ಸಕಲೇಶಪುರ : ತಾಲೂಕಿನಲ್ಲಿನ ಎಲ್.ಪಿ.ಜಿ ಸಿಲಿಂಡರ್ ಅಭಾವದಿಂದ ಗ್ರಾಹಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ತಾಲೂಕು ಕೇಂದ್ರದಲ್ಲಿರುವ ಶ್ರೀ ಸಿದ್ದಿವಿನಾಯಕ ಗ್ಯಾಸ್ ಏಜೆನ್ಸಿ ಮುಂಭಾಗ ಸುಡು ಬಿಸಿಲಿನಲ್ಲಿ ಸಾಲುಗಟ್ಟಲೆ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸರ್ವರ್ ಸಮಸ್ಯೆ ಹಾಗೂ ಸರಬರಾಜಿನ ಅಸ್ತವ್ಯಸ್ತತೆಯಿಂದ ಬೆಳಗ್ಗೆಯಿಂದಲೇ ಗ್ರಾಹಕರು ಕಾಯಬೇಕಾದ ಸ್ಥಿತಿ ಎದುರಾಗಿದ್ದು, ಗೃಹಿಣಿಯರು ಹಾಗೂ ಗ್ರಾಮೀಣ ಭಾಗದ ಜನರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಸಕಲೇಶಪುರ ಘಟಕದ ಅಧ್ಯಕ್ಷ ಗಗನ್ ಹಾಡ್ಲಹಳ್ಳಿ ಹಾಗೂ ಕಾರ್ಯಕರ್ತರು, ಸಾಲಿನಲ್ಲಿ ನಿಂತ ಗ್ರಾಹಕರಿಗಾಗಿ ಸಾಮಿಯಾನ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು.ಈಗಾಗಲೇ ಡೆಲಿವರಿ ಸಂದೇಶ ಬಂದಿರುವವರಿಗೆ ತಕ್ಷಣ ಸಿಲಿಂಡರ್ ವಿತರಣೆ ಮಾಡಬೇಕು ಎಂದು ಏಜೆನ್ಸಿ ನಿರ್ವಹಣೆಯನ್ನು ತರಾಟೆಗೆ ತೆಗೆದುಕೊಂಡರು.

ಸಾಲಿನಲ್ಲಿ ನಿಂತಿದ್ದ ಕೆಲ ಗ್ರಾಹಕರು, “ಬೆಳಗ್ಗೆಯಿಂದ ಊಟವೂ ಮಾಡದೆ ಕಾಯುತ್ತಿದ್ದೇವೆ. ಸರ್ವರ್ ಸ್ಲೋ ಎಂದು ಹೇಳುತ್ತಿದ್ದು, ಮನೆಗಳಲ್ಲಿ ಅಡುಗೆ ಮಾಡಲು ಸಾಧ್ಯವಾಗುತ್ತಿಲ್ಲ” ಎಂದು ಅಳಲು ವ್ಯಕ್ತಪಡಿಸಿದರು.

ಕಳೆದ ಕೆಲವು ದಿನಗಳಿಂದ ಸರಬರಾಜು ಸರಿಯಾಗಿ ನಡೆಯದ ಹಿನ್ನೆಲೆಯಲ್ಲಿ ಜನರು ಏಜೆನ್ಸಿ ಮುಂದೆ ಗುಂಪುಗೂಡುವ ಪರಿಸ್ಥಿತಿ ಉಂಟಾಗಿದೆ. ಅಲ್ಲದೆ ಕಾಳಸಂತೆಯಲ್ಲಿ ಗೃಹ ಹಾಗೂ ವಾಣಿಜ್ಯ ಸಿಲಿಂಡರ್ ಮಾರಾಟವಾಗುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ.ಅತಿ ಹೆಚ್ಚು ವಾಹನ ಸಂಚಾರವಾಗುವ ಈ ರಸ್ತೆಯಲ್ಲಿ ಗ್ರಾಹಕರು ಸರದಿಯಲ್ಲಿ ನಿಲ್ಲುವುದರಿಂದ ಟ್ರಾಫಿಕ್ ಸಮಸ್ಯೆಯೂ ಉಂಟಾಗುತ್ತಿದೆ. ಏಜೆನ್ಸಿಯವರು ಸರಿಯಾದ ಮಾಹಿತಿ ನೀಡದೆ ಇರುವುದರಿಂದ ಗ್ರಾಹಕರಲ್ಲಿ ಗೊಂದಲ ಹೆಚ್ಚಾಗಿದೆ ಎಂಬ ದೂರಗಳು ಕೇಳಿಬರುತ್ತಿವೆ.

ಗ್ರಾಮೀಣ ಭಾಗದ ಗ್ರಾಹಕರಿಗೆ ಊರುಗಳಲ್ಲಿಯೇ ಸಿಲಿಂಡರ್ ತಲುಪುವಂತೆ ಸಮರ್ಪಕ ವ್ಯವಸ್ಥೆ ಕಲ್ಪಿಸಿದರೆ ಸಮಸ್ಯೆ ತಪ್ಪಬಹುದು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *