ಹಾಸನ :- ಜನರು ಸಂಕಷ್ಟದಲ್ಲಿರುವಾಗ ರಾಜ್ಯದ ಬರಗಾಲ ಮರೆತು ತೆಲಂಗಾಣ ರಾಜ್ಯದ ಚುನಾವಣೆಗೆ ಕಾಂಗ್ರೆಸ್ ಹೋಗಿದೆ. ತೆಂಗು ಮತ್ತು ಕೊಬ್ಬರಿ ಬೆಳೆ ನಿಗಧಿ ಮಾಡುವಲ್ಲಿ ಸರಕಾರ ವಿಫಲವಾಗಿದ್ದು, ಇದರ ವಿರುದ್ಧ ಡಿಸೆಂಬರ್ ೨ರ ಶನಿವಾರದಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೂ ಕಾಯಿ ಹೊಡೆದು ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿರುವುದಾಗಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದರು.
ನಗರದ ಸಂಸದರ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಬರಗಾಲದ ನಿರ್ವಹಣೆಗಾಗಿ ಸರ್ಕಾರ ೧೨ ಕೋಟಿ ರೂ ಅನುದಾನವನ್ನು ಜಿಲ್ಲಾಧಿಕಾರಿಗಳ ಖಾತೆಗೆ ಹಾಕಲಾಗಿದೆ. ಅದರಲ್ಲಿ ಪ್ರತಿ ತಾಲೂಕಿಗೆ ೫೦ ಲಕ್ಷ ಅನುದಾನವನ್ನ ಹಂಚಿಕೆ ಮಾಡಿದ್ದಾರೆ. ಇನ್ನ ಉಳಿದ ಎಂಟು ಕೋಟಿ ಅವರ ಖಾತೆಯಲ್ಲಿ ಇದೆ. ಆದರೆ ಹಂಚಿಕೆ ಮಾಡಿರುವ ಅನುದಾನವನ್ನ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ಎನ್.ಡಿಆರ್‌ಎಫ್ ಮತ್ತು ಎಸ್‌ಟಿಆರ್ ಎಫ್ ಗೈಡ್ ಲೈನ್ ಪ್ರಕಾರ ಅನುದಾನವನ್ನು ಬಳಕೆ ಮಾಡಿಕೊಳ್ಳಲು ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿವೆ. ಆದ್ದರಿಂದ ಸರ್ಕಾರ ಇದರ ಬಗ್ಗೆ ಗಮನಹರಿಸಬೇಕು. ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮತ್ತು ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದ್ದು ಹೇಮಾವತಿ ಜಲಾಶಯದಿಂದ ನಾಲೆಗಳ ಮೂಲಕ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಬರಗಾಲದಿಂದ ಜನರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ ಆದರೆ ಸರ್ಕಾರ ರಾಜ್ಯವನ್ನ ಮರೆತು ತೆಲಂಗಾಣದಲ್ಲಿ ಚುನಾವಣೆ ಮಾಡಲು ಹೋಗಿದ್ದಾರೆ ಇದರಿಂದ ರಾಜ್ಯವನ್ನ ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ತೆಂಗು ಬೆಳೆ ಸಂಪೂರ್ಣವಾಗಿ ನಾಶವಾಗುತ್ತಿದೆ ಅಲ್ಲದೆ ಕೊಬ್ಬರಿ ಮತ್ತು ತಂಗಿಗೆ ಬೆಂಬಲ ಬೆಲೆ ನಿಗದಿಪಡಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿರುವುದರಿಂದ ಡಿಸೆಂಬರ್ ಎರಡರಂದು ನಗರದ ಹೇಮಾವತಿ ಪ್ರತಿಮೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೂ ತೆಂಗಿನಕಾಯಿ ಮತ್ತು ಕೊಬ್ಬರಿಯನ್ನ ಒಡೆಯುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಚ್ಚರಿಸಿದರು
ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಕಾಲೇಜು ಕಾಲೇಜುಗಳಲ್ಲಿ ಸಿಬ್ಬಂದಿಗಳ ಕೊರತೆಯಿಂದಾಗಿ ಶಿಕ್ಷಕರು ಮತ್ತು ಉಪನ್ಯಾಸಕರೆ ಬಾತ್ ರೋಮ್ ತೊಳೆಯುವಂತಹ ಕೆಲಸ ಮಾಡುತ್ತಿದ್ದಾರೆ. ಆದರೆ ಶಿಕ್ಷಣ ಸಚಿವರು ಜಿಲ್ಲೆಗೆ ಆಗಮಿಸಿ, ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿ ಜಿಲ್ಲಾ ಪಂಚಾಯಿತಿಯಲ್ಲಿ ಉಪ್ಪಿಟ್ಟು ಕಾಫಿ ಕುಡಿದುಕೊಂಡು ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಶಿಕ್ಷಣ ಇಲಾಖೆ ಇಂಥ ಪರಿಸ್ಥಿತಿಗೆ ಬಂದಿರುವುದು ನಾಚಕಗೇಡಿನ ಸಂಗತಿ ಕೇವಲ ಗೂಟದ ಊಟದ ಕಾರು ಇಟ್ಟುಕೊಂಡು ತಿರುಗಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಇದನ್ನ ಬಗೆಹರಿಸುವಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇಂಥವರನ್ನ ಶಿಕ್ಷಣ ಸಚಿವರನ್ನಾಗಿ ಮಾಡಿರುವುದು ನಮ್ಮ ದುರ್ದೈವ ಎಂದು ಅಸಮಧಾನವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಮೂರು ಸಾವಿರ ಕೋಟಿ ರೈತರ ಬೆಳೆ ನಷ್ಟವಾಗಿದೆ. ಆದರೆ ಕೇವಲ ನಮಗೆ ೧೩೧ ಕೋಟಿ ರೂ ಪರಿಹಾರ ಹಣ ಬರುತ್ತದೆ. ರಾಜ್ಯ ಸರ್ಕಾರ ಕೇಂದ್ರದ ಹಣವನ್ನು ಕಾಯುತ್ತಿದ್ದಾರೆ ಇದರ ಬದಲಾಗಿ ರೈತರ ಹಿತ ಕಾಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ದೂರಿದರು.
ಡಿಸೆಂಬರ್ ೧ರ ಶುಕ್ರವಾರದಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಹೊಳೆನರಸೀಪುರದಲ್ಲಿ ಕಾರ್ಯಕರ್ತರು ಮತ್ತು ಮುಖಂಡರ ಸಭೆ ಕರೆದು ಮುಂದಿನ ಪಕ್ಷ ಸಂಘಟನೆ ಮತ್ತು ಚುನಾವಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈ ವೇಳೆ ಪಕ್ಷದ ಮುಖಂಡರು ಸಭೆಯಲ್ಲಿ ಭಾಗವಹಿಸುವುದಾಗಿ ಹೇಳಿದರು.
ಕಾಂಗ್ರೆಸ್ ಪಕ್ಷ ಹಿಂದಿನ ನೆಹರು ಮತ್ತು ಗಾಂಧಿಜಿಯವರ ಕಾಂಗ್ರೆಸ್ ಪಕ್ಷವಾಗಿ ಉಳಿದಿಲ್ಲ. ಈಗಿನ ನಾಯಕರಿಂದಲೇ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಭವಿಷ್ಯ ನುಡಿದರು.
ಮಧು ಬಂಗಾರಪ್ಪ ನಮ್ಮ ಪಕ್ಷದ ಬಗ್ಗೆ ಮಾತನಾಡುವ ಮೊದಲು ಅವರು ಎಲ್ಲಿಂದ ಬಂದಿದ್ದರು ಎಂಬುದನ್ನ ಕಲಿತುಕೊಳ್ಳಬೇಕು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಗಿರಾಕಿ ಈಗ ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಿದ್ದಾರೆ ಅವರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮಾತಿಗೆ ವಿರಾಮ ಹೇಳಿದರು.