
ಸಕಲೇಶಪುರ : ಕ.ವಿ.ಮಂ ನೌಕರರ ಒಕ್ಕೂಟ ಮತ್ತು ಸಂಘ ಸಂಸ್ಥೆಗಳ ಒಕ್ಕೂಟದ ಎಲ್ಲಾ ಹಂತದ ಪದಾಧಿಕಾರಿಗಳು ಹಾಗೂ ಎಲ್ಲಾ ಹಂತದ ಅಧಿಕಾರಿ ನೌಕರರೆಲ್ಲರೂ ಸೇರಿ ಟಾಟಾ ಪವರ್ ಕಂಪನಿ ಲಿಮಿಟೆಡ್” ಎಸ್ಕಾಂಗಳ ವ್ಯಾಪ್ತಿಯಲ್ಲಿ ವಿದ್ಯುತ್ ವಿತರಣೆ ಚಟುವಟಿಕೆಯನ್ನು ಪ್ರಾರಂಭಿಸಲು ಪರವಾನಿಗೆಗಾಗಿ ಕರ್ನಾಟಕ ರಾಜ್ಯದ ವಿದ್ಯುಚ್ಚಕ್ತಿ ನಿಯಂತ್ರಣಾ ಆಯೋಗಕ್ಕೆ ಅರ್ಜಿಯನ್ನು ಸಲ್ಲಿಸಿ ಸಂಸ್ಥೆಯು ರಾಜ್ಯ ವಿದ್ಯುತ್ ವಿತರಣೆ ಕ್ಷೇತ್ರಕ್ಕೆ ಬರಲು ಬಯಸಿ ಅರ್ಜಿ ಸಲ್ಲಿಸಿರುವುದು ನಿಗಮದ ನೌಕರರು ಮತ್ತು ಗ್ರಾಹಕರಿಗೆ ಆತಂಕಕಾರಿ ವಿಷಯವಾಗಿರುತ್ತದೆ. ಹಾಗೂ ವಿದ್ಯುತ್ ಕಾಯ್ದೆ 2003 ಕಲಂ 14 ಮತ್ತು 15 ರ ಅಡಿಯಲ್ಲಿ ಖಾಸಗಿ ಕಂಪನಿಗಳು ಸಲ್ಲಿಸಿರುವ ವಿದ್ಯುತ್ ವಿತರಣಾ ಪರವಾನಗಿ ನೀಡಿದಲ್ಲಿ ಅನಾನುಕೂಲಗಳಾಗತ್ತವೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಬಡ ಮತ್ತು ಮಧ್ಯಮ ವರ್ಗದವರ ಮೇಲೆ ದರ ಏರಿಕೆಯ ಬರೆ : ಪ್ರಸ್ತುತ ಸರ್ಕಾರಿ ಸ್ವಾಮ್ಯದ ಕಂಪನಿಗಳು ಉತ್ಪಾದನಾ ವೆಚ್ಚ ಹೆಚ್ಚಾಗಿದ್ದರೂ, ಸಾರ್ವಜನಿಕ ಹಿತದೃಷ್ಟಿಯಿಂದ ಕಡಿಮೆ ದರದಲ್ಲಿ ವಿದ್ಯುತ್ ನೀಡುತ್ತಿವೆ. ಆದರೆ ಖಾಸಗೀಕರಣಗೊಂಡರೆ ಸ್ಮಾರ್ಟ್ ಮೀಟರ್ ನೆಪದಲ್ಲಿ ಮನಬಂದಂತೆ ದರ ಹೆಚ್ಚಳ ಮಾಡಿ ಬಡ ಮತ್ತು ಮಧ್ಯಮ ವರ್ಗದ ಗ್ರಾಹಕರ ರಕ್ತ ಹೀರಲು ಮುಂದಾಗಿದೆ.
ಸಾರ್ವಜನಿಕ ಉದ್ಯೋಗ ಭದ್ರತೆಗೆ ಆತಂಕ, ಸಾವಿರಾರು ನಿರುದ್ಯೋಗಿ ಯುವಕರಿಗೆ ಸರ್ಕಾರಿ ಉದ್ಯೋಗ ನೇಮಕಾತಿ ಸಿಗುವುದಿಲ್ಲ ಹಾಗೂ ಬಡ, ಮಧ್ಯಮ ದೀನ ದಲಿತರಿಗೆ ಮೀಸಲಾತಿ ಇಲ್ಲದೆ ತೊಂದರೆಯಾಗುತ್ತದೆ.ಸರ್ಕಾರಿ ಕಂಪನಿಗಳು ಜನರಿಗೆ, ಮಾಧ್ಯಮಕ್ಕೆ, ಕಾನೂನಿಗೆ (Repp) ಮತ್ತು ಜನ ಪ್ರತಿನಿಧಿಗಳಿಗೆ ಉತ್ತರದಾಯಿತ್ವ ಹೊಂದಿರುತ್ತವೆ. ಆದರೆ ಖಾಸಗಿ ಕಂಪನಿಗಳಲ್ಲಿ ಸಾರ್ವಜನಿಕ ಉತ್ತರದಾಯಿತ್ವಕ್ಕೆ ಅವಕಾಶವಿರುವುದಿಲ್ಲ.
ಸಣ್ಣ ಮತ್ತು ಮಧ್ಯಮ ಗುಡಿ ಕೈಗಾರಿಕೆಗಳಿಗೆ ವಿದ್ಯುತ್ ದರ ಹೆಚ್ಚಳವಾದರೆ ಕೈಗಾರಿಕೆ ಬೆಳವಣಿಗೆಗೆ ಕುಂಠಿತವಾಗುತ್ತದೆ ಹಾಗೂ ನಗರ ಮತ್ತು ಲಾಭದಾಯಕ ಪ್ರದೇಶಗಳಿಗೆ ಮಾತ್ರ ಸೇವೆ ನೀಡುವ ಸಾಧ್ಯತೆ ಇದ್ದು, ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳು ನಿರ್ಲಕ್ಷ್ಯಕ್ಕೊಳಗಾಗುವ ಸಾಧ್ಯತೆ ಇದೆ.
ಕೋಟಿ ಕೋಟಿ ಮೌಲ್ಯದ ಸಾರ್ವಜನಿಕ ಆಸ್ತಿ ಲೂಟಿ : ರಾಜ್ಯದ ಎಲ್ಲಾ ವಿದ್ಯುತ್ ಕಂಪನಿಗಳು ಈಗಾಗಲೇ ನುರಿತ ಸಿಬ್ಬಂದಿ, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ವಿತರಣಾ ಜಾಲ, ಉಪಕೇಂದ್ರಗಳು ಹಾಗೂ ಯಂತ್ರೋಪಕರಣಗಳ ಬೃಹತ್ ಮೂಲಸೌಕರ್ಯವನ್ನು ಹೊಂದಿವೆ.
ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣವಾದ ಈ ಬೃಹತ್ ಸಾಮ್ರಾಜ್ಯವನ್ನು ಸಿದ್ದವಾಗಿಟ್ಟುಕೊಂಡು, ಲಾಭದ ಆಸೆಗೆ ಪರರಾಜ್ಯದ ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಿಕೊಡುವುದು ಅಕ್ಷಮ್ಯ ಅಪರಾಧವಾಗಿದ್ದು ಗ್ರಾಮೀಣ ಮೂಲಸೌಕರ್ಯದ ನಿರ್ಲ್ಯಕ್ಷ, ಮಲೆನಾಡು, ಕರಾವಳಿ ಮತ್ತು ಹಿಂದುಳಿದ ಗ್ರಾಮೀಣ ಭಾಗಗಳಲ್ಲಿ ಖಾಸಗಿ ಸಂಸ್ಥೆಗಳು ವಿದ್ಯುತ್ ಸೇವೆಗಳನ್ನು ನೀಡುವುದಿಲ್ಲ. ಸಾರ್ವಜನಿಕ ಹಣದಿಂದ ನಿರ್ಮಿಸಿರುವ ವಿದ್ಯುತ್ ಗ್ರಿಡ್, ಕಂಬಗಳು ಮತ್ತು ಮೂಲಸೌಕರ್ಯಗಳನ್ನು ಖಾಸಗಿ ಸಂಸ್ಥೆಗೆ ನೀಡುವುದು ಜನರ ಹಣದ ದುರುಪಯೋಗವಾಗುತ್ತದೆ.
ಗ್ರಾಹಕರಿಗೆ, ರೈತರ ನೀರಾವರಿ ಯೋಜನೆಗಳಿಗೆ ಉಚಿತ ವಿದ್ಯುತ್ / ರಿಯಾಯಿತಿ ದರದಲ್ಲಿ ಖಾಸಗಿ ಕಂಪನಿಗಳು ವಿದ್ಯುತ್ ಪೂರೈಸುವುದಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿ ಕೃಷಿಗೆ ಅಪಾಯಕಾರಿಯಾಗುತ್ತದೆ ಮತ್ತು ಅಗತ್ಯ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗುತ್ತದೆ. ವಿದ್ಯುತ್ ದೇಶದ ಭದ್ರತೆ ಮತ್ತು ಜನರ ಬದುಕಿಗೆ ಅತ್ಯಗತ್ಯವಾಗಿದ್ದು ಇದನ್ನು ಖಾಸಗಿ ಲಾಭದ ಉದ್ದೇಶದ ಅಧೀನಕ್ಕೆ ನೀಡುವುದು ರಾಜ್ಯದ ಮತ್ತು ಒಕ್ಕೂಟ ವ್ಯವಸ್ಥೆಯ ಮೂಲಭೂತ ಸೌಕರ್ಯಕ್ಕೆ ಮಾರಕವಾಗುತ್ತದೆ. ಇದನ್ನು ಲಾಭ ಲೆಕ್ಕಚಾರವಿಲ್ಲದೆ ಗ್ರಾಹಕರು ಕೈಗಾರಿಕೆ, ಕೃಷಿ ಅಭಿವೃದ್ಧಿಗೆ ಬಳಕೆ ಮಾಡುತ್ತಿದ್ದು, ಖಾಸಗಿಯವರು ಬರೀ ಲಾಭ ಮಾಡುವ ಉದ್ದೇಶ ಹೊಂದಿರುತ್ತಾರೆ.
ವಿದ್ಯುತ್ ಕ್ಷೇತ್ರದಲ್ಲಿ ಕೆಲವು ಭಾಗಗಳಲ್ಲಿ ಖಾಸಗಿ ಸಂಸ್ಥೆಗಳು ಪ್ರವೇಶಿಸಿದ್ದು, ಸಾರ್ವಜನಿಕ ಸೇವೆಗಳ ಮೇಲೆ ಪರಿಣಾಮ ಬೀರುತ್ತಿವೆ. ಕರ್ನಾಟಕದ ಜನರ ಹಿತಾಸಕ್ತಿ, ರೈತರು ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಹಿತದೃಷ್ಠಿಯಿಂದ ವಿದ್ಯುತ್ ಕಂಪನಿಗಳನ್ನು ಸರ್ಕಾರದ ಅಧೀನದಲ್ಲಿ ಮುಂದುವರೆಸಬೇಕಾಗಿ ಕೋರುತ್ತೇವೆ.
ಈ ಮೇಲಿನ ಎಲ್ಲಾ ಅನಾನುಕೂಲಗಳಿಂದ ಕರ್ನಾಟಕದಲ್ಲಿ ವಿದ್ಯುತ್ ವಿತರಣೆಗೆ ಟಾಟಾ ಪವರ್ ಕಂಪನಿಗೆ ಪರವಾನಗಿ ನೀಡಬಾರದೆಂದು ಕಾರ್ಯದರ್ಶಿಗಳು, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗ, ನಂ-16, ಸಿ/1, ಮಿಲ್ಲರ್‌ಟ್ಯಾಂಕ್ ಬೆಡ್ ಏರಿಯ, ವಸಂತ ನಗರ, ಬೆಂಗಳೂರು 560052 ರವರಿಗೆ ಆಕ್ಷೇಪಣೆ ಸಲ್ಲಿಸುವುದರ ಜೊತೆಗೆ ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯಿಸಬೇಕೆಂದು ಮನವಿ ಪತ್ರದಲ್ಲಿ ಕೋರಿಕೊಂಡಿದ್ಧಾರೆ
