ಅರಕಲಗೂಡು: ಪಟ್ಟಣದಲ್ಲಿ ಕಳೆದ 27 ವರ್ಷಗಳಿಂದ ದಸರಾ ಉತ್ಸವ ಅದ್ಧೂರಿಯಾಗಿ ನಡೆದು ಬರುತ್ತಿದ್ದು, ಇದನ್ನು ಇನ್ನಷ್ಟು ವೈಭವಯುತವಾಗಿಸುವ ಕಾರ್ಯಕ್ಕೆ ತಾಲ್ಲೂಕಿನ ಜನತೆ ಸಹಕಾರ ನೀಡಬೇಕು ಎಂದು ಶಾಸಕ ಎ. ಮಂಜು ಮನವಿ ಮಾಡಿದರು.

ಗ್ರಾಮದೇವತೆ ದೊಡ್ಡಮ್ಮ ದೇವಾಲಯದ ಆವರಣದಲ್ಲಿ ಭಾನುವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ದಸರಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.ಬಹಳ ಹಿಂದಿನಿಂದಲೂ ಪಟ್ಟಣದಲ್ಲಿ ದಸರಾ ಆಚರಣೆ ನಡೆದು ಬರುತ್ತಿತ್ತು, ಆದರೆ ಮಧ್ಯದಲ್ಲಿ ಈ ಉತ್ಸವದ ಆಚರಣೆ ನಿಂತುಹೋಗಿತ್ತು.

1996 ರಲ್ಲಿ ಎಲ್ಲ ಮಠಾಧೀಶರು, ವಿವಿಧ ಕೋಮುಗಳ ಮುಖಂಡರ ಪ್ರಯತ್ನದ ಫಲವಾಗಿ ಇದನ್ನು ಪುನರಾರಂಭಿಸಲಾಯಿತು. ಅಂದಿನಿಂದ ಪ್ರತಿ ವರ್ಷ ವೈಭವದಿಂದ ನಡೆದು ಬರುತ್ತಿದ್ದು ರಾಜ್ಯದಾದ್ಯಂತ ಗಮನ ಸೆಳೆದಿದೆ ಎಂದರು.ಬರಗಾಲದ ಹಿನ್ನೆಲೆಯಲ್ಲಿ ಈ ಬಾರಿ ಸರಳ ದಸರಾ ಆಚರಣೆ ಮಾಡಲು ನಿರ್ಧರಿಸಲಾಗಿದೆ. ಆದರೆ ಸಂಪ್ರದಾಯಕ್ಕೆ ಚ್ಯುತಿ ಬರದಂತೆ 9 ದಿನಗಳೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ವಿಜಯ ದಶಮಿಯಂದು ಎಲ್ಲ ದೇವತೆಗಳ ಉತ್ಸವಗಳು ಮೆರವಣಿಗೆಯಲ್ಲಿ ಬನ್ನಿಮಂಟಪಕ್ಕೆ ತೆರಳಲಿದೆ. ಈ ವೇಳೆ ಹೊರಗಿನಿಂದ ಬರುವ ಜನರಿಗೆ ವಿವಿಧ ಸಂಘ ಸಂಸ್ಥೆಗಳು ಹಿಂದಿನಂತೆ ಅನ್ನದಾಸೋಹ ಕಾರ್ಯಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಮುಂದಿನ ದಿನಗಳಲ್ಲಿ ದಸರಾ ಕಾರ್ಯಕ್ರಮವನ್ನು ಇನ್ನಷ್ಟು ಆಕರ್ಷರ್ಣೀಯ ಹಾಗೂ ವೈಭವಯುತವಾಗಿಸಲು ಕ್ರಮ ವಹಿಸುವುದಾಗಿ ಹೇಳಿದರು.ಅರೇ ಮಾದನಹಳ್ಳಿ ವಿಶ್ವಬ್ರಾಹ್ಮಣ ಸಂಸ್ಥಾನ ಪೀಠದ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ಸುಕ್ಷೇತ್ರ ಚಿಲುಮೆ ಮಠದ ಜಯದೇವ ಸ್ವಾಮೀಜಿ ಆಶೀರ್ವಚನ ನೀಡಿದರು.

ತಹಶೀಲ್ದಾರ್, ಬಸವರೆಡ್ಡಪ್ಪ ರೋಣದ್, ದೊಡ್ಡಮ್ಮ ದೇವಾಲಯ ಸಮಿತಿ ಅಧ್ಯಕ್ಷ ಎ.ಎಸ್.ರಾಮಸ್ವಾಮಿ ಮಾತನಾಡಿದರು.

ದೊಡ್ಡಮಠದ ಮಠಾಧೀಶ ಮಲ್ಲಿಕಾರ್ಜುನ ಸ್ವಾಮೀಜಿ, ಪ.ಪಂ ಸದಸ್ಯರಾದ ಹೂವಣ್ಣ, ಕೃಷ್ಣಯ್ಯ, ಪ್ರದೀಪ್ ಕುಮಾರ್, ಅನಿಕೇತನ್, ನಿಖಿಲ್ ಕುಮಾರ್, ಮುಖಂಡರಾದ ಎಚ್.ಸಿ.ವೆಂಕಟೇಶ್, ಮಂಜುಶೆಟ್ಟಿಗೌಡ, ದಿವಾಕರ್ ಗೌಡ, ನರಸೇಗೌಡ, ಶಶಿಕುಮಾರ್, ರವಿಕುಮಾರ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ್ ಕುಮಾರ್ ಇದ್ದರು.ಕಾರ್ಯಕ್ರಮಕ್ಕೂ ಮುನ್ನ ಗ್ರಾಮ ದೇವತೆ ದೊಡ್ಡಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಉತ್ತಮ, ಮಳೆ, ಬೆಳೆ ಹಾಗೂ ವಿಶ್ವ ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *