ಹಾಸನ: ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ ಧೀರಜ್ ಸಾಹು ಅವರ ಬಳಿ ಸಿಕ್ಕ ಕಪ್ಪು ಹಣ ವಿಷಯವಾಗಿ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಬಿಜೆಪಿ ಪಕ್ಷದಿಂದ ಡಿಸಿ ಕಛೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.

ಕಪ್ಪು ಹಣದ ಕುಬೇರ ಕಾಂಗ್ರೆಸ್ ಪಕ್ಷದಲ್ಲಿ ಮೂರು ಬಾರಿ ರಾಜ್ಯಸಭೆ ಸದಸ್ಯರಾಗಿದ್ದ ಧೀರಜ್ ಸಾಹು ಅವರ ಮನೆಯಲ್ಲಿ ೩೦ ಲಾಕರ್‌ಗಳಲ್ಲಿ ನೋಟಿನ ಕಂತೆಗಳು ಸಿಕ್ಕಿರುವುದು ಭಾರತ ದೇಶದ ಇತಿಹಾಸದಲ್ಲಿ ಈ ವರೆಗಿನ ಅತ್ಯಂತ ಮೊತ್ತವನ್ನು ಐಟಿ ವಿಭಾಗ ಪತ್ತೆಹಚ್ಚಿರುವುದು ಭಯ ಹುಟ್ಟಿಸುವಂತಹ ವಿಷಯವಾಗಿದೆ. ಅಲ್ಲಿ ಸಿಕ್ಕ ಹಣವನ್ನು ಲೆಕ್ಕಹಾಕಲು ತಂದಂತಹ ಯಂತ್ರಗಳು ಸಾಕಾಗಲಿಲ್ಲ. ಈ ಹಣವನ್ನು ತೆಗೆದುಕೊಂಡು ಹೋಗಲು ತೆರಿಗೆ ಇಲಾಖೆಯವರಿಗೆ ೧೫೦ಕ್ಕೂ ಹೆಚ್ಚು ಬ್ಯಾಗ್‌ಗಳು ಬೇಕಾದವು ಎಂದು ಮಾದ್ಯಮಗಳಿಂದ ತಿಳಿದು ತುಂಬಾ ವ್ಯಥೆಯಾಗುತ್ತಿದೆ ಎಂದರು.

ಇವೆಲ್ಲಾ ಗಮನಿಸುತ್ತಿರುವ ಸಾಮಾನ್ಯ ಜನರಲ್ಲಿ ಅಭದ್ರತೆ ಕಾಡುತ್ತಿದೆ. ನಮ್ಮ ದೇಶದ ಅಭಿವೃದ್ಧಿಗೆ ಬಳಸಬೇಕಾದ ಹಣವನ್ನು ಇವರು ಲೂಟಿ ಮಾಡಿ ದೇಶ ವಿರೋಧಿ ಶಕ್ತಿಗಳ ಬಲಪಡಿಸುವ ಕೆಲಸಕ್ಕೆ ಉಪಯೋಗಿಸುವ ಸಾಧ್ಯತೆ ಹೆಚ್ಚು ಇದೆ ಎಂದು ದೂರಿದರು.

ಇವರು ದೇಶದ ಅತ್ಯಂತ ಪ್ರಭಾವಿ ಕುಟುಂಬದ ಕಾಂಗ್ರೆಸ್‌ನ ಸೋನಿಯ ಗಾಂಧಿ ಅವರ ನಿಕಟವರ್ತಿ ಆಗಿದ್ದು, ಕಾನೂನಿಂದ ಸುಲಭವಾಗಿ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ತಾವು ಸಂಬಂಧಪಟ್ಟ ಇಲಾಖೆಗಳಿಗೆ ಎಚ್ಚರಿಕೆ ನೀಡಿ, ತನಿಖೆ ನಡೆಸುವಂತೆ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವಂತೆ ಆದೇಶಿಸಬೇಕೆಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಲೋಹಿತ್ ಜಂಬರ್ಡಿ, ಶರತ್ ಬೂಷಣ್, ಮಣಿಕಂಠ, ವೇಧವತಿ, ರತ್ನಪ್ರಕಾಶ್, ವಿಜಯಲಕ್ಷ್ಮಿ ಅಂಜನಪ್ಪ, ಅನ್ನಪೂರ್ಣ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *