ಸಕಲೇಶಪುರ‌ : ಪಟ್ಟಣದ ಹೃದಯಭಾಗದಲ್ಲಿರುವ ಎಸ್‌ಬಿಐ ಬ್ಯಾಂಕ್ ಸಮೀಪ ಫುಡ್‌ಕೋರ್ಟ್ ನಿರ್ಮಾಣಕ್ಕೆ ಕೈಗೊಂಡಿರುವ ಕ್ರಮ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಮಾಜಿ ಶಾಸಕರಾದ ಹೆಚ್ ಎಮ್ ವಿಶ್ವನಾಥ್ ಮನವಿ ಮಾಡಿದ್ದಾರೆ.

ಎಸ್‌ಬಿಐ ಬ್ಯಾಂಕ್, ಕೆನರಾ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕುಗಳು, ವಾಣಿಜ್ಯ ಮಳಿಗೆಗಳು, ಪಟ್ಟಣ ಪಂಚಾಯಿತಿ, ಸಹಾಯಕ ಆಯುಕ್ತರ ಕಚೇರಿ, ಐಬಿ ಹಾಗೂ ತಾಲೂಕು ಕಚೇರಿಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯು ಇದೇ ಪ್ರದೇಶದಲ್ಲಿದೆ.

ಇದು ಸಕಲೇಶಪುರ ಪಟ್ಟಣದ ಅತ್ಯಂತ ಜನನಿಬಿಡ ಹಾಗೂ ವಾಹನ ದಟ್ಟಣೆ ಹೆಚ್ಚಿರುವ ಸ್ಥಳವಾಗಿದ್ದು, ಈಗಾಗಲೇ ವಾಹನ ನಿಲುಗಡೆಗೆ ಸಮರ್ಪಕ ವ್ಯವಸ್ಥೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂತಹ ಪ್ರದೇಶದಲ್ಲೇ ಯಾವುದೇ ವೈಜ್ಞಾನಿಕ ಯೋಜನೆ ಅಥವಾ ಸಂಚಾರ ನಿರ್ವಹಣೆಯ ಅಧ್ಯಯನವಿಲ್ಲದೆ ಫುಡ್‌ಕೋರ್ಟ್ ನಿರ್ಮಿಸಲು ಮುಂದಾಗಿರುವುದು ಸಮಂಜಸವಲ್ಲ.ಈ ಯೋಜನೆಯನ್ನು ರೂಪಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಾರ್ವಜನಿಕ ಸುರಕ್ಷತೆ ಮತ್ತು ಭವಿಷ್ಯದ ಸಂಚಾರ ಸಮಸ್ಯೆಗಳ ಬಗ್ಗೆ ದೂರದೃಷ್ಟಿಯಿಂದ ಚಿಂತಿಸಬೇಕಾಗಿತ್ತು.

ಈ ಕಾಮಗಾರಿ ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ಸಾರ್ವಜನಿಕರು ಹಾಗೂ ಮಾಧ್ಯಮಗಳು ಈಗಾಗಲೇ ವ್ಯಕ್ತಪಡಿಸಿದ್ದರೂ, ಅದನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಗಣಿಸಿ ಕಾಮಗಾರಿ ಮುಂದುವರಿಸುವುದು ಸರಿಯಾದ ಕ್ರಮವಲ್ಲ. ಮುಂದಿನ ದಿನಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುವುದರಿಂದ, ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಈ ಕಾಮಗಾರಿಯನ್ನು ತಡೆಹಿಡಿಯುವುದು ಅಗತ್ಯವಾಗಿದೆ.

ಇತ್ತೀಚೆಗೆ ಜಿಲ್ಲಾಡಳಿತ ಮತ್ತು ಸ್ಥಳೀಯ ಆಡಳಿತ ಪಟ್ಟಣದ ಪಾದಚಾರಿ ಮಾರ್ಗಗಳ ಮೇಲಿನ ಅತಿಕ್ರಮಣ, ಅನಧಿಕೃತ ಅಂಗಡಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದ ಗೂಡಂಗಡಿಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡಿದೆ.

ಆದರೆ ಅದೇ ಪ್ರದೇಶದಲ್ಲಿ ಮತ್ತೊಂದು ಜನಸಂದಣಿ ಕೇಂದ್ರವಾಗುವ ಫುಡ್‌ಕೋರ್ಟ್ ನಿರ್ಮಾಣಕ್ಕೆ ಅವಕಾಶ ನೀಡುವುದು ಆಡಳಿತದ ಕ್ರಮಕ್ಕೆ ವಿರುದ್ಧವಾಗಿದೆ.

ವಿಶೇಷವಾಗಿ ಶುಕ್ರವಾರದಿಂದ ಭಾನುವಾರದವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಸಕಲೇಶಪುರಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ವಾಹನ ಹಾಗೂ ಜನರ ದಟ್ಟಣೆ ಮತ್ತಷ್ಟು ಹೆಚ್ಚಾಗುತ್ತದೆ.

ಆದ್ದರಿಂದ ಜಿಲ್ಲಾಧಿಕಾರಿಗಳು, ಸ್ಥಳೀಯ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ತಮ್ಮ ವಿಶೇಷ ಅಧಿಕಾರ ಬಳಸಿ ಈ ಯೋಜನೆಯನ್ನು ಸ್ಥಗಿತಗೊಳಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ ಸೂಕ್ತ ಪರ್ಯಾಯ ಸ್ಥಳದಲ್ಲಿ ಫುಡ್‌ಕೋರ್ಟ್ ನಿರ್ಮಾಣದ ಬಗ್ಗೆ ಪರಿಶೀಲನೆ ನಡೆಸಿ ಎಂದು ಒತ್ತಾಯಿಸುತ್ತೇನೆ – ಎಚ್.ಎಂ. ವಿಶ್ವನಾಥ್ಮಾಜಿ ಶಾಸಕರು, ಸಕಲೇಶಪುರ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *