
ಸಕಲೇಶಪುರ:- ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿಯ ಹಿರಿಯೂರು ಕೂಡಿಗೆಯ ಅಂಗಡಿ ಮುಂಭಾಗದಲ್ಲಿ ಅರ್ಧಕ್ಕೆ ನಿಂತಿರುವ ಚರಂಡಿ ಅವ್ಯವಸ್ಥೆಯಿಂದ ಸಾರ್ವಜನಿಕರಿಗೆ ಹಾಗೂ ವರ್ತಕರಿಗೆ ತಿರುಗಾಡಲು ಹಾಗೂ ಸೊಳ್ಳೆ ಕಾಟದಿಂದ ಪ್ರತಿದಿನ ಸಮಸ್ಯೆಯಾಗುತ್ತಿದೆ.
ಹಿರಿಯೂರು ಕೂಡಿಗೆಯಲ್ಲಿ ಹೊಸದಾಗಿ ಡಾಂಬರಿಕರಣಗೊಂಡ ರಸ್ತೆಯ ಎರಡು ಬದಿಯಲ್ಲಿ ಇರುವ ಅಂಗಡಿಯ ಮುಂಭಾಗದಲ್ಲಿ ನಿರ್ಮಾಣ ಮಾಡಿದ ಚರಂಡಿ ವ್ಯವಸ್ಥೆ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದೆ. ಇದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗದೆ ಅಲ್ಲೇ ನಿಂತು ಪಾಚಿ ಕಟ್ಟಿ ವಾಸನೆ ಬರುವುದರೊಂದಿಗೆ ಕಾಯಿಲೆ ಹರಡುವ ಸೊಳ್ಳೆಗಳು ಹೆಚ್ಚಾಗುತ್ತಿದ್ದು ವರ್ತಕರಿಗೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆ ಎದುರಾಗುತ್ತಿದೆ.
ಪಿಡಬ್ಲ್ಯೂಡಿ ಕಡೆಯಿಂದ ನಿರ್ಮಾಣವಾಗುತ್ತಿದ್ದ ಚರಂಡಿ ವ್ಯವಸ್ಥೆಗೆ ಚೆಸ್ಕಾಂ ಇಂದ ಮೊದಲೇ ನಿರ್ಮಾಣವಾಗಿದ್ದ ವಿದ್ಯುತ್ ಕಂಬ ಅಡ್ಡ ಇದ್ದ ಕಾರಣ ಚರಂಡಿಯನ್ನು ಪೂರ್ಣಗೊಳಿಸಲು ಆಗಲಿಲ್ಲ. ಚೆಸ್ಕಾಂ ಅವರು ವಿದ್ಯುತ್ ಕಂಬವನ್ನು ಬೇರೆಡೆಗೆ ಸ್ಥಳಾಂತರಿಸಲು ಸರಿಯಾದ ಜಾಗದ ವ್ಯವಸ್ಥೆ ಇಲ್ಲ ಎಂಬ ಕಾರಣ ಕೊಟ್ಟರೆ, ಚರಂಡಿ ವ್ಯವಸ್ಥೆ ಪೂರ್ಣಗೊಳ್ಳಲು ಅಡ್ಡ ಇರುವ ವಿದ್ಯುತ್ ಕಂಬವನ್ನು ಸ್ಥಳಾಂತರಿಸಬೇಕೆಂಬುದು ಪಿ ಡಬ್ಲ್ಯೂಡಿ ಅಧಿಕಾರಿಗಳು ವರ್ತಕರಿಗೆ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.
ಇವರಿಬ್ಬರ ಮಧ್ಯೆ ಅರ್ಧಕ್ಕೆ ನಿಂತ ಚರಂಡಿ ವ್ಯವಸ್ಥೆಯಿಂದ ಹಿರಿಯೂರು ಕೂಡಿಗೆಯ ವರ್ತಕರು ಹಾಗೂ ಸಾರ್ವಜನಿಕರು ಪ್ರತಿದಿನ ಸಮಸ್ಯೆಯನ್ನು ಎದುರಿಸುವಂತಾಗಿದೆ.
ನಿಂತ ನೀರಿನಿಂದ ರೋಗಗಳನ್ನು ಹರಡುವ ಸೊಳ್ಳೆಗಳು ಹಾಗೂ ವಾಸನೆಯಿಂದ ಬೆಳಗ್ಗಿನ ಸಮಯದಲ್ಲೂ ಕೂಡ ಅಂಗಡಿಯಲ್ಲಿ ವ್ಯಾಪಾರವನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವರ್ತಕರು ದೂರುತ್ತಿದ್ದು .ಸಂಜೆ ಸೊಳ್ಳೆ ಕಾಟದಿಂದ ಬಹುಬೇಗ ಅಂಗಡಿಯನ್ನು ಮುಚ್ಚಿ ಮನೆಗೆ ಹೋಗಬೇಕಾಗುತ್ತದೆ ಎಂದು ವರ್ತಕರಲ್ಲಿ ಒಬ್ಬರಾದ ಹೇಮಂತ್ ಕುಮಾರ್ ವಿಷಾದ ವ್ಯಕ್ತಪಡಿಸಿದರು.
ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಶುಕ್ರವಾರ ಸಂತೆ ಗ್ರಾಮ ಪಂಚಾಯಿತಿಯನ್ನು ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ಮಾಡಿದ ಅಭಿವೃದ್ಧಿ ಅಧಿಕಾರಿ ಧರ್ಮಪ್ಪನವರು ಈಗ ನಮ್ಮ ವಳಲಹಳ್ಳಿ ಗ್ರಾಮ ಪಂಚಾಯಿತಿಗೆ ಬಂದಿರುವುದು ಖುಷಿಯ ವಿಚಾರ. ನಮ್ಮ ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಸೂಕ್ತ ಪರಿಹಾರವನ್ನು ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ. ಎಂದು ವರ್ತಕರಾದ ಕೆ ಎಮ್ ಡಿಲಾಕ್ಷ ಆಗ್ರಹಿಸಿದ್ದಾರೆ.
ಒಟ್ಟಾರೆ ಪಿ ಡಬ್ಲ್ಯುಡಿ ಹಾಗೂ ಚೆಸ್ಕಾಂ ಅವರ ವಿದ್ಯುತ್ ದೀಪದ ಕಂಬವನ್ನು ಸ್ಥಳಾಂತರಿಸಿ ಚರಂಡಿ ವ್ಯವಸ್ಥೆಯನ್ನು ಪೂರ್ಣಗೊಳಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಲ್ಪಿಸಿ ಕೊಡುವಂತಹ ಕೆಲಸ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಬಹುಬೇಗನೆ ಆಗಬೇಕಾಗಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.


