ಕೃಷಿಕರು ತಮ್ಮ ಹೊಲ, ತೋಟಗಳ ರಕ್ಷಣೆಗೆ ಬೇಲಿಗಳನ್ನು ಹಾಕುವುದು ಸಹಜ, ಹಿಂದೆಲ್ಲಾ ಬೇಲಿಗಳು ಜೈವಿಕತೆಯನ್ನು ಹೊಂದಿ ಜೀವಂತವಾಗಿರುತ್ತಿದ್ದವು, ಬೇಲಿಯನ್ನು ಶ್ರಮಿಸಿ ಹಲವು ವೈವಿಧ್ಯಮಯ ಚಿಟ್ಟೆಗಳು, ಸಣ್ಣ ಸಣ್ಣ ಹಕ್ಕಿಗಳ ಗೂಡುಗಳು, ಹಾವೇ ಮುಂತಾದ ಸರಿಸೃಪಗಳು, ಕಪ್ಪರಶುಂಟಿಗಳು, ಅಡಕೆ ಹುಳಗಳು, ಭೂಮಿಯ ಮಿತ್ರ ಎರೆಹುಳಗಳು, ಗೆದ್ದಲು, ಇರುವೆ ಮುಂತಾಗಿ ಹಲವಾರು ಜೀವಿಗಳ ಲೋಕವೇ ಅಲ್ಲಿರುತ್ತಿತ್ತು..

ಈ ಬೇಲಿಯ ಸೊಪ್ಪು, ತರಗುಗಳು ಫಲವತ್ತಾದ ಮಣ್ಣನ್ನು ತಯಾರು ಮಾಡುತ್ತಿದ್ದರೆ, ಜೀವಿಗಳು ತಮ್ಮ ತಮ್ಮ ಕೆಲಸಗಳಿಂದ ಕೆಟ್ಟ ಕ್ರಿಮಿಗಳನ್ನು ನಿರ್ನಾಮ ಮಾಡುವುದು, ಕೀಟಗಳನ್ನು ತಿನ್ನುವುದು, ಫಲವತ್ತಾದ ಮಣ್ಣಿಗೆ ಬಹುತೇಕ ಸಹಾಯ ಮಾಡುವುದೇ ಈ ಜೀವಿಗಳ ಕೆಲಸ..

ಈಗ ಕಾಡು ಪ್ರಾಣಿಗಳಿಂದ ರಕ್ಷಣೆ ಪಡೆಯಲು ಸಾಕಷ್ಟು ಹೆಣಗಿದ ನಂತರ ಹೊಸ ದಾರಿಯೊಂದನ್ನು ಕಂಡುಕೊಂಡಿದ್ದಾರೆ.. ಅದುವೇ ಸೋಲಾರ್ ಬೇಲಿ, ಸುಮಾರಿಗೆ ಕಾಡು ಪ್ರಾಣಿಗಳಿಂದ ರಕ್ಷಣೆ ನೀಡುತ್ತಿದೆ. ಕಳ್ಳರಿಂದಲೂ ಫಸಲನ್ನು ರಕ್ಷಿಸಲು ಈ ಮಾರ್ಗ ಸೂಕ್ತವೇ ಎಂದು ರೈತರು ನಂಬಿದ್ದಾರೆ. ಆಳೆತ್ತರಕ್ಕೆ ಇರುವ ಆರೇಳು ಎಳೆ ತಂತಿಗಳ ನೀಳ, ನೇರ ಬೇಲಿ ನೋಡಲೂ ಚೆಂದವೇ..! ಆದರೆ ಬೇಲಿ ನಿರ್ವಹಣೆ ನೆಪದಲ್ಲಿ ಬೇಲಿಯ ಒಳಗೆ ಮತ್ತು ಹೊರಗೆ ಸುಮಾರು ನಾಲ್ಕೈದು ಅಡಿಯ ಅಗಲಕ್ಕೆ ಕಳೆ ಬೆಳೆಯದಿರಲು ತಿಂಗಳಿಗೊಮ್ಮೆಯಾದರೂ ಕಳೆನಾಶಕ ಸಿಂಪಡಿಸಲಾಗುತ್ತದೆ, ಇದರಿಂದ ಕಳೆಯಷ್ಟೇ ಅಲ್ಲ, ಬೆಳೆಯತ್ತಲೂ ಕಳೆನಾಶಕದ ಮೇಲಿನ ನೀರು ಹರಿದು ಭೂಮಿಯನ್ನು ಬರಡಾಗಿಸುತ್ತದೆ, ಇದೇ ನೀರು ಜಲಮೂಲಗಳಿಗೆ ಮುಟ್ಟಿ ಅಲ್ಲಿಯೂ ಜೀವಿಗಳನ್ನು ನಾಶಮಾಡುತ್ತಿದೆ..!

ರೈತನ ಭೂಮಿಯ ಜೀವಂತ ಬೇಲಿಯಲ್ಲಿದ್ದ ಅಸಂಖ್ಯಾತ ಉಪಕಾರಿ ಜೀವಿಗಳು ನಾಶವಾಗಿವೆ, ಬೇಲಿಯ ಹೊರಗೆ ಮೇವನ್ನರಸುವ ಜಾನುವಾರುಗಳಲ್ಲಿ ವಿಷ ಸೇರಿ ನಿಧಾನವಾದ ಪರಿಣಾಮ ಕಾಣುತ್ತಿದೆ. ಬೇಲಿಯಲ್ಲಿ ಬೆಳೆಯಲಾಗುತ್ತಿದ್ದ ಮರಗಳು ನಾಶವಾಗಿ ಬಯಲಾಗುತ್ತಿದೆ.

ಬೇಲಿ ಜೀವಂತವಾಗಿದ್ದರೆ ಇಂತಹ ಅನೇಕ ಆಪತ್ತುಗಳಿಂದ ರಕ್ಷಣೆಯಿದೆ, ಆದರೆ ಕಾಡು ಪ್ರಾಣಿಗಳು ನೀಡುವ ತೊಂದರೆಯ ಪರಿಣಾಮ..?!

ಬೆಳೆಯನ್ನೂ, ರೈತನನ್ನೂ, ಉಪಕಾರಿ ಜೀವಿಗಳನ್ನೂ, ಜಮೀನನ್ನೂ, ನೀರಿನ ಮೂಲವನ್ನೂ, ಭೂಮಿಯನ್ನೇ ಅವನತಿಯತ್ತ ಕೊಂಡೊಯ್ಯುತ್ತಿರುವ ಅಪರಾಧ ಯಾರಮೇಲೆ.., ಹೊಣೆ ಯಾರು..?

ಯೋಚಿಸಿದಾಗ ಅನೇಕ ಇಲಾಖೆಗಳು, ಸರಕಾರ, ಜನಸಾಮಾನ್ಯ, ಮತ್ತೆ ರೈತರು..! ನಮ್ಮ ನಿರ್ಲಕ್ಷ್ಯ, ನಮ್ಮ ಬೇಜವಾಬ್ದಾರಿತನ, ನಮ್ಮ ದುರಾಸೆ, ನಮ್ಮ ಭ್ರಷ್ಟಾಚಾರಗಳೇ ಕಾರಣವಲ್ಲವೇ..?

ಪ್ರಾಣಿಗಳಿಂದ ನಮಗೆ ನಷ್ಟ ಸಂಭವಿಸದಿದ್ದರೆ ಇಷ್ಟೆಲ್ಲಾ ವ್ಯವಸ್ಥೆಯ ನೆಪದಲ್ಲಿ ಅವ್ಯವಸ್ಥೆ ಮಾಡಲು ನಮಗಿನ್ನೇನೂ ಕಾರಣವಿರದು ಅಲ್ಲವೇ.. ನಮ್ಮನ್ನು ನಾವೇ ಅವನತಿಗೆ ದೂಡಿಕೊಳ್ಳುವುದು ತಲೆ ತಗ್ಗಿಸುವ ಕೆಲಸವೇ ತಾನೆ…?! ಇನ್ನಾದರೂ ಯೋಚಿಸೋಣವೇ..?

ಸತ್ಯ ಹರಿಹಳ್ಳಿ :- 9141315194

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *