
ಸಕಲೇಶಪುರ: ಕ್ರೀಡೆಯಲ್ಲಿ ಗೆಲುವು ಸಾಧಿಸಿದಾಗ ಹಿಗ್ಗದೆ, ಸೋತಾಗ ಕುಗ್ಗದೆ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ನಿರಂತರ ಅಭ್ಯಾಸದ ಮೂಲಕ ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಹಿರಿಯ ಬ್ಯಾಡ್ಮಿಂಟನ್ ಆಟಗಾರ ಮಹೇಶ್ ಹೇಳಿದರು.
ಪಟ್ಟಣದ ಎಸ್.ವೈ. ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಮಲ್ನಾಡ್ ಶಟ್ಲರ್ಸ್ ವತಿಯಿಂದ ಆಯೋಜಿಸಿದ್ದ ಅಂತರ ಜಿಲ್ಲಾ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನುದ್ದೇಶಿಸಿ ಅವರು ಮಾತನಾಡಿಸಕಲೇಶಪುರದಲ್ಲಿ ಬ್ಯಾಡ್ಮಿಂಟನ್ ಆಟಗಾರ ಯೂಸುಫ್ ಅವರು ಎಸ್.ವೈ. ಬ್ಯಾಡ್ಮಿಂಟನ್ ಅಕಾಡೆಮಿಯನ್ನು ಆರಂಭಿಸಿರುವುದರಿಂದ ಸ್ಥಳೀಯ ಹಾಗೂ ಹೊರ ಜಿಲ್ಲೆಗಳ ಆಟಗಾರರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆ ದೊರೆತಿದೆ. ಇಂತಹ ಕ್ರೀಡಾಕೂಟಗಳು ಯುವ ಆಟಗಾರರ ಪ್ರತಿಭೆ ಗುರುತಿಸಲು ಸಹಕಾರಿಯಾಗಲಿವೆ.ಗೆಲುವು ಸಾಧಿಸಿದಾಗ ಅಹಂಕಾರ ಪಡದೆ, ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ಪಂದ್ಯಾವಳಿಗಳಿಗೆ ಸಿದ್ಧರಾಗಬೇಕು ಎಂದರು.
ಎಸ್.ವೈ. ಬ್ಯಾಡ್ಮಿಂಟನ್ ಅಕಾಡೆಮಿ ಮಾಲೀಕ ಯೂಸುಫ್ ಮಾತನಾಡಿ, ತಾಲೂಕಿನಲ್ಲಿ ಬ್ಯಾಡ್ಮಿಂಟನ್ ಅಭ್ಯಾಸಕ್ಕೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ಅಕಾಡೆಮಿ ಆರಂಭಿಸಲಾಗಿದೆ. ಯುವ ಆಟಗಾರರು ಇದರ ಸದುಪಯೋಗ ಪಡೆದುಕೊಂಡು ನಿರಂತರ ಅಭ್ಯಾಸ ನಡೆಸಬೇಕು ಹಾಗೂ ಉತ್ತಮ ಸಾಧನೆ ಮಾಡಲು ಯುವ ಆಟಗಾರರು ಪರಿಶ್ರಮ ಪಡಬೇಕು ಎಂದರು.
ಪಂದ್ಯಾವಳಿಯಲ್ಲಿ ಮೂಡಿಗೆರೆ ತಾಲೂಕಿನ ಬಣಕಲ್‌ನ ಪೈಜ್ ಹಾಗೂ ನಿಖಿಲ್ ಜೋಡಿ ಪ್ರಥಮ ಸ್ಥಾನ ಪಡೆದು ಆಕರ್ಷಕ ಟ್ರೋಫಿ ಹಾಗೂ ₹5,000 ನಗದು ಬಹುಮಾನ ಪಡೆದರು.ಸಕಲೇಶಪುರದ ನಾಗೇಶ್ ಹಾಗೂ ಚಂದನ್ ಜೋಡಿ ದ್ವಿತೀಯ ಸ್ಥಾನ ಪಡೆದು ಆಕರ್ಷಕ ಟ್ರೋಫಿ ಹಾಗೂ ₹3,000 ನಗದು ಬಹುಮಾನ ಪಡೆದರು.ಸಕಲೇಶಪುರದ ಪ್ರಶಾಂತ್ ಹಾಗೂ ವಿವೇಕ್ ಜೋಡಿ ತೃತೀಯ ಸ್ಥಾನ ಪಡೆದು ಆಕರ್ಷಕ ಟ್ರೋಫಿ ಹಾಗೂ ₹2,000 ನಗದು ಬಹುಮಾನ ಪಡೆದರು.
ಬಣಕಲ್ ಮೂಲದ ಆಜಾಮ್ ಹಾಗೂ ಮೌಸಿನ್ ಜೋಡಿ ನಾಲ್ಕನೇ ಸ್ಥಾನ ಗಳಿಸಿತು.ಈ ಸಂದರ್ಭದಲ್ಲಿ ಪ್ರಥಮ ಬಹುಮಾನ ವಿತರಿಸಿದ ಉದ್ಯಮಿ ಗಿರೀಶ್,ಉದ್ಯಮಿ ಅಬ್ದುಲ್ ಖಾದರ್,ಪತ್ರಕರ್ತ ಸುಧೀರ್, ಆಟಗಾರರಾದ ಸೂರ್ಯ, ನಿಹಾರ್, ಚಿರಾಯು ಸೇರಿದಂತೆ ಕ್ಲಬ್ ನ ಹಲವು ಆಟಗಾರರು ಉಪಸ್ಥಿತರಿದ್ದರು.
