
ನವದೆಹಲಿ(ಚನ್ನರಾಯಪಟ್ಟಣ):ಜಗತ್ತಿನಲ್ಲಿ ಬದಲಾಯಿಸಲಾಗದ್ದು ಮಾತೃ ಹಾಗೂ ಮಾತೃಭಾಷೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ಹೇಳಿದರು.
ಬುಧವಾರ ದೆಹಲಿಯ ಶ್ರೀ ಸತ್ಯಸಾಯಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಆಯೋಜಿಸಿದ ಪ್ರಥಮ ರಾಷ್ಟ್ರೀಯ ಹೊರನಾಡು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು
ಮಕ್ಕಳಿಗೆ ಮಾತೃ ಭಾಷೆಯನ್ನು ಕಲಿಸುವ ಪ್ರಜ್ಞಾಪೂರ್ವಕ ಜವಾಬ್ದಾರಿ ಪೋಷಕರ ಮೇಲಿದ್ದು, ಚಿಕ್ಕಂದಿನಿಂದಲೇ ಅಭಿವ್ಯಕ್ತಿತ್ವ ವಾತಾವರಣದಲ್ಲಿ ಮಕ್ಕಳನ್ನು ಬೆಳೆಸಬೇಕು ಎಂದರು.
ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರಯುತ ಶಿಕ್ಷಣ ಕಲಿಸುವುದರ ಜತೆಗೆ ಪ್ರಬುದ್ಧ ವ್ಯಕ್ತಿತ್ವವನ್ನು ರೂಪಿಸುವ ಜವಾಬ್ದಾರಿ ಪಾಲಕರ ಮೇಲಿದೆ. ಅವರ ಮನಸ್ಸನ್ನು ಸಂಕುಚಿತಗೊಳಿಸದೆ, ಆತ್ಮವಿಶ್ವಾಸ ಮೂಡಿಸಿ ವಿಶ್ವ ಮಾನವರನ್ನಾಗಿಸಬೇಕು. ಸಾಧ್ಯವಾದಷ್ಟು ಮಕ್ಕಳಿಗೆ ಸಾಹಿತ್ಯ, ಸಂಗೀತ, ನೃತ್ಯ ಕಲಿಸಿದರೆ ಮಕ್ಕಳ ಬದುಕು ಮಂಗಳಕರವಾಗುತ್ತದೆ.
ಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಆಶ್ರಯದಲ್ಲಿ ಆರಂಭಗೊಂಡ ಮಕ್ಕಳ ಸಾಹಿತ್ಯ ಪರಿಷತ್ತಿನ ಪರಿಕಲ್ಪನೆ ಮುಂದುವರಿಸಲಾಗುತ್ತಿದೆ. ಕನ್ನಡದ ಹಿರಿಮೆಯನ್ನು ರಾಷ್ಟ್ರ ರಾಜಧಾನಿ ದೆಹಲಿವರೆಗೆ ತಂದ ಕೀರ್ತಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚ.ನ. ಅಶೋಕ್ ಅವರಿಗೆ ಸಲ್ಲುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮ್ಮೇಳನದ ಸರ್ವಾಧ್ಯಕ್ಷ ಸುದೀತಿ ಅಂಬಳೆ ನಿರ್ಣಯ ಮಂಡಿಸಿದರು. ಸಹ ಅಧ್ಯಕ್ಷೆ ಕು ರಕ್ಷಿತಾ ಸಮ್ಮೇಳನ ಕುರಿತು ಮಾತನಾಡಿದರು. ಮಕ್ಕಳ ಸಾಹಿತ್ಯ ಪರಿಷತ್ತಿನ ದೆಹಲಿ ಘಟಕದ ಅಧ್ಯಕ್ಷರಾದ ಅರವಿಂದ ಬಿಜೈ ಅನಿಸಿಕೆ ಹಂಚಿಕೊಂಡರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ಡಾ.ಎಲ್ ಹನುಮಂತಯ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಉಪಾಧ್ಯಕ್ಷರಾದ ಎಂ.ಎಸ್.ಶಶಿಕುಮಾರ್, ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಂ.ಎ.ಗೋಪಾಲಸ್ವಾಮಿ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರಾದ ಸಿ.ಎನ್.ಅಶೋಕ್, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಗಳಾದ ಅರುಣ್, ಸಾಹಿತಿ ಕೃಷ್ಣಮೂರ್ತಿ ಬಿಳಿಕೆರೆ, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಂ.ನಾಗರಾಜ್, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ದೆಹಲಿ ಘಟಕದ ಅಧ್ಯಕ್ಷರಾದ ಅರವಿಂದ ಬಿಜೈ, ಕಾರ್ಯದರ್ಶಿ ಅರುಣ್,ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ರತ್ನ, ದೆಹಲಿಯ ಕಾರ್ಯಕ್ರಮದ ಆಯೋಜಕರಾದ ಮೂರ್ತಿ, ನಾಡಪ್ರಭು ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಆನಂದ್ ಕಾಳೆನಹಳ್ಳಿ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಸಿದ್ದೇಶ್, ಮಹದೇವ್, ಜಯರಾಮ್, ಎ ಎಲ್ ನಾಗೇಶ್,ಜಗದೀಶ್, ಶ್ರೀಮತಿ ಲತಾ,ಸೂಫಿಯ ದೀಪ, ಸಿ ಎನ್ ಅರುಣ್ ಕುಮಾರ್,ಸಚಿನ್,ಸೇರಿದಂತೆ ಇತರರು ಹಾಜರಿದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಚೇತನ ಚಿಣ್ಣರ ಕಲಾರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ರಾಯಚೂರಿನ ಡಾ. ಶಿವರಾಜ್ ಛಲವಾದಿ, ಡಾ.ಸಂಜನಾ ಛಲವಾದಿ, ಸೊಲ್ಲಾಪುರದ ರೇವಣ್ಣಸಿದ್ದ ಪುಲಾರಿ, ನಾಗರದ ವಿಜಯ ಹೆಗಡೆ, ಮುಂಡರಗಿಯ ನಯನಾ, ಬೆಂಗಳೂರಿನ ಶ್ರೀಸಾನಿಧ್ಯ, ವಿಜಯಪುರದ ಸೃಷ್ಟಿ ದಾಸ ಹಾಗೂ ರಾಯಚೂರಿನ ಅರುಣ್ ಕುಮಾರ್ ರವರಿಗೆ ಪೂಜ್ಯ ಸ್ವಾಮೀಜಿರವರ ನೇತೃತ್ವದಲ್ಲಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮ್ಮೇಳನ ಅಧ್ಯಕ್ಷರ ನಿರ್ಣಯ ಮಂಡನೆ ಪ್ರತಿ ವರ್ಷವೂ ಹೊರನಾಡಿನಲ್ಲಿ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಬೇಕು, ಇಡೀ ಭಾರತದ ಎಲ್ಲಾ ರಾಜ್ಯಗಳಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತಿನ ಘಟಕಗಳು ಪ್ರಾರಂಭವಾಗಬೇಕು, ಪ್ರತಿ ವರ್ಷವೂ ಭಾರತ ಸರ್ಕಾರ ಸಾಹಿತ್ಯ ಅಕಾಡೆಮಿಯಿಂದ ಕೂಡ ಮಾಡುವ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯಲ್ಲಿ ಮಕ್ಕಳ ಸಾಹಿತ್ಯಕ್ಕಾಗಿ ವಿಶೇಷ ವಿಭಾಗ ಮಾಡಿ ಮಕ್ಕಳ ರಚಿಸಿದ ಪುಸ್ತಕಗಳಿಗೆ ಮಾನ್ಯತೆ ನೀಡಬೇಕು, ಕೇಂದ್ರ ಹಾಗೂ ರಾಜ್ಯ ಪುಸ್ತಕ ರಾಜಕಾರವು ಮಕ್ಕಳ ಕಥೆ ಅವನ ಕಾದಂಬರಿಗಳನ್ನು ವಿಶೇಷವಾಗಿ ಆಹ್ವಾನಿಸಿ ಮನ್ನಣೆ ನೀಡಬೇಕು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಂಡಿಸುವ ಬಜೆಟ್ ನಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತಿಗೆ ಶಾಶ್ವತ ಅನುದಾನ ನೀಡಬೇಕು. ಹೊರನಾಡಿನಲ್ಲಿರುವ ಭಾಷಾ ಅಲ್ಪಸಂಖ್ಯಾತರಿಗೆ ತಮ್ಮ ಮಾತೃಭಾಷೆಯಲ್ಲಿ ಕಲಿಯುವ ಅವಕಾಶ ನೀಡಬೇಕು. ಶಾಲೆಗಳಲ್ಲಿ ಬ್ಯಾಗ್ ಲೆಸ್ ಮಾಡಿರುವುದು ಸ್ವಾಗತಾರ್ಹ.
ಅಂದು ಸ್ಥಳೀಯ ಜಾನಪದ ಕಲೆ, ಕ್ರೀಡೆ ಮತ್ತು ಸಾಹಿತ್ಯವನ್ನು ಮಕ್ಕಳಿಗೆ ಪರಿಚಯಿಸುವಂತಹ ಕಾರ್ಯಕ್ರಮ ಶಾಲೆಗಳಲ್ಲಿ ಹಮ್ಮಿಕೊಳ್ಳುವಂತೆ ಸರ್ಕಾರ ಶಿಕ್ಷಣ ಇಲಾಖೆಗೆ ಆದೇಶ ಹೊರಡಿಸಬೇಕು, ಆಟ ಪಾಠದಿಂದ ವಂಚಿತರಾಗಿ ಭಿಕ್ಷಾಟನೆಯಲ್ಲಿ ತೊಡಗಿರುವ, ಬಾಲ ಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳನ್ನು ಪತ್ತೆಹಚ್ಚಿ, ಅವರನ್ನು ವಸತಿ ದಾಖಲು ಮಾಡಬೇಕು. ಕೇಂದ್ರ ಸರ್ಕಾರದ ಸಾರ್ವಜನಿಕ ಸೇವಾ ಹುದ್ದೆಗಳಿಗೆ ಮತ್ತು ಬ್ಯಾಂಕ್, ಇತರೆ ಹುದ್ದೆಗಳಿಗೆ ಪರೀಕ್ಷೆಗಳನ್ನು ಮಾಧ್ಯಮದಲ್ಲಿ ಬರೆಯುವಂತೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಸಮ್ಮೇಳನದ ಸಮ್ಮೇನಾಧ್ಯಕ್ಷೆ ಸುದೀತಿ ಹೇಳಿದರು.






