ಸಕಲೇಶಪುರ, ಜು. 4: ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಸಂಸ್ಕೃತಿ ಇಂಟರ್ನ್ಯಾಷನಲ್ ಸ್ಕೂಲ್ ವತಿಯಿಂದ ವಿದ್ಯಾರ್ಥಿಗಳು ಪಟ್ಟಣದ ವಿವಿಧ ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳಿಗೆ ಭೇಟಿ ನೀಡಿ ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿಗೆ ಗಿಡಗಳನ್ನು ನೀಡಿ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸರ್ಕಾರಿ ಆಸ್ಪತ್ರೆ, ರೈಲ್ವೆ ಆಸ್ಪತ್ರೆ, ಗಣೇಶ್ ಕ್ಲಿನಿಕ್, ಕಿರಣ್ ಕ್ಲಿನಿಕ್, ಕಮಲ್‌ದೇವ್ ಆಸ್ಪತ್ರೆ ಹಾಗೂ ಬೆನಕ ಡೆಂಟಲ್ ಕ್ಲಿನಿಕ್‌ಗೆ ಭೇಟಿ ನೀಡಿ ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿಗೆ ವೈದ್ಯರ ದಿನದ ಶುಭಾಶಯಗಳನ್ನು ತಿಳಿಸಿದರು.

ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಉದ್ದೇಶದಿಂದ ಗಿಡಗಳನ್ನು ಉಡುಗೊರೆಯಾಗಿ ನೀಡಿ ವೈದ್ಯರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಶಾಲೆಯ ಮುಖ್ಯ ಶಿಕ್ಷಕಿ ಪ್ರತಿಮಾ ಸಂತೋಷ್ ಮಾತನಾಡಿ, “ಹಗಲು-ರಾತ್ರಿ ಎನ್ನದೆ ರೋಗಿಗಳ ಆರೋಗ್ಯ ಕಾಪಾಡಲು ಮತ್ತು ಜೀವ ಉಳಿಸಲು ಶ್ರಮಿಸುವ ವೈದ್ಯರು ಸಮಾಜದ ನಿಜವಾದ ಸೇವಕರು. ಅವರ ಅಮೂಲ್ಯ ಸೇವೆಯ ಬಗ್ಗೆ ಮಕ್ಕಳಲ್ಲಿ ಗೌರವ, ಕೃತಜ್ಞತೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ವೈದ್ಯರ ದಿನಾಚರಣೆಯನ್ನು ಆಸ್ಪತ್ರೆಗಳಿಗೆ ಭೇಟಿ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗಿದೆ,” ಎಂದು ತಿಳಿಸಿದರು.

ರಾಷ್ಟ್ರೀಯ ವೈದ್ಯರ ದಿನವು ಸಮಾಜದ ಆರೋಗ್ಯ ರಕ್ಷಣೆಯಲ್ಲಿ ವೈದ್ಯರು ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆಯನ್ನು ಸ್ಮರಿಸಿ ಅವರಿಗೆ ಗೌರವ ಹಾಗೂ ಕೃತಜ್ಞತೆ ಸಲ್ಲಿಸುವ ದಿನವಾಗಿದೆ. ಇದೇ ಉದ್ದೇಶದಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿ ಆರೋಗ್ಯ ಸೇವೆಗಳ ಮಹತ್ವವನ್ನು ಅರಿತುಕೊಂಡರು.

ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಆಸ್ಪತ್ರೆಯಲ್ಲಿ ಲಭ್ಯವಿರುವ ವಿವಿಧ ವೈದ್ಯಕೀಯ ಸೇವೆಗಳು, ಆರೋಗ್ಯ ರಕ್ಷಣೆ, ತುರ್ತು ಚಿಕಿತ್ಸಾ ವ್ಯವಸ್ಥೆ ಹಾಗೂ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಆರೋಗ್ಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ರೈಲ್ವೆ ಆಸ್ಪತ್ರೆಯ ಸಿಬ್ಬಂದಿಯೂ ಆಸ್ಪತ್ರೆಯ ಕಾರ್ಯವೈಖರಿ ಹಾಗೂ ವೈದ್ಯಕೀಯ ಸೇವೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಸಹ ಶಿಕ್ಷಕಿಯರಾದ ಮೌಲ್ಯ, ಪವಿತ್ರ ಶ್ರೀಧರ್, ಆಶಿಕ ಮುರುಳಿ, ಶಶಿಕಲಾ, ಮೇಘ ಸುಧೀರ್, ಮಾಲಿನಿ ಸೇರಿದಂತೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *