
ಹೆತ್ತೂರು: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ವಾಹನ ಮಾಲೀಕರು ಹಾಗೂ ಚಾಲಕರ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಸೆಪ್ಟೆಂಬರ್ 5ರಂದು ಭಾರತದ ಪ್ರಥಮ ಉಪರಾಷ್ಟ್ರಪತಿ ಹಾಗೂ ದ್ವಿತೀಯ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಶಿಕ್ಷಕರ ಬಗ್ಗೆ ಅವರಿಗೆ ಇದ್ದ ಅಪಾರ ಗೌರವದ ಹಿನ್ನೆಲೆಯಲ್ಲಿ ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು ಎಂದು ಹೆತ್ತೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಎಚ್.ಪಿ. ರವಿಕುಮಾರ್ ತಿಳಿಸಿದರು.
ಮಂಗಳವಾರ ಹೆತ್ತೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಾಲಾ ವಾಹನ ಮಾಲೀಕರು ಹಾಗೂ ಚಾಲಕರ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆಯನ್ನು ಹೂವಿನ ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಶಿಕ್ಷಕರ ಸ್ಥಾನವನ್ನು ಯಾವುದೇ ತಂತ್ರಜ್ಞಾನದಿಂದ ತುಂಬಲು ಸಾಧ್ಯವಿಲ್ಲ. ಭಾರತದಲ್ಲಿನ ಗುರು-ಶಿಷ್ಯ ಪರಂಪರೆಗೆ ಶತಮಾನಗಳ ಇತಿಹಾಸವಿದ್ದು, ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯ ನಡುವೆಯೂ ಗುರುವಿನ ಸ್ಥಾನ ಹಾಗೂ ಗೌರವ ಇಂದಿಗೂ ಸದೃಢವಾಗಿದೆ ಎಂದರು.
ಒಬ್ಬ ಶಿಕ್ಷಕ ಕೇವಲ ಅಕ್ಷರ ಕಲಿಸುವುದಿಲ್ಲ. ಅವರು ನಮಗೆ ಉತ್ತಮ ಸಂಸ್ಕಾರ, ಜೀವನ ಮೌಲ್ಯಗಳು ಹಾಗೂ ಸನ್ಮಾರ್ಗವನ್ನು ತೋರಿಸುತ್ತಾರೆ. ನಮ್ಮಲ್ಲಿರುವ ಅಜ್ಞಾನದ ಕತ್ತಲೆಯನ್ನು ಹೊಡೆದೋಡಿಸಿ ಜ್ಞಾನದ ಬೆಳಕನ್ನು ಮೂಡಿಸುವವರು ಗುರುಗಳು. ತಂದೆ-ತಾಯಿ ನಮಗೆ ಜನ್ಮ ನೀಡಿದರೆ, ಶಿಕ್ಷಕರು ನಮಗೆ ಬದುಕನ್ನು ಕಲಿಸುತ್ತಾರೆ ಎಂದು ಹೇಳಿದರು.
ಗುರುಗಳಿಲ್ಲದೆ ಸಮಾಜದ ನಿರ್ಮಾಣ ಅಸಾಧ್ಯ. ನಾವೆಲ್ಲರೂ ನಮ್ಮ ಗುರುಗಳನ್ನು ಗೌರವಿಸಿ, ಅವರ ಮಾರ್ಗದರ್ಶನದಲ್ಲಿ ನಡೆದು ಉತ್ತಮ ಪ್ರಜೆಗಳಾಗಬೇಕು. ಶಿಕ್ಷಕರ ದಿನಾಚರಣೆಯಂದು ವಿದ್ಯಾರ್ಥಿಗಳಿಂದ ದೊರೆಯುವ ಪ್ರೀತಿ, ಗೌರವ ಹಾಗೂ ಚಪ್ಪಾಳೆಯೇ ಶಿಕ್ಷಕರ ಜೀವನದಲ್ಲಿ ಸಿಗುವ ನಿಜವಾದ ಗೌರವ ಮತ್ತು ಸಂತೋಷವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ 40 ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಮಂಜುನಾಥ್, ಶಾಲಾ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಸಚಿನ್, ಉಪ ಪ್ರಾಂಶುಪಾಲ ಭಾಸ್ಕರ್, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಚ್.ಕೆ. ಸತೀಶ್, ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ, ಪೋಷಕರು ಹಾಗೂ ವಾಹನ ಮಾಲೀಕರು ಮತ್ತು ಚಾಲಕರು ಉಪಸ್ಥಿತರಿದ್ದರು
