ಕಳೆದ 4-5 ವರ್ಷಗಳ ಹಿಂದೆ ಕಾಡಾನೆ ದಾಳಿಯಿಂದ ಸಾವನಪ್ಪಿದವರಿಗೆ ಬಿಡಿಗಾಸು ನೀಡಿ ಕೈ ತೊಳೆದುಕೊಳ್ಳುತ್ತಿದ್ದ ಅಧಿಕಾರಿಗಳು ಹಾಗೂ ಸರ್ಕಾರಗಳು ಬಡವರ ಜೀವವನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ.

ಆ ಸಮಯದಲ್ಲಿ ಕಾಡಾನೆ-ಮಾನವ ಸಂಘರ್ಷದ ಗಂಭೀರತೆಯನ್ನು ಅರಿತ ಯೆಡೆಹಳ್ಳಿ ಮಂಜುನಾಥ್ ಸ್ಥಳೀಯ ರೈತರಲ್ಲಿ ಅರಿವು ಮೂಡಿಸುತ್ತ ಕೆಲ ಸಂಘಟನೆಗಳ ಬೆಂಬಲ ಪಡೆದುಕೊಂಡು ತಮ್ಮದೇ ರೀತಿಯಲ್ಲಿ ಹೋರಾಟಗಳನ್ನು ಮಾಡುತ್ತಾ ಕಾಡಾನೆ ದಾಳಿಯಿಂದ ಸಾವು-ನೋವುಂಡ ಬಡವರ ಕುಟುಂಬದ ಧ್ವನಿಯಾಗಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಸಿಂಹಾಸ್ವಪ್ನರಾಗಿ ಹೋರಾಟಗಳಿಂದಲೇ ಬಡಜನರ ಸಾವಿನ ಸುದ್ದಿಯನ್ನು ಮೇಲಧಿಕಾರಿಗಳು ಹಾಗೂ ಸರ್ಕಾರದ ಗಮನಕ್ಕೆ ಬರುವಂತೆ ಮಾಡಿದ್ದಾರೆ.

ಕಾಡಾನೆ ಸಮಸ್ಯೆಯ ವಿಷಯದಲ್ಲಿ ನಿರಂತರ ಹೋರಾಟ ಮಾಡಿ ಕಾಡಾನೆ ದಾಳಿಯಿಂದ ಮರಣ ಹೊಂದಿದವರಿಗೆ ಕೊಡುತ್ತಿದ್ದ 2 ಲಕ್ಷ ಪರಿಹಾರ ಹಣವನ್ನು 15 ಲಕ್ಷಗಳಷ್ಟು ಏರಿಸಲು ಯೆಡೆಹಳ್ಳಿ ಆರ್ ಮಂಜುನಾಥ್ ಅವರ ನೇತೃತ್ವದ ನಿರಂತರ ಹೋರಾಟದ ಶ್ರಮವೇ ಬಹುತೇಕ.

ಸಕಲೇಶಪುರದ ವಡೂರಿನಲ್ಲಿ ಕಾಡಾನೆ ತುಳಿತದಿಂದ ಸಾವನಪ್ಪಿದ ಮಹಿಳೆಯ ಕುಟುಂಬಸ್ಥರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೋರಾಟ ಮಾಡುವ ಸಂದರ್ಭದಲ್ಲಿ ಶುಕ್ರವಾರ ಯೆಡೆಹಳ್ಳಿ ಮಂಜುನಾಥ್ ಹಾಗೂ ಬೆಂಬಲಿಗರನ್ನು ಬಂಧಿಸಿ ಜೈಲಿನಲ್ಲಿ ಇರಿಸಿರುವ ಆಡಳಿತ ವರ್ಗದ ನಡೆ ನಿಜಕ್ಕೂ ಆಶ್ಚರ್ಯ ಮೂಡಿಸಿದೆ.

ಹೋರಾಟಗಾರರ ವಿರುದ್ಧ ಕೇಸುಗಳನ್ನು ದಾಖಲಿಸಿ,ಬಂದನ ಮಾಡಿ ಜೈಲಿನಲ್ಲಿಟ್ಟು ಯಾವ ಸಂದೇಶ ನೀಡಲು ಹೊರಟಿದ್ದಾರೆ ಈ ಅಧಿಕಾರಿಗಳು??

ಕಾಡಾನೆ ಮಾನವ ಸಂಘರ್ಷದಿಂದ 79 ಜನ ಪ್ರಾಣ ಕಳೆದುಕೊಂಡ ಮೇಲೂ ನಮ್ಮ ಸಕಲೇಶಪುರದ ಜನ ನಿದ್ದೆಯಿಂದ ಮೇಲೆದ್ದಿಲ್ಲ. ಎಲ್ಲರಿಗೂ ಕಾಡಾನೆ ಸಮಸ್ಯೆಯಿಂದ ಪರಿಹಾರ ಬೇಕು ಆದರೆ ಹೋರಾಟ ಮಾಡಲು ಯಾರು ಸಿದ್ದರಿಲ್ಲ. ಹೋರಾಟ ಮಾಡಿದ ಹೋರಾಟಗಾರರನ್ನು ಬಂಧಿಸಿ ಜೈಲಿನಲ್ಲಿಟ್ಟಿದ್ದರೂ ಯಾರು ಪ್ರಶ್ನಿಸುತ್ತಿಲ್ಲ. ಯಾರೋ ಆನೆ ತುಳಿದು ಸತ್ತರೆ ನಮಗೇನು, ನಮ್ಮ ಕುಟುಂಬಸ್ತರಲ್ಲವಲ್ಲ ಎಂಬ ನಿರ್ಲಕ್ಷತನದಿಂದ ಇಂದಿಗೂ ಕಾಡಾನೆ ಮಾನವ ಸಂಘರ್ಷದ ಗಂಭೀರತೆಯನ್ನು ಸರ್ಕಾರಗಳಿಗೆ ಮನದಟ್ಟಾಗುವಂತೆ ಗಮನ ಸೆಳೆದು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಇಲ್ಲಿನ ನೂರಾರು ಸಂಘಟನೆಗಳು ತಮ್ಮ ಸಹನೆ, ತಾಳ್ಮೆ ಬಿಟ್ಟು ಸಕಲೇಶಪುರದಿಂದ ಬೆಂಗಳೂರಿನ ವಿಧಾನಸೌದದ ವರೆಗೆ ಪಾದಯಾತ್ರೆ ಮಾಡುವ ಮೂಲಕ ಸಂವಿದಾನಾತ್ಮಕವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕಾಗಿದೆ.

ಶೀಘ್ರವಾಗಿ ತಾಲೂಕಿನ ಹಿರಿಯ ಹೋರಾಟಗಾರರು ಇದರ ಬಗ್ಗೆ ಗಂಭೀರವಾಗಿ ಸಭೆ ನಡೆಸಿ ಒಂದು ತೀರ್ಮಾನ ಕೈಗೊಳ್ಳುವುದು ಸೂಕ್ತವಾಗಿದ್ದು ನನ್ನಂತ ಅನೇಕ ಯುವಕರು ಹಿರಿಯ ಹೋರಾಟಗಾರರ ಜೊತೆ ಕೈಜೋಡಿಸಲು ಸಿದ್ದರಾಗಿದ್ದೇವೆ. :- ಯಶ್ವಂತ್ ಬಾಳ್ಳುಪೇಟೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *