದು ಹೇಳಿದರು.

ಇಂತಹ ಸೇವಾ ಮನೋಭಾವ ಎಲ್ಲರಲ್ಲಿಯೂ ಬೆಳೆದರೆ ಕುಟುಂಬ, ಸಮಾಜ ಹಾಗೂ ದೇಶವು ಅಭಿವೃದ್ಧಿಯ ಹಾದಿಯಲ್ಲಿ ಸಾಗಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಧರ್ಮರಾಜೇಂದ್ರ ಸ್ವಾಮಿಗಳು, ಸಂಕಲಾಪುರ ಮಠದ ಶ್ರೀ ಮ.ನಿ.ಪ್ರ. ಮಹಾಂತ ಮಹಾಸ್ವಾಮಿಗಳು (ಕಲ್ಮಠ, ಕೊಡ್ಲಿಪೇಟೆ), ಶ್ರೀ ಮ.ನಿ.ಪ್ರ. ಸದಾಶಿವ ಮಹಾಸ್ವಾಮಿಗಳು (ಕಿರಿಕೊಡ್ಲಿ ಮಠ, ಕೊಡ್ಲಿಪೇಟೆ), ಶ್ರೀ ಮ.ನಿ.ಪ್ರ. ವಿಜಯಕುಮಾರ ಸ್ವಾಮಿಗಳು (ತಣ್ಣಿರುಹಳ್ಳ ಮಠ, ಹಾಸನ), ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್ ಸೇರಿದಂತೆ ಸ್ನೇಹ ಬಳಗದ ಯಡೆಹಳ್ಳಿ ಮಂಜುನಾಥ್, ಶಿವಕುಮಾರ್, ಪ್ರದೀಪ್, ರಘು, ಪ್ರದೀಪ್ ಹಾಗೂ ಅನೇಕರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *