
ಸಕಲೇಶಪುರದಲ್ಲಿ ಭೀಕರ ಘಟನೆ: ಲೈಂಗಿಕ ದೌರ್ಜನ್ಯಕ್ಕೆ ನಿರಾಕರಿಸಿದ ಮಹಿಳೆ ಹತ್ಯೆಸಕಲೇಶಪುರ :ತಾಲೂಕಿನ ಹೆತ್ತೂರು ಹೋಬಳಿಯ ಅತ್ತಿಹಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ಹತ್ಯೆ ಮಾಡಿದ ದುರ್ಘಟನೆ ಬೆಳಕಿಗೆ ಬಂದಿದೆ. ಲೈಂಗಿಕ ದೌರ್ಜನ್ಯಕ್ಕೆ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರುವುದು ತಿಳಿದುಬಂದಿದೆ.
ಮೃತ ಮಹಿಳೆಯನ್ನು ಎ.ಆರ್. ರಮ್ಯಾ (35) ಎಂದು ಗುರುತಿಸಲಾಗಿದೆ. ಅವರು ಮೂಲತಃ ಬೆಂಗಳೂರಿನಲ್ಲಿ ನರ್ಸಿಂಗ್ ಕೆಲಸ ಮಾಡುತ್ತಿದ್ದರು. ಕುಟುಂಬ ಸದಸ್ಯರ ಮಾಹಿತಿಯ ಪ್ರಕಾರ, ಅವರು ವಿಧವೆಯಾಗಿದ್ದು, ಏಪ್ರಿಲ್ 28ರಂದು ಅತ್ತಿಹಳ್ಳಿ ಗ್ರಾಮದಲ್ಲಿ ನಡೆದ ಅತ್ತೆಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಗ್ರಾಮಕ್ಕೆ ಬಂದಿದ್ದರು.
ಈ ವೇಳೆ ಅತ್ತಿಹಳ್ಳಿ ಗ್ರಾಮದ ಚಂದ್ರು (41) ಎಂಬಾತ ರಮ್ಯಾ ಮೇಲೆ ಲೈಂಗಿಕ ಸಂಬಂಧಕ್ಕೆ ಒತ್ತಾಯಿಸಿದನು. ಆದರೆ, ರಮ್ಯಾ ಅವರು ಇದಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಆರೋಪಿ ಆಕ್ರೋಶಗೊಂಡು ಅವರ ಮೇಲೆ ಹಲ್ಲೆ ನಡೆಸಿದನು. ಹಲ್ಲೆಯ ವೇಳೆ ರಮ್ಯಾ ಅವರ ಮರ್ಮಾಂಗಕ್ಕೆ ಗಂಭೀರ ಗಾಯಗಳಾಗಿದ್ದು, ಅವರು ತೀವ್ರವಾಗಿ ಗಾಯಗೊಂಡರು ಎಂದು ತಿಳಿದುಬಂದಿದೆ.
ಗಾಯಗೊಂಡ ರಮ್ಯಾ ಅವರನ್ನು ಏಪ್ರಿಲ್ 30ರಂದು ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.ಸ್ಥಳೀಯ ಮೂಲಗಳ ಪ್ರಕಾರ, ಮೃತ ರಮ್ಯಾ ಮತ್ತು ಆರೋಪಿ ಚಂದ್ರು ನಡುವೆ ಹಿಂದಿನಿಂದಲೂ ಪರಿಚಯವಿದ್ದು, ಅಕ್ರಮ ಸಂಬಂಧವಿದ್ದ ಸಾಧ್ಯತೆಯ ಕುರಿತು ಮಾಹಿತಿ ಲಭ್ಯವಾಗಿದೆ. ಆದರೆ, ಪೊಲೀಸರು ಈ ವಿಷಯವನ್ನು ಇನ್ನೂ ದೃಢಪಡಿಸಿಲ್ಲ.
ಘಟನೆಯ ಮಾಹಿತಿ ತಿಳಿದು ಯಸಳೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.ಈ ಘಟನೆ ಪ್ರದೇಶದಲ್ಲಿ ಆತಂಕ ಮೂಡಿಸಿದ್ದು, ಮಹಿಳೆಯರ ಸುರಕ್ಷತೆ ಕುರಿತು ಮತ್ತೆ ಪ್ರಶ್ನೆಗಳು ಎದ್ದಿವೆ.
ಪೊಲೀಸರು ಪ್ರಕರಣದ ಸಂಪೂರ್ಣ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ.
