
ಸಕಲೇಶಪುರ, ಆ. 6: ಕಾಡಾನೆಗಳ ನಿರಂತರ ಸಂಚಾರದ ಹಿನ್ನೆಲೆಯಲ್ಲಿ ಸಕಲೇಶಪುರ ವಲಯ ಅರಣ್ಯಾಧಿಕಾರಿಗಳು ತಾಲೂಕಿನ ದೊಡ್ಡ ಸತ್ತಿಗಾಲ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರು, ಸಾರ್ವಜನಿಕರು, ರೈತರು ಹಾಗೂ ಕಾಫಿ ತೋಟ, ಹೊಲ-ಗದ್ದೆಗಳಲ್ಲಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರಿಗೆ ಮುಂಜಾಗ್ರತಾ ಅರಿವು ಮೂಡಿಸಿದರು.
ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಚಲನವಲನ ಹೆಚ್ಚಾಗಿರುವುದರಿಂದ ಗ್ರಾಮಸ್ಥರು ಅಗತ್ಯ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದರು. ವಿಶೇಷವಾಗಿ ಬೆಳಗಿನ ಜಾವ ಹಾಗೂ ಸಂಜೆ ವೇಳೆಯಲ್ಲಿ ಒಬ್ಬರೇ ತೋಟ ಅಥವಾ ಹೊಲಗಳಿಗೆ ತೆರಳಬಾರದು. ಗುಂಪಾಗಿ ತೆರಳುವುದು, ಕಾಡಾನೆಗಳ ಚಲನವಲನದ ಬಗ್ಗೆ ಅರಣ್ಯ ಇಲಾಖೆಯಿಂದ ಮಾಹಿತಿ ಪಡೆದುಕೊಂಡ ನಂತರವೇ ಕೆಲಸಕ್ಕೆ ಹೋಗುವುದು ಸುರಕ್ಷಿತ ಎಂದು ತಿಳಿಸಿದರು.
ಕಾಡಾನೆಗಳು ಕಂಡುಬಂದರೆ ಅವುಗಳನ್ನು ಕೆಣಕಲು ಅಥವಾ ಹತ್ತಿರ ಹೋಗಿ ಮೊಬೈಲ್ನಲ್ಲಿ ಚಿತ್ರ, ವಿಡಿಯೊ ಚಿತ್ರೀಕರಿಸಲು ಪ್ರಯತ್ನಿಸಬಾರದು. ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೆ ಸುರಕ್ಷಿತ ಸ್ಥಳಕ್ಕೆ ತೆರಳಿ ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಸೂಚಿಸಿದರು.
ಕಾಫಿ ತೋಟಗಳಲ್ಲಿ ದಟ್ಟ ಗಿಡಗಂಟಿಗಳಿರುವ ಪ್ರದೇಶಗಳಲ್ಲಿ ಕೆಲಸ ಮಾಡುವಾಗ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಮಕ್ಕಳನ್ನು ಹಾಗೂ ವಯೋವೃದ್ಧರನ್ನು ಒಬ್ಬರೇ ಹೊರಗೆ ಕಳುಹಿಸದಂತೆ ಕುಟುಂಬ ಸದಸ್ಯರಿಗೆ ತಿಳಿಸಲಾಯಿತು.
ರಾತ್ರಿ ಸಮಯದಲ್ಲಿ ಅನಗತ್ಯವಾಗಿ ಹೊರ ಸಂಚಾರ ಮಾಡದಂತೆ ಹಾಗೂ ಟಾರ್ಚ್ ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಸಲಹೆ ನೀಡಿದರು.
ಅರಣ್ಯ ಇಲಾಖೆ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ, ಕಾಡಾನೆಗಳ ಚಲನವಲನದ ಬಗ್ಗೆ ನಿರಂತರವಾಗಿ ಮಾಹಿತಿ ನೀಡುವುದಾಗಿ ಭರವಸೆ ನೀಡಿತು.
ಯಾವುದೇ ತುರ್ತು ಪರಿಸ್ಥಿತಿ ಎದುರಾದಲ್ಲಿ ಅರಣ್ಯ ಇಲಾಖೆಯ ಸಹಾಯವಾಣಿ ಅಥವಾ ಸ್ಥಳೀಯ ಅರಣ್ಯ ಸಿಬ್ಬಂದಿಯನ್ನು ತಕ್ಷಣ ಸಂಪರ್ಕಿಸುವಂತೆ ಮನವಿ ಮಾಡಲಾಯಿತು.
