ಕಾವೇರಿ ನೀರಿನ ವಿಷಯದಲ್ಲಿ ಪ್ರಾಥಮಿಕ ಹಂತದಲ್ಲಿಯೇ ಸರ್ಕಾರ ಎಡವಿದ್ದು, ಈಗ ಸರ್ವಪಕ್ಷ ಸಭೆ ಕರೆದು ನಾಟಕವಾಡುತ್ತಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಇಂಡಿಯಾ ಒಕ್ಕೂಟದ ನಂಟಿಗಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ, ಸುಪ್ರೀಂ ಕೋರ್ಟ್ ತೀರ್ಮಾನಕ್ಕೂ ಮುನ್ನವೇ ತಮಿಳುನಾಡಿಗೆ ಸಾಕಷ್ಟು ನೀರು ಹರಿಸಿದೆ’ ಎಂದರು.

ರಾಜ್ಯಕ್ಕೆ ಕಾವೇರಿ ನೀರಿನ ಪಾಲು ಕಡಿಮೆಯಾಗಲು ಮಣ್ಣಿನ ಮಕ್ಕಳೇ ಕಾರಣ’ ಎಂಬ ವೀರಪ್ಪ ಮೊಯಿಲಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಎರಡು ವರ್ಷ ಮುಖ್ಯಮಂತ್ರಿಯಾಗಿದ್ದ ಮೊಯಿಲಿ ಅವರ ಕೊಡುಗೆ ಏನು? ಸರ್ಕಾರಿ ನೌಕರರಿಗೆ ಸಂಬಳ ಕೊಡಲಿಕ್ಕೆ ಹಣ ಇರಲಿಲ್ಲ. ಆಗ ಪಶ್ಚಿಮ ಬಂಗಾಳದ ಪಿಯರ್‌ಲೆಸ್‌ ಸಂಸ್ಥೆಗೆ ರಾಜ್ಯವನ್ನು ಒತ್ತೆ ಇಟ್ಟು ಸಾಲ ತಂದವರು ಅವರು. ಅವರಿಂದ ಮಣ್ಣಿನ ಮಕ್ಕಳ ಬಗ್ಗೆ ಟೀಕೆ ಕೇಳುವ ಅಗತ್ಯವಿಲ್ಲ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾಗಲು ಕಾಂಗ್ರೆಸ್ ಸರ್ಕಾರವೇ ನೇರ ಕಾರಣ’ ಎಂದರು.ಶಾಸಕ ಎಚ್‌.ಡಿ. ರೇವಣ್ಣ ಮಾತನಾಡಿ, ‘ಈಗಾಗಲೇ ಕೇಂದ್ರ ಸರ್ಕಾರಕ್ಕೆ ಒಂದು ಕೀ ಕೊಟ್ಟಾಗಿದೆ. ತಮಿಳುನಾಡಿಗೆ ಒಂದು ಕೀ ಕೊಟ್ಟು ಬಿಡಿ. ಅವರು ಯಾವಾಗ ಬೇಕೋ ಆಗ ಕೆಆರ್‌ಎಸ್ ಜಲಾಶಯದ ಗೇಟ್ ತೆರೆದು ನೀರು ತೆಗೆದುಕೊಂಡು ಹೋಗಲಿ’ ಎಂದು ಲೇವಡಿ ಮಾಡಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *