
ಸಕಲೇಶಪುರ: ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೈಗೊಂಡಿರುವ ವಿವಿಧ ಯೋಜನೆಗಳ ಫಲವಾಗಿ ಶೀಘ್ರದಲ್ಲೇ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ಹೊಸ ಬಸ್ ನಿಲ್ದಾಣ ಹಾಗೂ ಹಳೇ ಸಂತೇವೇರಿ ಬಡಾವಣೆಯಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಸಾರ್ವಜನಿಕರ ಅನುಕೂಲಕ್ಕಾಗಿ ಎರಡೂ ಪ್ರದೇಶಗಳಲ್ಲಿ ತಲಾ ರೂ.5 ಲಕ್ಷ ವೆಚ್ಚದಲ್ಲಿ ಒಟ್ಟು ರೂ.10 ಲಕ್ಷ ಅನುದಾನದಲ್ಲಿ ಈ ಘಟಕಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಈ ಘಟಕಗಳ ಮೂಲಕ ಸಾರ್ವಜನಿಕರಿಗೆ ಅತ್ಯಂತ ಕಡಿಮೆ ದರದಲ್ಲಿ ಸುರಕ್ಷಿತ ಹಾಗೂ ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ. ನಗರ ಪ್ರದೇಶಗಳಲ್ಲಿ ಶುದ್ಧ ನೀರಿನ ಲಭ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಇಂತಹ ಜನೋಪಯೋಗಿ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಅವರು, ಅಮೃತ್ 2.0 ಯೋಜನೆಯಡಿ ಸುಮಾರು ರೂ.15 ಕೋಟಿ ವೆಚ್ಚದಲ್ಲಿ ಪಟ್ಟಣದಾದ್ಯಂತ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಮಹತ್ವಾಕಾಂಕ್ಷಿ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಪ್ರತಿಯೊಂದು ಮನೆಗೂ ಸಮರ್ಪಕವಾಗಿ ಶುದ್ಧ ಕುಡಿಯುವ ನೀರು ಪೂರೈಕೆ ಆಗಲಿದೆ ಎಂದು ತಿಳಿಸಿದರು.
ಪಟ್ಟಣದ ನಾಗರಿಕರಿಗೆ ನಿರಂತರ ಹಾಗೂ ಗುಣಮಟ್ಟದ ಕುಡಿಯುವ ನೀರು ಒದಗಿಸುವ ಗುರಿಯೊಂದಿಗೆ ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಮಹೇಶ್ವರಪ್ಪ ಹಾಗೂ ಬಿಜೆಪಿ ಮುಖಂಡರಾದ ವಿನಯ್, ನವೀನ್ ಶೆಟ್ಟಿ, ಮದನ್, ಚಂದ್ರಣ್ಣ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.
