
ಹಾಸನ: ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಹಾಗೂ ಹೌಸ್ ಆಫ್ ಭಾರತ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಸಾಲಗಾಮೆ ಸಮೀಪದ ಸೀಗೆ ಬೆಟ್ಟದಲ್ಲಿ ಪರಿಸರ ಸಂರಕ್ಷಣೆ ಅಂಗವಾಗಿ ವಿಶೇಷ ಸ್ವಚ್ಛತಾ ಮತ್ತು ಹಸಿರು ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಯಿತು.
ಇದರೊಂದಿಗೆ ಸೀಗೆ ಬೆಟ್ಟದ ವ್ಯಾಪ್ತಿಯಲ್ಲಿ ಬೀಜದ ಉಂಡೆ (ಸೀಡ್ ಬಾಲ್)ಗಳನ್ನು ಪಸರಿಸಲಾಯಿತು. ಅಲ್ಲದೆ ಮಳೆ ಮಲ್ಲೇಶ್ವರ ದೇವಸ್ಥಾನದ ಪ್ರವೇಶ ದ್ವಾರ ಹಾಗೂ ಸೀಗೆ ಮಠದ ಆವರಣದಲ್ಲಿ ತಲಾ ಒಂದು ಶಾಶ್ವತ ಡಸ್ಟ್‌ಬಿನ್ ಅಳವಡಿಸಿ, ಒಟ್ಟು ಮೂರು ಡಸ್ಟ್‌ಬಿನ್‌ಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಸ್ಥಾಪಿಸಲಾಯಿತು. ಪರಿಸರದ ಅಗತ್ಯವಿರುವ ಸ್ಥಳಗಳಲ್ಲಿ ಇನ್ನಷ್ಟು ಗಿಡಗಳನ್ನು ನೆಟ್ಟು ಹಸಿರು ವಾತಾವರಣ ನಿರ್ಮಾಣಕ್ಕೆ ಒತ್ತು ನೀಡಲಾಯಿತು.
ಕಾರ್ಯಕ್ರಮದ ಬಳಿಕ ಭಾಗವಹಿಸಿದ್ದ ಸದಸ್ಯರು ಹಾಗೂ ಕುಟುಂಬಸ್ಥರು ಒಟ್ಟಾಗಿ ಉಪಾಹಾರ ಸೇವಿಸಿ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ರೋಟರಿ ಜೋನ್–9ರ ZL ರೋ. ಡಾ. ತೇಜಸ್ವಿ, ಹಾಸನ ಆಕಾಶವಾಣಿ ಕೃಷಿ ವಿಭಾಗದ ಮುಖ್ಯಸ್ಥ ವಿ. ಮಧುಸೂದನ, ಯೋಗ ಗುರು ಶ್ರೀ ಚೇತನ್ ಗುರೂಜಿ, ಶ್ರೀ ಧರ್ಮಸ್ಥಳ ಮಂಜುನಾಥ ಆಯುರ್ವೇದಿಕ್ ಕಾಲೇಜಿನ ಡಾ. ಬಸವರಾಜ ಯಲಗಚ್ಚಿ, ರೋಟರಿ ಕ್ಲಬ್ ಹಾಸನ್ ಸನ್ ರೈಸ್ ಅಧ್ಯಕ್ಷ ರೋ. ಕೆ.ಎಸ್. ಯೋಗೇಶ್, ಕಾರ್ಯದರ್ಶಿ ರೋ. ದರ್ಶನ್, ನಿಕಟ ಪೂರ್ವ ಅಧ್ಯಕ್ಷ ರೋ. ಎಚ್.ಡಿ. ವಜ್ರಕುಮಾರ್, ನಿರ್ದೇಶಕರಾದ ರೋ. ಭುವನೇಶ್, ರೋ. ವೇಣುಗೋಪಾಲ್, ರೋ. ಗುರುಮೂರ್ತಿ, ರೋ. ಗವಿಗೌಡ, ರೋ. ಮಧು, ರೋ. ಕರುಣೇಶ್ ಸೇರಿದಂತೆ ಕ್ಲಬ್‌ನ ಎಲ್ಲಾ ಸದಸ್ಯರು ಕುಟುಂಬ ಸಮೇತರಾಗಿ ಭಾಗವಹಿಸಿದ್ದರು.
ಹೌಸ್ ಆಫ್ ಭಾರತ್ ಸಂಸ್ಥಾಪಕರಾದ ಕಿರಣ್, ದರ್ಶನ್, ರಮೇಶ್ ಆಚಾರಿ, ಪೂರ್ಣಿಮಾ, ಹೇಮರಾಜು, ನಿಖಿಲ್, ಗುರುಸಜ್ಜನ್, ಕು. ಸಖಿ, ಯುವ ಮೋರ್ಚಾ ಮುಖಂಡ ಹರ್ಷಿತ್ ಸೇರಿದಂತೆ ಹಲವಾರು ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಿದರು.
ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಆಯೋಜಕರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.




