ಹಾಸನಾಂಬ ದೇವಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಕಾನೂನು, ಸುವ್ಯವಸ್ಥೆ ಪಾಲಿಸಲು ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ದಕ್ಷಿಣ ವಲಯ ಐಜಿಪಿ ಎಂ.ಬಿ. ಬೋರಲಿಂಗಯ್ಯ ತಿಳಿಸಿದರು.
ನಗರದ ಹಾಸನಾಂಬ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ದೇವಸ್ಥಾನದ ಸುತ್ತ ಕೈಗೊಂಡಿರುವ ಭದ್ರತಾ ಕ್ರಮ ಹಾಗೂ ಸುಲಲಿತ ದರ್ಶನದ ವ್ಯವಸ್ಥೆಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ನವೆಂಬರ್ 2 ರಿಂದ 15 ರವರೆಗೆ ನಡೆಯುವ ಹಾಸನಂಬ ದರ್ಶನೋತ್ಸವಕ್ಕೆ ಪೊಲೀಸ್ ಇಲಾಖೆಯಿಂದ ಅಗತ್ಯ ಭದ್ರತೆ ಕಲ್ಪಿಸಲಾಗುವುದು.
ವರ್ಷದಲ್ಲಿ 12 ದಿನಗಳ ಕಾಲ ದರ್ಶನ ಭಾಗ್ಯ ಕಲ್ಪಿಸುವ ಹಾಸನಾಂಬ ದರ್ಶನೋತ್ಸವಕ್ಕೆ ರಾಜ್ಯ, ನೆರೆ ರಾಜ್ಯಗಳಿಂದಲೂ ಲಕ್ಷಾಂತರ ಮಂದಿ ಭಕ್ತರು ಬರಲಿದ್ದಾರೆ ಎಂದರು.ಕಳೆದ ಬಾರಿ ರಾತ್ರಿ 11 ಗಂಟೆಯವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಈ ಬಾರಿ ಜಿಲ್ಲಾಡಳಿತದ ಮನವಿಯಂತೆ ದಿನದ 24 ಗಂಟೆ ದರ್ಶನದ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ದೂರದ ಊರುಗಳಿಂದ ಬರುವ ಭಕ್ತರಿಗೆ ಯಾವುದೇ ರೀತಿಯ ತೊಡಕಾಗದಂತೆ ಸುಲಲಿತವಾಗಿ ದರ್ಶನಕ್ಕೆ ಅವಕಾಶ ಕಲ್ಪಿಸುವುದೇ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಮುಖ್ಯ ಉದ್ದೇಶ ಎಂದು ಹೇಳಿದರು.
ಈಗಾಗಲೇ ಜಿಲ್ಲಾಡಳಿತದಿಂದ ಹಾಗೂ ಸ್ಥಳೀಯ ಪೊಲೀಸ್ ಇಲಾಖೆಯಿಂದ ಟ್ರಾಫಿಕ್ ಹಾಗೂ ರಾಜ್ಯ ಮೂಲೆ ಮೂಲೆಗಳಿಂದ ಬರುವ ಖಾಸಗಿ ವಾಹನ ಸಾರಿಗೆ ಬಸ್‌ಗಳ ನಿಲುಗಡೆ ಸ್ಥಳಗಳು, ಪಾರ್ಕಿಂಗ್ ಪ್ರದೇಶದ ಬಗ್ಗೆ ಈಗಾಗಲೇ ಸ್ಥಳ ನಿಗದಿ ಮಾಡಲಾಗಿದೆ. ಇನ್ನೂ ಹಲವು ಸಲಹೆ, ಸೂಚನೆ ನೀಡಲು ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದರು.
ಈ ಬಾರಿಯ ದರ್ಶನೋತ್ಸವಕ್ಕೆ ಅಗತ್ಯ ಬಂದೋಬಸ್ತ್ ಕಲ್ಪಿಸಲು ಗೃಹರಕ್ಷಕರೂ ಸೇರಿದಂತೆ ಸುಮಾರು 1200 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸುವ ಕುರಿತು ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ದಕ್ಷಿಣ ವಲಯ ವ್ಯಾಪ್ತಿಗೆ ಬರುವ ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸರನ್ನು ನಿಯೋಜಿಸುವ ಕುರಿತು ಚಿಂತನೆ ನಡೆಸಲಾಗಿದ್ದು, ಗೃಹರಕ್ಷಕರೂ ಸೇರಿದಂತೆ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡುವ ಮೂಲಕ ಹೆಚ್ಚಿನ ನಿಗಾ ವಹಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಡಿವೈಎಸ್ಪಿ ಮುರುಳಿಧರ್, ಉಪ ವಿಭಾಗಾಧಿಕಾರಿ ಮಾರುತಿ, ಅಧಿಕಾರಿಗಳು ಹಾಜರಿದ್ದರು.