
ಹಾಸನ: ಮಧ್ಯವರ್ತಿಗಳಿಂದ ಜೋಳ ಖರೀದಿ ಮಾಡುವುದಿಲ್ಲ. ರೈತರಿಂದ ನೇರ ಖರೀದಿ ಮಾಡಲಾಗುವುದು. ಕೆಎಂಎಫ್ ನ ಜೋಳ ಖರೀದಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಹೇಳಿಕೆ ನೀಡಿದರು.
ಅದಿ ದೇವತೆ ಹಾಸನಾಂಬೆ ದೇವಿ ದರ್ಶನ ಮಾಡಿದ ನಂತರ ಮಾಧ್ಯಮದೊಂದಿಗೆ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮ ಹಿಂಗಾರು ಮಳೆಯಾಗಲಿ. ರೈತರಿಗೆ ಅನುಕೂಲವಾಗಿ ಜೀವನ ಸಮೃದ್ಧವಾಗಲಿ ಎಂದು ಹಾಸನಾಂಬೆಯಲ್ಲಿ ವಿಶೇಷ ಪ್ರಾರ್ಥನೆ ಮಾಡಿದ್ದೇನೆ ಎಂದರು.
ಕೆಎಂಎಫ್ ನ ಜೋಳ ಖರೀದಿಯಲ್ಲಿ ಯಾವುದೇ ಅಕ್ರಮ ನಡೆದಿರುವುದಿಲ್ಲ. ಖರೀದಿ ಪ್ರಾರಂಭವೇ ಆಗದೆ ಅಕ್ರಮ ಹೇಗೆ ನಡೆಯುತ್ತದೆ? ಯಾವುದೇ ಮಧ್ಯವರ್ತಿಗಳಿಂದ ಜೊಳ ಖರೀದಿ ಮಾಡುವುದಿಲ್ಲ. ೨೨೫೦ ರೂಗೆ ರೈತರಿಂದ ನೇರವಾಗಿ ಜೋಳ ಖರೀದಿ ಮಾಡುತ್ತೇವೆ ಎಂದು ಹೇಳಿದರು.
ಪಶು ಸಂಗೋಪನಾ ಇಲಾಖೆಯಲ್ಲಿ ವೈದ್ಯರ ಕೊರತೆ ಇದ್ದು, ಈಗಾಗಲೇ ೨೫೦ ನಿರೀಕ್ಷಕರನ್ನು ನೇಮಕ ಮಾಡಲಾಗುತ್ತಿದೆ. ವೈದ್ಯರ ಹುದ್ದೆ ನೇಮಕಾತಿಗೆ ಕೆಪಿಎಸ್‌ಸಿಗೆ ನೀಡಲಾಗಿದೆ. ಆದಷ್ಟು ಬೇಗ ನೇಮಾಕಾತಿ ಮಾಡುತ್ತೇವೆ.
ಹಾಸನ ಜಿಲ್ಲೆಯಲ್ಲಿ ಚರ್ಮಗಂಟು ರೋಗ ಪತ್ತೆಯಾಗಿಲ್ಲ. ಆ ರೀತಿ ಖಾಯಿಲೆ ಇದ್ರೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಪಶು ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುವುದಿಲ್ಲ. ಜಾನುವಾರುಗಳಿಗೆ ಇನ್ಶುರೆನ್ಸ್ ವ್ಯವಸ್ಥೆ ಕೂಡ ಜಾರಿ ಮಾಡಿದ್ದೇವೆ. ಖುದ್ದು ಮುಖ್ಯಮಂತ್ರಿಗಳೇ ನಮ್ಮ ಇಲಾಖೆ ಬಗ್ಗೆ ಮುತುವರ್ಜಿ ವಹಿಸಿದ್ದಾರೆ. ಈ ಹಿಂದೆ ಪಶುಸಂಗೋಪನೆ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ ಎಂದರು.
ಮುಖ್ಯಮಂತ್ರಿ ಹುದ್ದೆ ಬದಲಾವಣೆ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಈಗ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಅದು ಅಪ್ರಸ್ತುತವಾಗಿದ್ದು, ಮುಂದೆ ಖಾಲಿ ಆದಾಗ ನೋಡೋಣ ಎಂದು ಉತ್ತರಿಸಿದರು.
