
ಸಕಲೇಶಪುರ: ತಾಲ್ಲೂಕಿನ ಕಡಗರವಳ್ಳಿ ಗ್ರಾಮದಲ್ಲಿ ಕಾಡಾನೆಗಳು ಗದ್ದೆಗೆ ನುಗ್ಗಿ ಭತ್ತದ ಬೆಳೆಯನ್ನು ತಿಂದು, ತುಳಿದು ಹಾನಿ ಮಾಡಿರುವ ಘಟನೆ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕಳೆದ ರಾತ್ರಿ ಗ್ರಾಮದ ಸುಬ್ಬರಾಯಿ ಗೌಡ ಹಾಗೂ ಅಪ್ಪಸ್ವಾಮಿ ಗೌಡ ಅವರ ಗದ್ದೆಗಳಿಗೆ ಕಾಡಾನೆಗಳು ನುಗ್ಗಿದ್ದು, ಭತ್ತದ ಬೆಳೆಯನ್ನು ತಿಂದು ಹಾಗೂ ತುಳಿದು ಸಾಕಷ್ಟು ಪ್ರಮಾಣದಲ್ಲಿ ಹಾನಿಗೊಳಿಸಿವೆ.
ಬೆಳಗ್ಗೆ ವಿಷಯ ತಿಳಿದು ಸಕಲೇಶಪುರ ವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಬ್ಯಾಕರವಳ್ಳಿ ಉಪ ವಲಯ ಅರಣ್ಯಾಧಿಕಾರಿ, ಕೆಂಚಿನಕುಮಾರಿ ಹಾಗೂ ಕಾಗಿನಹರೆ ಗಸ್ತು ಅರಣ್ಯ ಪಾಲಕರು ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಕಡಗರವಳ್ಳಿ ಗ್ರಾಮಕ್ಕೆ ಭೇಟಿ ನೀಡಿದರು.
ಅಧಿಕಾರಿಗಳು ಹಾನಿಗೊಳಗಾದ ಗದ್ದೆಗಳಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದು, ಕಾಡಾನೆಗಳಿಂದ ಭತ್ತದ ಬೆಳೆಗೆ ಹಾನಿಯಾಗಿರುವುದು ಕಂಡುಬಂದಿದೆ. ಬೆಳೆ ಹಾನಿಯ ಕುರಿತು ಅಗತ್ಯ ದಾಖಲೆ ಹಾಗೂ ಮಾಹಿತಿಯನ್ನು ಪಡೆದುಕೊಂಡು, ನಿಯಮಾನುಸಾರ ಅರಣ್ಯ ಇಲಾಖೆಯ ವತಿಯಿಂದ ಸೂಕ್ತ ಪರಿಹಾರ ಕೊಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ರೈತರಿಗೆ ತಿಳಿಸಿದರು.
ಇದೇ ವೇಳೆ ಗ್ರಾಮಸ್ಥರು ಹಾಗೂ ರೈತರಿಗೆ ಕಾಡಾನೆಗಳ ಚಲನವಲನದ ಬಗ್ಗೆ ಮಾಹಿತಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ, ಕಾಡಾನೆಗಳಿರುವ ಪ್ರದೇಶಗಳಿಗೆ ಅನಗತ್ಯವಾಗಿ ತೆರಳದಂತೆ ಎಚ್ಚರಿಕೆ ನೀಡಿದರು. ವಿಶೇಷವಾಗಿ ಬೆಳಗಿನ ಜಾವ ಹಾಗೂ ಸಂಜೆ ವೇಳೆ ತೋಟ, ಗದ್ದೆಗಳಿಗೆ ತೆರಳುವ ಸಂದರ್ಭದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು.
ಅರಣ್ಯ ಇಲಾಖೆಯ ಮಾಹಿತಿ ಪಡೆದುಕೊಂಡ ನಂತರವೇ ಕೃಷಿ ಚಟುವಟಿಕೆಗಳಿಗೆ ತೆರಳಬೇಕು. ಕಾಡಾನೆಗಳು ಕಂಡುಬಂದಲ್ಲಿ ಅವುಗಳನ್ನು ಹಿಂಬಾಲಿಸುವುದು, ಓಡಿಸಲು ಪ್ರಯತ್ನಿಸುವುದು ಅಥವಾ ಸಮೀಪಕ್ಕೆ ತೆರಳುವುದು ಮಾಡಬಾರದು ಎಂದು ಅಧಿಕಾರಿಗಳು ಗ್ರಾಮಸ್ಥರಿಗೆ ಮನವಿ ಮಾಡಿದರು.
ಕಾಡಾನೆಗಳ ಚಲನವಲನದ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣ ಅರಣ್ಯ ಇಲಾಖೆಗೆ ತಿಳಿಸುವಂತೆ ಸೂಚಿಸಲಾಯಿತು.

