
ಪ್ರಕೃತಿ ವಿಕೋಪ, ಹವಾಮಾನ ವೈಪರೀತ್ಯಗಳಾದ ಅತಿವೃಷ್ಟಿ, ಅನಾವೃಷ್ಟಿ, ಬಿರುಗಾಳಿ, ಆಲಿಕಲ್ಲು ಮಳೆ, ಪ್ರವಾಹ, ಸಿಡಿಲಿನಿಂದ ಉಂಟಾಗುವ ಬೆಂಕಿ ಅವಘಡ ಇತ್ಯಾದಿ ಕಾರಣಗಳಿಂದ ಸಂಭವಿಸಬಹುದಾದ ಬೆಳೆಹಾನಿಯ ನಷ್ಟದ ಪರಿಹಾರ ನೀಡಲು ಮರುವಿನ್ಯಾಸಗೊಳಿಸಿದ ಹವಾಮಾನ ಆಧರಿತ ಬೆಳೆ ವಿಮೆ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಬೆಳೆ ವಿಮೆಯನ್ನು ಗ್ರಾಮ ಪಂಚಾಯಿತಿವಾರು ನಿರ್ಧರಿಸಿ, ಬೆಳೆ ನಷ್ಟದ ಪರಿಹಾರವನ್ನು ನೀಡುವುದರ ಮೂಲಕ ರೈತರಿಗೆ ನೆರವಾಗುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
2023-24ರ ಮುಂಗಾರು ಹಂಗಾಮಿಗೆ ಹಾಸನ ಜಿಲ್ಲೆಯಲ್ಲಿ ಅಡಿಕೆ, ಕಾಳುಮೆಣಸು, ದಾಳಿಂಬೆ ಮತ್ತು ಮಾವು ಬೆಳೆಗಳು ಈ ವಿಮಾ ಯೋಜನೆಯಡಿ ಅಧಿಸೂಚಿತವಾಗಿವೆ.
ಆಲೂರು, ಅರಕಲಗೂಡು, ಬೇಲೂರು ಮತ್ತು ಸಕಲೇಶಪುರ ತಾಲ್ಲೂಕಿನ ರೈತರು ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಈ ವಿಮಾ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು. ಆಲೂರು, ಅರಕಲಗೂಡು ಮತ್ತು ಸಕಲೇಶಪುರ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ರೈತರು ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ವಿಮಾ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು.
ಬೇಲೂರು ತಾಲ್ಲೂಕಿನಲ್ಲಿ ಅಡಿಕೆ ಬೆಳೆಗೆ ಎಲ್ಲ ಗ್ರಾಮ ಪಂಚಾಯಿತಿಗಳ ರೈತರು ಹಾಗೂ ಕಾಳು ಮೆಣಸು ಬೆಳೆಗೆ ಆಯ್ದ ಗ್ರಾಮ ಪಂಚಾಯಿತಿಗಳ ರೈತರು ಮಾತ್ರ ವಿಮಾ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು. ರೈತರು ಬೇಲೂರು ತಾಲ್ಲೂಕಿನ ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ತಮ್ಮ ಗ್ರಾಮ ಪಂಚಾಯಿತಿ ವಿಮಾ ಯೋಜನೆಯಡಿ ಒಳಪಟ್ಟಿರುವ ಬಗ್ಗೆ ಖಾತರಿ ಪಡಿಸಿಕೊಂಡ ನಂತರ ಮುಂದಿನ ಕ್ರಮ ಕೈಗೊಳ್ಳಬೇಕು.
ಅರಸೀಕೆರೆ ತಾಲ್ಲೂಕಿನ ರೈತರು ದಾಳಿಂಬೆ ಮತ್ತು ಮಾವು ಬೆಳೆಗಳಿಗೆ ಈ ವಿಮಾ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು.
ಅಡಿಕೆ, ಕಾಳುಮೆಣಸು ಮತ್ತು ದಾಳಿಂಬೆ ಬೆಳೆಗಳ ನೋಂದಣಿಗೆ ಜುಲೈ 15 ಕೊನೆಯ ದಿನವಾಗಿದ್ದು, ಮಾವು ಬೆಳೆಯ ನೋಂದಣಿಗೆ ಜುಲೈ 31 ಕೊನೆಯ ದಿನವಾಗಿದೆ.
ರೈತರು ಹತ್ತಿರದ ಬ್ಯಾಂಕ್, ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ನೋಂದಾಯಿಸಬಹುದು. ಬೆಳೆಸಾಲ ಪಡೆದ ಎಲ್ಲ ರೈತರನ್ನು ಕಡ್ಡಾಯವಾಗಿ ವಿಮಾ ಯೋಜನೆಯಲ್ಲಿ ಒಳಪಡಿಸಲಾಗುವುದು. ಬೆಳೆಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛೆ ಪಡದೇ ಇದ್ದಲ್ಲಿ, ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಬೇಕು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.
