
ಹಾಸನ: ಪತ್ನಿ ಹಾಗೂ ಆಕೆಯ ಕುಟುಂಬಸ್ಥರಿಂದ ನೊಂದ ಪತಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. 40 ವರ್ಷದ ವಿನಯ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಹಾಸನ ತಾಲೂಕಿನ ಮಾರಗೌಡನಹಳ್ಳಿ ಗ್ರಾಮದ ನಿವಾಸಿಯಾಗಿರುವ ವಿನಯ್ ಜುಲೈ 9ರಂದು ಸೆಲ್ಫಿ ವಿಡಿಯೋ ವಿಷ ಸೇವನೆ ಮಾಡಿದ್ದರು.
ನಂತರ ವಿನಯ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ವಿನಯ್ ಮೃತರಾಗಿದ್ದಾರೆ. 2011ರಲ್ಲಿ ಆಶಾ ಎಂಬವರನ್ನು ವಿನಯ್ ಮದುವೆಯಾಗಿದ್ದರು.
ವಿಷ ಸೇವನೆಗೂ ಮುನ್ನ ಎರಡು ವಿಡಿಯೋ ಮಾಡಿರುವ ವಿನಯ್, ಒಂದರಲ್ಲಿ ತನ್ನ ಪೋಷಕರಿಗೆ ಕ್ಷಮೆ ಕೇಳಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಪತ್ನಿ ಹಾಗೂ ಆಕೆಯ ಕುಟುಂಬಸ್ಥರ ಕಿರುಕುಳದ ಮಾಹಿತಿಯನ್ನು ನೀಡಿದ್ದಾರೆ.
ಸೆಲ್ಫಿ ವಿಡಿಯೋದಲ್ಲಿ ವಿನಯ್ ಹೇಳಿದ್ದೇನು?
ನನ್ನ ಸಾವಿಗೆ ನನ್ನ ಪತ್ನಿ ಆಶಾ, ಅತ್ತೆ ರತ್ನಮ್ಮ, ಆಶಾ ಅಕ್ಕ ಉಷಾ ಹಾಗೂ ಅವರು ಕುಟುಂಬದವರೇ ಕಾರಣ. ನನಗೆ ಮಾನಸಿಕವಾಗಿ ಚಿತ್ರಹಿಂಸೆ ಕೊಟ್ಟಿದ್ದಾರೆ. ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೇನೆ. ಆದರೂ ಅವರೆಲ್ಲಾ ಬದಲಾಗಿಲ್ಲ. ನನ್ನ ಪತ್ನಿ ಆಶಾ ಹಾಗೂ ಕುಟುಂಬಸ್ಥರ ಕಿರುಕುಳದಿಂದ ಮನನೊಂದು ವಿಷ ಸೇವಿಸುತ್ತಿದ್ದೇನೆ ಎಂದು ವಿನಯ್ ವಿಡಿಯೋದಲ್ಲಿ ಹೇಳಿದ್ದಾರೆ
ಅಕ್ಕ, ಅಮ್ಮ, ಬಾವ, ತಮ್ಮ, ನಾದಿನಿ ನನ್ನನ್ನು ಕ್ಷಮಿಸಿಬಿಡಿ. ಆಶಾ ಅವರ ಪೋಷಕರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ವಿನಯ್ ಆಗ್ರಹಿಸಿದ್ದಾರೆ. ಆಶಾ ಹಾಗೂ ಅವರ ಮನೆಯವರ ವಿರುದ್ಧ ವಿನಯ್ ಪೋಷಕರ ಆಕ್ರೋಶ ಹೊರಹಾಕಿದ್ದು, ಅವರೆಲ್ಲರ ಬಂಧನಕ್ಕೆ ಒತ್ತಾಯಿಸಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
