ಸಕಲೇಶಪುರ;-ಟಿಕೆಟ್ ಚೆಕಿಂಗ್ ವೇಳೆ ವೃದ್ದ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಸ್ಥಳೀಯರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಇಂದು ಬೆಳಿಗ್ಗೆ ಬೆಳಗೂಡಿನಿಂದ ಸಕಲೇಶಪುರಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ (KA-18 F-600)ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 70 ವರ್ಷದ ಅಬ್ದುಲ್

ಅಫೀಜ್ ಅವರು ಈ ದೌರ್ಜನ್ಯಕ್ಕೆ ಒಳಗಾದವರಾಗಿದ್ದಾರೆ. ಅವರ ಟಿಕೆಟ್ ಅವರ ನೆಂಟರೊಬ್ಬರ ಬಳಿ ಇದ್ದು, ಆ ವ್ಯಕ್ತಿ ವಾಸವಿ ವಿದ್ಯಾ ವಿಹಾರ ಶಾಲೆ ಬಸ್ ನಿಲ್ದಾಣದಲ್ಲಿ ಇಳಿದಿದ್ದಾನೆ ಎನ್ನಲಾಗಿದೆ.

ನಂತರ ಹಳೆ ಬಸ್ ನಿಲ್ದಾಣಕ್ಕೆ ಬಸ್ ತಲುಪಿದ ವೇಳೆ ಟಿಕೆಟ್ ಪರಿಶೀಲನೆಗೆ ಬಂದ ಇನ್ಸಪೆಕ್ಟರ್ ಸದಾಶಿವ್ ಮಂಚಲ್ಕರ್ ಅವರು ಅಬ್ದುಲ್ ಅಫೀಜ್ ಅವರಲ್ಲಿ ಟಿಕೆಟ್ ಕೇಳಿದ್ದಾರೆ. ಈ ವೇಳೆ “ಟಿಕೆಟ್ ನನ್ನ ಹುಡುಗನ ಬಳಿ ಇದೆ” ಎಂದು ಅವರು ತಿಳಿಸಿದರೂ, ಬಸ್‌ನಲ್ಲಿದ್ದ ಪ್ರಯಾಣಿಕರು ಹಾಗೂ ಕಂಡಕ್ಟರ್ ಟಿಕೆಟ್ ಇರುವುದನ್ನು ದೃಢಪಡಿಸಿದರೂ, ಅದನ್ನು ಲೆಕ್ಕಿಸದೆ ಇನ್ಸಪೆಕ್ಟರ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ವೃದ್ದರ ಮೇಲೆ ಹಲ್ಲೆ ನಡೆಸಿದರೆಂದು ಆರೋಪಿಸಲಾಗಿದೆ.ಈ ದಾಳಿಯಿಂದ ವೃದ್ದರ ಎಡ ಕೆನ್ನೆ ಊದಿಕೊಂಡಿದ್ದು, ಮೂಗಿನಲ್ಲಿ ರಕ್ತಸ್ರಾವವಾದುದಾಗಿ ತಿಳಿದುಬಂದಿದೆ.

ಘಟನೆ ವೇಳೆ ಸಾರ್ವಜನಿಕರು ಜಮಾಯಿಸುತ್ತಿದ್ದಂತೆ ಆರೋಪಿತ ಇನ್ಸಪೆಕ್ಟರ್ ಸ್ಥಳದಿಂದ ತೆರಳಿದರೆಂದು ಸ್ಥಳೀಯರು ತಿಳಿಸಿದ್ದಾರೆ.

ಗಾಯಗೊಂಡ ಅಬ್ದುಲ್ ಅಫೀಜ್ ಅವರನ್ನು ಸ್ಥಳೀಯರು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರು ರಂಜಾನ್ ಉಪವಾಸದಲ್ಲಿದ್ದು ಬಿಸಿಲಿನ ತಾಪದಿಂದಲೂ ಅಸ್ವಸ್ಥರಾಗಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿರುವುದು ವಿಷಾದಕರ ಸಂಗತಿಯಾಗಿದೆ.ಇದಕ್ಕೂ ಸಂಬಂಧಿಸಿದಂತೆ ಡಿಪೋ ಮ್ಯಾನೇಜರ್ ಸುದೀಶ್ ಅವರು ಪ್ರತಿಕ್ರಿಯೆ ನೀಡಿದ್ದು, “ಯಾವುದೇ ಅಧಿಕಾರಿಗೆ ಪ್ರಯಾಣಿಕರ ಮೇಲೆ ದೈಹಿಕ ಹಲ್ಲೆ ನಡೆಸುವ ಅಧಿಕಾರವಿಲ್ಲ. ಇಂತಹ ಘಟನೆಗಳು ಅಸಹ್ಯಕರವಾಗಿದ್ದು, ಇಲಾಖೆಯ ನಿಯಮಗಳಿಗೆ ವಿರುದ್ಧವಾಗಿದೆ” ಎಂದು ತಿಳಿಸಿದ್ದಾರೆ.

ಈ ಘಟನೆಯನ್ನು ಖಂಡಿಸಿರುವ ಸಾಮಾಜಿಕ ಹೋರಾಟಗಾರರಾದ ಸೈಯದ್ ಇದ್ರಿಸ್, ಜಾಫರ್, ಇಬ್ರಾಹಿಂ ಹಾಗೂ ಇತರರು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಆರೋಪಿತನನ್ನು ಬಂಧಿಸಿ, ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *