
ಹಾಸನ: ಮಗನ ಸಾವಿನ ಕೊರಗಿನಲ್ಲೇ ದಂಪತಿ ನಾಲೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮೂಲದ ರಂಗಸ್ವಾಮಿ (49), ಕನಕ (45) ಮೃತ ದಂಪತಿ. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರ ಗ್ರಾಮದ ಬಳಿ ಕೃಷ್ಣರಾಜ ನಾಲೆಯಲ್ಲಿ ಈ ಘಟನೆ ನಡೆದಿದೆ.
ರಂಗ ಸ್ವಾಮಿ ಹಾಗೂ ಕನಕ ದಂಪತಿಯ ಮಗ ಕೆಲವು ವರ್ಷದ ಹಿಂದೆ ಮೃತಪಟ್ಟಿದ್ದ. ಅದಾದ ಬಳಿಕ ಅವನ ನೆನಪಿನಲ್ಲಿಯೇ ದಂಪತಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು.ಈ ನೋವನ್ನು ತಾಳಲಾರದ ದಂಪತಿ ಹಾಸನದ ರಾಮಪುರ ಬಳಿ ಬೈಕ್‌ನಲ್ಲಿ ಬಂದಿದ್ದರು. ಅದಾದ ಬಳಿಕ ಮೂರು ದಿನಗಳಿಂದ ಅವರು ನಾಪತ್ತೆಯಾಗಿದ್ದರು. ಜೊತೆಗೆ ಮೂರು ದಿನಗಳಿಂದ ಇವರ ಬೈಕ್ ನಾಲೆಯ ಬಳಿ ನಿಂತಿತ್ತು. ಇದನ್ನು ಗಮನಿಸಿದ ಜನರು ಪೊಲೀಸರಿಗೆ ತಿಳಿಸಿದ್ದಾರೆ.
ಇದೀಗ ಅವರ ಶವ ನಾಲೆಯಲ್ಲಿ ಪತ್ತೆಯಾಗಿದೆ.ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಲಾಗಿದೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
