ಸಕಲೇಶಪುರ :- ಕಾಡಾನೆ ಹಾವಳಿ, ಕಾಫಿ ಬೆಳೆ ನಷ್ಟ, ಅರಣ್ಯ ಇಲಾಖೆ ಸಂಬಂಧಿತ ಸಮಸ್ಯೆಗಳು ಹಾಗೂ ಬೆಳೆಗಾರರ ಹಿತಾಸಕ್ತಿಯ ವಿಚಾರಗಳಲ್ಲಿ ಸರ್ಕಾರದ ಗಮನ ಸೆಳೆದು ಶಾಶ್ವತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಹಾಸನ ಜಿಲ್ಲಾ ಬೆಳೆಗಾರರ ಸಂಘದ ನೂತನ ಅಧ್ಯಕ್ಷ ಮಂಜುನಾಥ್ ಶೆಟ್ಟಿ ಹೇಳಿದರು.

ವಳಲಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘಕ್ಕೆ ಶುಕ್ರವಾರ ಭೇಟಿ ನೀಡಿ ಬೆಳೆಗಾರರೊಂದಿಗೆ ಸಮಾಲೋಚನೆ ನಡೆಸಿದ ಅವರು, ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಬೆಳೆಗಾರರೊಂದಿಗೆ ನೇರ ಸಂಪರ್ಕ ಬೆಳೆಸಿ, ಅವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸುಮಾರು ಏಳು ಸಾವಿರ ಕಾಡಾನೆಗಳಿದ್ದು, ಮಲೆನಾಡು ಭಾಗದಲ್ಲೇ ಸುಮಾರು 200ಕ್ಕೂ ಅಧಿಕ ಆನೆಗಳು ನಿರಂತರ ಹಾವಳಿ ನಡೆಸುತ್ತಿವೆ. ಸರ್ಕಾರ ಈಗಾಗಲೇ ಬೆಳೆಹಾನಿ ಹಾಗೂ ಜೀವಹಾನಿಗೆ ಕೋಟ್ಯಂತರ ರೂಪಾಯಿ ಪರಿಹಾರ ನೀಡುತ್ತಿದೆ. ಒಬ್ಬ ವ್ಯಕ್ತಿ ಕಾಡಾನೆ ದಾಳಿಯಲ್ಲಿ ಮೃತಪಟ್ಟರೆ ₹20 ಲಕ್ಷ ಪರಿಹಾರ ನೀಡಲಾಗುತ್ತಿದೆ. ಈ ಎಲ್ಲ ವೆಚ್ಚದ ಬದಲು ಸಮಸ್ಯೆ ತೀವ್ರವಾಗಿರುವ ಪ್ರದೇಶಗಳಿಂದ ಕಾಡಾನೆಗಳನ್ನು ವೈಜ್ಞಾನಿಕವಾಗಿ ಸ್ಥಳಾಂತರಿಸುವ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಕಾನೂನುಬದ್ಧ ಹೋರಾಟದ ಜೊತೆಗೆ ಮಲೆನಾಡಿನ ಎಲ್ಲಾ ಬೆಳೆಗಾರರನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆ ಅಥವಾ ಕಾಲ್ನಡಿಗೆ ಜಾಥಾ ಆಯೋಜಿಸಿ ಸರ್ಕಾರದ ಗಮನ ಸೆಳೆಯುವ ಅಗತ್ಯವಿದೆ. ಈ ಹೋರಾಟಕ್ಕೆ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಾರರ ಸಂಘಗಳು ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಕಾಫಿ ಬೆಳೆ ನಷ್ಟಕ್ಕೆ ಸರ್ಕಾರದಿಂದ ದೊರೆಯುತ್ತಿರುವ ಪರಿಹಾರ ಅತೀ ಕಡಿಮೆಯಾಗಿದ್ದು, ಸೂಕ್ತ ಹಾಗೂ ನ್ಯಾಯಸಮ್ಮತ ಪರಿಹಾರ ಹೆಚ್ಚಿಸುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದರು.ಪ್ರತಿ ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಾರರ ಸಂಘವೂ ಸ್ವಂತ ಕಟ್ಟಡ ಹೊಂದುವ ಗುರಿಯನ್ನು ಹೊಂದಬೇಕು. ಇದಕ್ಕಾಗಿ ಸದಸ್ಯರು ಸಹಭಾಗಿತ್ವದ ಮೂಲಕ ಆರ್ಥಿಕ ಸಹಕಾರ ನೀಡಿದರೆ ಸಂಘಟನೆ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಸಲಹೆ ನೀಡಿದರು.

“ನಾನು ಜಿಲ್ಲಾ ಅಧ್ಯಕ್ಷನಾದರೂ ಗ್ರಾಮ ಪಂಚಾಯಿತಿ ಮಟ್ಟದ ಪ್ರತಿಯೊಬ್ಬ ಬೆಳೆಗಾರರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸುವುದು ನನ್ನ ಆದ್ಯತೆ. ಸಂಘ ಬಲವಾಗಿದ್ದರೆ ಮಾತ್ರ ರೈತರ ಧ್ವನಿ ಸರ್ಕಾರದವರೆಗೆ ಪರಿಣಾಮಕಾರಿಯಾಗಿ ತಲುಪುತ್ತದೆ” ಎಂದು ಮಂಜುನಾಥ್ ಶೆಟ್ಟಿ ಹೇಳಿದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಬೆಳೆಗಾರರ ಸಂಘದ ಗೌರವ ಕಾರ್ಯದರ್ಶಿ ಹೆಗ್ಗಾವೇ ಪುಟ್ಟರಾಜು, ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಬೇಕಾದರೆ ಎಲ್ಲಾ ಬೆಳೆಗಾರರು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಾಗಿದೆ.”ಸಂಘ ನಮಗೆ ಏನು ಮಾಡಿದೆ ಎನ್ನುವುದಕ್ಕಿಂತ, ನಾವು ಸಂಘಕ್ಕೆ ಏನು ಕೊಡುಗೆ ನೀಡಿದ್ದೇವೆ ಎಂಬ ಆತ್ಮಾವಲೋಕನ ಅಗತ್ಯ. ಸಂಘವನ್ನು ಬಲಪಡಿಸಿದರೆ ಸಂಘವೇ ನಮ್ಮ ಹಕ್ಕುಗಳಿಗಾಗಿ ಬಲವಾಗಿ ಹೋರಾಡಲಿದೆ” ಎಂದು ಅವರು ಹೇಳಿದರು.

ವಳಲಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ಅಧ್ಯಕ್ಷ ವಿ.ಪಿ. ವಿಶ್ವನಾಥ್ ಮಾತನಾಡಿ, ಈ ಭಾಗದಲ್ಲಿ ಕಾಡಾನೆ ಹಾವಳಿ, ಡೀಮ್ಡ್ ಫಾರೆಸ್ಟ್, ಸೆಕ್ಷನ್–4 ಸೇರಿದಂತೆ ಹಲವು ಅರಣ್ಯ ಸಮಸ್ಯೆಗಳು ಬೆಳೆಗಾರರನ್ನು ಕಾಡುತ್ತಿವೆ. ಅಧಿಕ ಮಳೆಯಿಂದ ಕಾಫಿ ಉದುರುವ ಪ್ರಮಾಣ ಹೆಚ್ಚಾಗಿದ್ದು, ಸರ್ಕಾರದಿಂದ ಸಮರ್ಪಕ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಸಂಘ ಪರಿಣಾಮಕಾರಿ ಹೋರಾಟ ನಡೆಸಬೇಕು.ಕಾಡಾನೆ ಸಮಸ್ಯೆ ಕುರಿತು ಆಯೋಜಿಸಲಾಗುವ ಕಾಲ್ನಡಿಗೆ ಜಾಥಾಗೆ ವಳಲಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದಿಂದ ಎರಡು ಬಸ್‌ಗಳಲ್ಲಿ ನೂರಕ್ಕೂ ಹೆಚ್ಚು ಬೆಳೆಗಾರರು ಭಾಗವಹಿಸಲಿದ್ದು, ಜಿಲ್ಲಾ ಸಂಘದ ಎಲ್ಲ ಹೋರಾಟಗಳಿಗೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಅವರು ಘೋಷಿಸಿದರು.

ಸಭೆಯಲ್ಲಿ ಅನೇಕ ಬೆಳೆಗಾರರು ಸೆಕ್ಷನ್–4, ಡೀಮ್ಡ್ ಫಾರೆಸ್ಟ್, ಬೆಳೆ ವಿಮೆ, ಕಾಡಾನೆ ಹಾವಳಿ ಹಾಗೂ ಬೆಳೆಹಾನಿ ಪರಿಹಾರದ ಹಣ ಸಂಪೂರ್ಣವಾಗಿ ಬಿಡುಗಡೆಯಾಗದೇ ಇರುವ ಕುರಿತು ಅಹವಾಲು ಸಲ್ಲಿಸಿದರು. ಅರಣ್ಯ ಇಲಾಖೆಯಿಂದ ಪರಿಹಾರಧನದ ಪೂರ್ಣ ಪ್ರಮಾಣದ ಬಿಡುಗಡೆ ಹಾಗೂ ಬೆಳೆಗಾರರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸುವಂತೆ ಜಿಲ್ಲಾ ಸಂಘದ ಪದಾಧಿಕಾರಿಗಳಿಗೆ ಮನವಿ ಮಾಡಿದರು.

ಸಭೆಯಲ್ಲಿ ಹಾಸನ ಜಿಲ್ಲಾ ಬೆಳೆಗಾರರ ಸಂಘದ ಮಾಜಿ ಸಂಘಟನಾ ಕಾರ್ಯದರ್ಶಿ ಕೆ.ಪಿ. ಕೃಷ್ಣೇಗೌಡ, ವಳಲಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ಉಪಾಧ್ಯಕ್ಷ ರುದ್ರೇಶ್, ಕಾರ್ಯದರ್ಶಿ ಅರುಣ್ ಗೌಡ ಕರಡಿಗಾಲ, ಖಜಾಂಚಿ ಹೂವಣ್ಣ ಗೌಡ (ಹಿರಿದನಹಳ್ಳಿ) ಹಾಗೂ ನಿರ್ದೇಶಕರು, ಪದಾಧಿಕಾರಿಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಗಾರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *